ಕೋಲ್ಕತ್ತಾ: ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕತಾರ್ ಏರ್‌ವೇಸ್ ವಿಮಾನವು(ಕ್ಯೂಆರ್ 541) ದೋಹಾಗೆ ಹಾರಲು ತಯಾರಿ ನಡೆಸುತ್ತಿದ್ದಾಗ ಪ್ರಯಾಣಿಕರೊಬ್ಬರು ಬಾಂಬ್ ಇದೆ ಎಂದು ಆತಂಕ ಸೃಷ್ಟಿಸಿದ ಘಟನೆ ಮಂಗಳವಾರ ನಡೆದಿದೆ.
ಈ ವೇಳೆ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 186 ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಸ್ಥಳಾಂತರಿಸಲಾಯಿತು.
ಸಿಐಎಸ್ಎಫ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿ ಎಲ್ಲರ ಸುರಕ್ಷತೆಯನ್ನು ಖಾತ್ರಿಪಡಿಸಿದ್ದಾರೆ. ಸ್ನಿಫರ್ ಡಾಗ್‌ಗಳ ಮೂಲಕ ವಿಮಾನವನ್ನು ಶೋಧಿಸಲಾಯಿತು. ಆ ಬಳಿಕ ವಿಮಾನದಲ್ಲಿ ಬಾಂಬ್ ಇಲ್ಲದಿರುವುದು ಪತ್ತೆಯಾದ ಬಳಿಕ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ವಿಮಾನದಲ್ಲಿ ಬಾಂಬ್ ಇದೆ ಎಂದು ಹೇಳಲಾದ ವ್ಯಕ್ತಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದರು. ಆದಾಗ್ಯೂ, ವ್ಯಕ್ತಿಯ ತಂದೆ ತನ್ನ ಮಗನ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರು ಮತ್ತು ಪೂರಕ ದಾಖಲೆಗಳನ್ನು ಒದಗಿಸಿದರು.
ಆ ಬಳಿಕ ವಿಮಾನವು ಬೆಳಗ್ಗೆ 9 ಗಂಟೆಗೆ ದೋಹಾಗೆ ಹೊರಟಿತು.