ಕೋಲ್ಕತ್ತಾ: ಇತ್ತೀಚೆಗೆ ದೇಶದ ಗಮನ ಸೆಳೆದ ಟ್ರೈನಿ ವೈದ್ಯೆ ಅತ್ಯಾಚಾರ- ಕೊಲೆ ಪ್ರಕರಣದಲ್ಲಿ ಆರ್.ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಈ ಹಿಂದಿನ ಪ್ರಾಂಶುಪಾಲ ಸಂದೀಪ್ ಘೋಷ್ (Sandip Ghosh) ಅವರ ಮನೆಯಲ್ಲಿ ಕೇಂದ್ರೀಯ ತನಿಖಾ ದಳ (CBI) ಶೋಧ ಕಾರ್ಯಗಳನ್ನು ಭಾನುವಾರ ಆರಂಭಿಸಿದೆ. ಸಂದೀಪ್ ಅಲ್ಲದೆ 14 ಜನರ ಮನೆ ಮೇಲೆ ಸಿಬಿಐ ದಾಳಿ ಮಾಡಿದೆ.
ಆಸ್ಪತ್ರೆಯಲ್ಲಿ ಹಣಕಾಸಿನ ಅವ್ಯವಹಾರ ನಡೆದಿದೆ ಎಂಬ ಆರೋಪದ ತನಿಖೆಯ ಭಾಗವಾಗಿ ಸಿಬಿಐ ಈ ದಾಳಿ ನಡೆಸಿದೆ. ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳವು ರೋಗಿಗಳ ಆರೈಕೆ ಮತ್ತು ನಿರ್ವಹಣಾ ಸಾಮಗ್ರಿಗಳನ್ನು ಒದಗಿಸುವಲ್ಲಿ ತೊಡಗಿರುವವರ ಮನೆ ಮತ್ತು ಕಚೇರಿಗಳನ್ನು ಸಹ ಪರಿಶೀಲಿಸುತ್ತಿದೆ.
ಬೆಲಿಘಟಾ ರೆಸಿಡೆನ್ಸ್ ನಲ್ಲಿರುವ ಸಂದೀಪ್ ಘೋಷ್ ಅವರ ನಿವಾಸದಲ್ಲಿ ಬೆಳಗ್ಗೆ 8 ಗಂಟೆಯಿಂದ ಸಿಬಿಐ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಇತರರು ಆಸ್ಪತ್ರೆಯ ಮಾಜಿ ವೈದ್ಯಕೀಯ ಸೂಪರಿಂಟೆಂಡೆಂಟ್ ಮತ್ತು ಉಪ-ಪ್ರಾಂಶುಪಾಲರಾದ ವಶಿಷ್ಠ ಅವರರನ್ನು ಮತ್ತೊಬ್ಬ ವಿಧಿವಿಜ್ಞಾನ ವಿಭಾಗದ ಪ್ರಾಧ್ಯಾಪಕರೊಂದಿಗೆ ಪ್ರಶ್ನಿಸುತ್ತಿದ್ದಾರೆ.
ಕೇಂದ್ರೀಯ ದಳದ ದೊಡ್ಡ ಬೆಂಗಾವಲು ಪಡೆಯೊಂದಿಗೆ ಸಿಬಿಐ ಅಧಿಕಾರಿಗಳು ಬೆಳಗ್ಗೆ 6 ಗಂಟೆಗೆ ಸಂದೀಪ್ ಘೋಷ್ ಅವರ ನಿವಾಸಕ್ಕೆ ಆಗಮಿಸಿದ್ದರು. ಅವರ ನಿವಾಸದ ಎದುರು ಒಂದೂವರೆ ಗಂಟೆಗೂ ಹೆಚ್ಚು ಸಮಯ ಕಾದು ಕುಳಿತಿದ್ದರು ಎಂದು ವರದಿ ಹೇಳಿದೆ.
ಸಿಬಿಐ ಅಧಿಕಾರಿಗಳು ಘೋಷ್ ಅವರ ಆಸ್ಪತ್ರೆಯ ಕಚೇರಿ ಮತ್ತು ಅಕಾಡೆಮಿಕ್ ಬಿಲ್ಡಿಂಗ್ ಕ್ಯಾಂಟೀನ್ ನಲ್ಲಿ ಶೋಧ ನಡೆಸಿದ್ದಾರೆ.