Advertisement

ಕೋಲ್ಕತಾ ರಣರಂಗ

02:50 AM Jun 13, 2019 | Sriram |

ಕೋಲ್ಕತಾ: ಪಶ್ಚಿಮ ಬಂಗಾಲದಲ್ಲಿ ಲೋಕಸಭೆ ಚುನಾವಣೆ ಬಳಿಕ ನಡೆದ ಹಿಂಸಾಚಾರ ಖಂಡಿಸಿ ಬಿಜೆಪಿ ಬುಧವಾರ ಆಯೋಜಿಸಿದ್ದ ಪ್ರತಿಭಟನೆ ಹಿಂಸಾರೂಪ ಪಡೆದಿದೆ. ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದು, ಕೋಲಾಹಲವೇ ನಡೆದಿದೆ. ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗ ನಡೆಸಿದ್ದಾರೆ. ಅದಕ್ಕೂ ಬಗ್ಗದೇ ಇದ್ದಾಗ, ಜಲಫಿರಂಗಿ ಪ್ರಯೋಗಿಸಲಾಗಿದೆ. ಈ ಸಂದರ್ಭದಲ್ಲಿ ಹಲವು ಮುಖಂಡರು ಗಾಯಗೊಂಡಿದ್ದಾರೆ. ಇದರಿಂದಾಗಿ ಪಕ್ಷದ ನಾಯಕರಾದ ಮುಕುಲ್ ರಾಯ್‌, ರಾಜು ಬ್ಯಾನರ್ಜಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗಾಗಿ, ಬಿಜೆಪಿ-ಟಿಎಂಸಿ ಘರ್ಷಣೆ ಮತ್ತೂಂದು ಮಜಲು ಪ್ರವೇಶಿಸಿದೆ.


Advertisement

ನೂತನವಾಗಿ ಆಯ್ಕೆಯಾಗಿರುವ 18 ಮಂದಿ ಸಂಸದರೂ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕೋಲ್ಕತಾದ ಬೋಬಜಾರ್‌ ಪ್ರದೇಶಕ್ಕೆ ಮೆರವಣಿಗೆ ಪ್ರವೇಶಿಸುತ್ತಿದಂತೆಯೇ ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಇದರಿಂದ ಕ್ರುದ್ಧಗೊಂಡ ಬಿಜೆಪಿ ಕಾರ್ಯಕರ್ತರು ಪೊಲೀಸರತ್ತ ಕಲ್ಲು, ಬಾಟಲ್ಗಳನ್ನು ಎಸೆಯಲಾರಂಭಿಸಿದರು. ಆದರೆ ಬಿಜೆಪಿ ನಾಯಕರ ಪ್ರಕಾರ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆ. ಪಕ್ಷದ ಕಾರ್ಯಕರ್ತರು ಅದರಲ್ಲಿ ಭಾಗಿಯಾಗಿಲ್ಲ ಎಂದಿದ್ದಾರೆ.

ಪೊಲೀಸರ ವರ್ತನೆ ಖಂಡಿಸಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗೀಯ, ಪಶ್ಚಿಮ ಬಂಗಾಲ ಬಿಜೆಪಿ ಅಧ್ಯಕ್ಷ ದಿಲೀಪ್‌ ಘೋಶ್‌ ಪ್ರತಿಭಟನೆ ನಡೆಸಿದರು. ಬಳಿಕ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಹಲವಾರು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದೇ ವೇಳೆ ಪಶ್ಚಿಮ ಬಂಗಾಲದ ಬಿರ್‌ಭುಮ್‌ ಜಿಲ್ಲೆಯ ಬಂದಾರ್‌ ಗ್ರಾಮದಲ್ಲಿ ಬಿಜೆಪಿ-ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಈ ಸಂದರ್ಭದಲ್ಲಿ ಪೊಲೀಸರ ಮೇಲೂ ದಾಳಿ ನಡೆಸಲಾಗಿದೆ.

ಇಂದು ರಾಜ್ಯಪಾಲರ ನೇತೃತ್ವದಲ್ಲಿ ಸಭೆ
ರಾಜ್ಯಪಾಲ ಕೆ.ಎನ್‌. ತ್ರಿಪಾಠಿ ನೇತೃತ್ವದಲ್ಲಿ ಕೋಲ್ಕತಾದ ರಾಜಭವನದಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಸಭೆಯನ್ನು ಗುರುವಾರ ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ. ಬಿಜೆಪಿ, ಕಾಂಗ್ರೆಸ್‌, ಟಿಎಂಸಿ, ಸಿಪಿಎಂ ನಾಯಕರಿಗೆ ರಾಜಭವನದಿಂದ ಸಭೆ ನಡೆಯುವ ಬಗ್ಗೆ ಪತ್ರ ರವಾನೆಯಾಗಿದೆ. ಬಿಜೆಪಿ ಮತ್ತು ಟಿಎಂಸಿ ನಾಯಕರು ಅದರಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್‌ ಮತ್ತು ಸಿಪಿಎಂ ಪತ್ರ ಬಂದಿರುವುದನ್ನು ದೃಢೀಕರಿಸಿವೆ.

Advertisement

ರಾಜ್ಯದಲ್ಲಿ ಬಿಜೆಪಿ ಶಕ್ತಿ ವೃದ್ಧಿಯಾಗುತ್ತಿರುವುದರಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರು ನಮ್ಮನ್ನು ತಡೆಯಲು ಹಿಂಸಾತ್ಮಕ ರಾಜಕೀಯ ಕೈಗೆತ್ತಿಕೊಂಡಿದ್ದಾರೆ.
-ಕೈಲಾಶ್‌ ವಿಜಯವರ್ಗೀಯ, ಬಿಜೆಪಿ ನಾಯಕ

ಪಶ್ಚಿಮ ಬಂಗಾಲದಲ್ಲಿನ ಶಾಂತಿಯುತ ವಾತಾವರಣ ಕದಡಲು ಬಿಜೆಪಿ ಮುಂದಾಗುತ್ತಿದೆ. ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದಿದ್ದಾರೆ ಎಂದಾಕ್ಷಣ ಅವರು ಏನುಬೇಕಾದರೂ ಮಾಡಹುದು ಎಂದರೆ ಒಪ್ಪಲಾಗದು.
-ಪಾರ್ಥ ಚಟರ್ಜಿ, ಟಿಎಂಸಿ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next