ಕೋಲ್ಕತಾ: ಕೋಲ್ಕತಾದ ಆರ್ ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯೆ(31ವರ್ಷ) ಮೇಲಿನ ಅತ್ಯಾ*ಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಬುಧವಾರ(ಆಗಸ್ಟ್14) ಸಿಬಿಐ (CBI) ಆರಂಭಿಸಿದೆ.
ದೆಹಲಿಯಿಂದ ಸಿಬಿಐ ತಂಡವು ಕೋಲ್ಕತಾದ ನ್ಯೂ ಟೌನ್ ರಾಜರಹತ್‌ನಲ್ಲಿರುವ ಬಿಎಸ್‌ಎಫ್-ದಕ್ಷಿಣ ಬಂಗಾಳದ ಗಡಿರೇಖೆಯ ಅಧಿಕಾರಿಗಳ ಸಂಸ್ಥೆಯನ್ನು ತಲುಪಿದೆ. ದೆಹಲಿಯಿಂದ ವಿಶೇಷ ವೈದ್ಯಕೀಯ ಮತ್ತು ವಿಧಿವಿಜ್ಞಾನ ತಂಡವನ್ನು ಕಳುಹಿಸಲಾಗಿದೆ.
ದೇಶಾದ್ಯಂತ ವ್ಯಾಪಕ ಆಕ್ರೋಶ ಮತ್ತು ಪ್ರತಿಭಟನೆಗಳು ಭುಗಿಲೆದ್ದಿರುವ ವೇಳೆ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರಕ್ಕೆ ಮುಖಭಂಗ ಎಂಬಂತೆ ಸಿಬಿಐ (CBI) ತನಿಖೆ ನಡೆಸಬೇಕೆಂದು ಕೋಲ್ಕತಾ ಹೈಕೋರ್ಟ್ (Calcutta high court) ಮಂಗಳವಾರ (ಆ.13) ಆದೇಶ ನೀಡಿತ್ತು.
ಮಮತಾ ಬ್ಯಾನರ್ಜಿ ವಿರುದ್ಧ ಕಿಡಿ ಕಾರಿದ ಕೇಂದ್ರ ಸಚಿವ
ಕೇಂದ್ರ ಸಚಿವ ನಿತ್ಯಾನಂದ ರಾಯ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿ “ಅತ್ಯಾಚಾರವೆಸಗಿ ವೈದ್ಯೆಯನ್ನು ಹ*ತ್ಯೆಗೈದ್ದು ಅತ್ಯಂತ ದುಃಖಕರ ಘಟನೆ.ಮಮತಾ ಬ್ಯಾನರ್ಜಿ ಸರ್ಕಾರ ಪ್ರಕರಣದ ದಿಕ್ಕು ತಪ್ಪಿಸಲು ಬಯಸಿದ್ದು, ನ್ಯಾಯಾಲಯವು ಈ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿದೆ. ಸಿಬಿಐ ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಕೆಲಸ ಮಾಡುತ್ತೇವೆ’ ಎಂದು ಹೇಳಿಕೆ ನೀಡಿದ್ದಾರೆ.