ಕೊಲ್ಕತ್ತಾ : ಕ್ರಿಯೆಟಿವಿಟಿ ಇದ್ರೆ ಏನನ್ನು ಬೇಕಾದರೂ ಮಾಡಬಹುದು ಎಂಬುದಕ್ಕೆ ನೂರಾರು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಇತ್ತೀಚಿನ ಸ್ಮಾರ್ಟ್ ಫೋನ್ ಯುಗದಲ್ಲಿ ಪುಸ್ತಕಗಳು ಧೂಳು ಹಿಡಿಯುತ್ತಿರುವುದನ್ನು ನಾವು ಗಮನಿಸಬಹುದು. ಎಲ್ಲರೂ ಬರೀ ಫೋನಿನಲ್ಲಿ ಬ್ಯುಸಿ ಇದ್ದಾರೆ. ಓದುವ ಕಡೆ ಗಮನ ಕೊಡುವ ಮಂದಿ ತುಂಬಾ ವಿರಳ. ಆದ್ರೆ ಕೊಲ್ಕತ್ತಾದ ಒಂದು ಜೋಡಿ ಓದುಗರನ್ನು ಸೆಳೆಯಲು ಮತ್ತು ಓದುವ ಹವ್ಯಾಸ ಬೆಳೆಸಲು ವಿನೂತನ ಪ್ರಯತ್ನ ಮಾಡಿದೆ.
ಕೊಲ್ಕತ್ತಾದ ಐತಿಹಾಸಿಕ ಕಾಲೇಜ್ ಸ್ಟ್ರೀಟ್ ಭಾರತದ ಅತಿದೊಡ್ಡ ಪುಸ್ತಕ ಮಾರುಕಟ್ಟೆಯಾಗಿದೆ. ಈ ಬೀದಿಗೆ ‘ಬೋಯಿ ಪ್ಯಾರಾ’ ಅಥವಾ ‘ಬುಕ್ ಟೌನ್’ ಎಂಬ ಹೆಸರನ್ನೂ ಇಡಲಾಗಿದೆ. ಈ ಕಿಲೋಮೀಟರ್ ಉದ್ದದ ರಸ್ತೆಯಲ್ಲಿ ನೂರಾರು ಪುಸ್ತಕ ಮಳಿಗೆಗಳಿವೆ. ಇಲ್ಲಿನ ಜನರಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಹೆಚ್ಚಿಸಲು ಮತ್ತು ಬೆಳೆಸಲು ಕೊಲ್ಕತ್ತಾ ದಂಪತಿಗಳು ಈಗ ಒಂದು ವಿಶಿಷ್ಟ ಐಡಿಯಾವನ್ನು ಮಾಡಿದ್ದು, ಫ್ರಿಡ್ಜ್ ನಿಂದ ರಸ್ತೆ ಗ್ರಂಥಾಲಯವನ್ನು ತೆರೆದಿದ್ದಾರೆ.
ಕಾಳಿದಾಸ್ ಹಲ್ದಾರ್ ಮತ್ತು ಕುಮ್ಕುಮ್ ಹಲ್ದಾರ್ ದಂಪತಿ ಈ ಫ್ರಿಡ್ಜ್ ಗ್ರಂಥಾಲಯವನ್ನು ತೆರೆದಿದ್ದು, ಓದುಗರಿಗೆ ಪುಸ್ತಕಗಳನ್ನು ಉಚಿತವಾಗಿ ನೀಡುತ್ತಾರೆ. ಓದಿದ ನಂತ ಆ ಪುಸ್ತಕಗಳನ್ನು ಮರಳಿ ಕೊಡಬೇಕು. ತಾರಪೋಧ್ ಕಹಾರ್ ಎಂಬುವವರ ಕಿರಾಣಿ ಅಂಗಡಿ ಮುಂದೆ ಈ ಪುಟ್ಟ ಗ್ರಂಥಾಲಯವನ್ನು ಗಮನಿಸಬಹುದು. ಫ್ರಿಡ್ಜ್ ಅನ್ನು ಪುಸ್ತಕ ಜೋಡಿಸುವ ಕಪಾಟಾಗಿ ಮಾರ್ಪಾಡು ಮಾಡಿ ಪುಸ್ತಕಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ದಂಪತಿ, ಒಂದು ತಿಂಗಳವರೆಗೆ ಯಾರು ಬೇಕಾದರೂ ಪುಸ್ತಕಗಳನ್ನು ಕೊಂಡೊಯ್ದು ಓದಿ ನಂತರ ವಾಪಸ್ಸು ಕೊಡಬಹುದು. ಪುಸ್ತಕಗಳು ನಮ್ಮನ್ನು ವೈದ್ಯರಿಂದ ದೂರ ಇಡುತ್ತವೆ ಎನ್ನುವ ಇವರು, ಬುಕ್ ಓದುವ ಹವ್ಯಾಸ ಮತ್ತು ಪುಸ್ತಕಗಳ ಮೇಲಿನ ಪ್ರೀತಿಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಪ್ರಯತ್ನ ಮಾಡಿರುವುದಾಗಿ ತಿಳಿಸಿದ್ದಾರೆ.
ಪುಸ್ತಕಗಳನ್ನು ಓದುವುದರಿಂದ ಕೇವಲ ಜ್ಞಾನಾರ್ಜನೆಯಾಗುವುದಿಲ್ಲ, ಬದಲಾಗಿ ನಮ್ಮ ಏಕಾಗ್ರತೆ ಕೂಡ ಹೆಚ್ಚಾಗುತ್ತದೆ ಎಂದು ಕಾಳಿದಾಸ್ ಹಲ್ದಾರ್ ಮತ್ತು ಕುಮ್ಕುಮ್ ಹಲ್ದಾರ್ ದಂಪತಿ ಹೇಳುತ್ತಾರೆ. ಅತಿಯಾಗಿ ಫೋನಿನಲ್ಲೇ ಮುಳುಗಿರುವ ಈಗಿನ ಮಂದಿ ಓದುವುದನ್ನೇ ಮರೆತಿದ್ದಾರೆ. ಇದನ್ನು ಗಮನಿಸಿದ ನಾವು ಓದುವ ಹವ್ಯಾಸ ಬೆಳೆಸಬೇಕೆಂಬ ಹಂಬಲದಿಂದ ಈ ಪ್ರಯತ್ನ ಮಾಡಿರುವುದಾಗಿ ತಿಳಿಸಿದ್ದಾರೆ.