ಕೋಲ್ಕತಾ: ಅತ್ಯಾ*ಚಾರ ಮತ್ತು ಹ*ತ್ಯೆಗೀಡಾದ ಟ್ರೈನಿ ವೈದ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ದೇಹದಲ್ಲಿ 150 ಗ್ರಾಂ ವೀರ್ಯ ಕಂಡು ಬಂದಿತ್ತು ಎಂಬ ವದಂತಿ ಗಳು ಹಬ್ಬಿದ್ದವು. ಇದಕ್ಕೆ ಸ್ಪಷ್ಟನೆ ನೀಡಿರುವ ವೈದ್ಯರೊಬ್ಬರು, ಮರಣೋತ್ತರ ಪರೀಕ್ಷಾ ವರದಿಯಲ್ಲಿ 150 ಗ್ರಾಂ ಎಂದಿರುವುದು ಗರ್ಭಾಶಯದ ತೂಕವೇ ಹೊರತು, ಯಾವುದೇ ದ್ರವದ ತೂಕವಲ್ಲ ಎಂದಿದ್ದಾರೆ.
ಇಂತಹ ಪ್ರಕರಣಗಳಲ್ಲಿ ಒಳ ಅಂಗಗಳ ತೂಕವನ್ನು ವರದಿಯಲ್ಲಿ ನಮೂದಿಸಲಾಗುತ್ತದೆ. ಹೀಗಾಗಿ ಇದು ಗರ್ಭಾಶಯದ ಅಂಗರಚನಾಶಾಸ್ತ್ರದ ಅಳತೆಯಾಗಿದೆ. ಯಾವುದೇ ದ್ರವವಲ್ಲ ಎಂದಿದ್ದಾರೆ. ಘಟನೆ ನಡೆದ 5 ಗಂಟೆಗಳ ಬಳಿಕ ವಿಧಿವಿಜ್ಞಾನ ಪ್ರಯೋಗಾಲಯದ ಸಿಬಂದಿ ಭೇಟಿ ಕೊಟ್ಟಿದ್ದರು. ಹೀಗಾಗಿ ಯಾವುದೇ ದ್ರವ ವಸ್ತು, ಅದೇ ಸ್ಥಿತಿಯಲ್ಲಿ ಉಳಿದುಕೊಳ್ಳುವುದು ಅಸಾಧ್ಯ ಎನ್ನಲಾಗಿದೆ.
ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ದೀದಿ ರ‍್ಯಾಲಿ
ವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ಪಶ್ಚಿಮ ಬಂಗಾಲದ ಸಿಎಂ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಸಂಜೆ ಕೋಲ್ಕತಾದಲ್ಲಿ ರ‍್ಯಾಲಿ ನಡೆಸಿದರು. ಈ ವೇಳೆ ಮಾತನಾಡಿದ ಮಮತಾ ಬ್ಯಾನರ್ಜಿ, ಟ್ರೈನಿ ವೈದ್ಯೆ ರೇಪ್ ಮತ್ತು ಹತ್ಯೆ ಖಂಡಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದು ಸರಿಯಾಗಿದೆ. ಅವರಿಗೆ ನಾನು ಸೆಲ್ಯೂಟ್ ಮಾಡುತ್ತೇನೆ ಎಂದು ಹೇಳಿದರು. ಇದೇ ವೇಳೆ ಅವರು ಆರ್.ಜಿ.ಕಾರ್ ಆಸ್ಪತ್ರೆ ಧ್ವಂಸಕ್ಕೆ ಬಿಜೆಪಿ ಮತ್ತು ಸಿಪಿಎಂ ಕಾರಣ ಎಂದು ಆರೋಪಿಸಿದರು. ಇದಕ್ಕೂ ಮೊದಲು ರವಿವಾರದೊಳಗೇ ಸಿಬಿಐ ತನ್ನ ತನಿಖೆಯನ್ನು ಪೂರ್ಣಗೊಳಿಸಿ, ಅಪರಾಧಿಗಳನ್ನು ಗಲ್ಲಿಗೆ ಹಾಕಬೇಕು ಎಂದು ಆಗ್ರಹಿಸಿದ್ದಾರೆ. ರ್ಯಾಲಿಯ ವೇಳೆ ಟಿಎಂಸಿಯ ಮಹಿಳಾ ಸಂಸದರು, ಗಲ್ಲು ಶಿಕ್ಷೆ ನೀಡಿ ಎಂದು ಘೋಷಣೆಗಳನ್ನು ಕೂಗಿದರು.