Advertisement

ಕೋಳಿಕೇರಿ ಕೊಳಕು ಕೆರೆಯ ಅಳಲು

10:40 AM Dec 06, 2019 | Team Udayavani |

ಧಾರವಾಡ: ನಲವತ್ತೆರಡು ಎಕರೆ ವ್ಯಾಪ್ತಿಯ ಕೆರೆಯ ತುಂಬೆಲ್ಲಾ ಬರೀ ಚರಂಡಿ ನೀರಿನ ಗಬ್ಬು ನಾತ. ಈ ಚರಂಡಿ ನೀರಿನಲ್ಲಿಯೇ ಆವರಿಸಿದೆ ಕಸಕಳೆ. ಎಕರೆಯಷ್ಟು ಕೆರೆಯ ಒತ್ತುವರಿ. ಅಮೃತ ಯೋಜನೆಯ ಕಾಮಗಾರಿಯದ್ದೂ ಆಮೆಗತಿ. ಇದು ನಗರದ ವಾರ್ಡ್‌ ನಂ. 9ರ ಕೋಳಿಕೇರಿ ಕೆರೆಯ ಕಥೆವ್ಯಥೆ.

Advertisement

ಕೆರೆಗೆ ಹೊಂದಿರುವ ಜನ್ನತನಗರ, ಹೊಸಯಲ್ಲಾಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಈ ಕೆರೆಯ ಗಬ್ಬುನಾತ ಮೂಗಿಗೆ ತಟ್ಟಲಾರದೇ ಇರದು. ಈ ಭಾಗದಿಂದಷ್ಟೇ ಅಲ್ಲದೇ ಧಾರವಾಡದ ಬಹುತೇಕಒಳಚರಂಡಿ ನೀರೆಲ್ಲ ಬಂದು ಸೇರೋದು ಇಲ್ಲಿಯೇ. ಕೆರೆಯ ಸುತ್ತಲೂ ವಾಸಿಸುವ ಜನರ ಪಾಡಂತೂ ಕೇಳ್ಳೋದೇ ಬೇಡ. ಗಬ್ಬು ನಾತದ ಮಧ್ಯೆಯೇ ಜೀವನ ನಡೆಸುವ ಕೆರೆ ಹತ್ತಿರದ ನಿವಾಸಿಗಳಿಗೆ ಹಾವು, ಜೀವ ಜಂತುಗಳ ಕಾಟ ತಪ್ಪಿಲ್ಲ. ಕೆರೆ ಅಭಿವೃದ್ಧಿಗಾಗಿ ಸಾಕಷ್ಟು ಹೋರಾಟ ನಡೆದು ಒಂದಿಷ್ಟು ಯೋಜನೆ ಸಿದ್ಧಪಡಿಸಿದರೂ ಧೂಳು ತಿನ್ನುವಂತಾಗಿದೆ.

ಬೃಂದಾವನ ಯೋಜನೆ ನನೆಗುದಿಗೆ: ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಈ ಕೆರೆಯನ್ನು ಬೃಂದಾವನ ಮಾಡಲು ಹಿಂದಿನ ಶಾಸಕರಾಗಿದ್ದ ವಿನಯ ಕುಲಕರ್ಣಿ ಕನಸು ಕಂಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ 23 ಕೋಟಿ ಯೋಜನೆ ಸಿದ್ಧಪಡಿಸಿದ್ದು, ಒಂದಿಷ್ಟು ಕಾಮಗಾರಿ ಕೈಗೊಳ್ಳಲು ಅಮೃತ ಯೋಜನೆಯಡಿ ಅನುದಾನ ಬಿಡುಗಡೆ ಮಾಡಿಸಿದ್ದರು. ಆದರೆ ಅವರ ಬಳಿಕ ಆಯ್ಕೆಯಾದ ಶಾಸಕ ಅಮೃತ ದೇಸಾಯಿ ಕೆರೆ ಅಭಿವೃದ್ಧಿಯತ್ತ ಲಕ್ಷ್ಯ ವಹಿಸದ ಪರಿಣಾಮ ಕಾಮಗಾರಿಗಳು ಹಳ್ಳ ಹಿಡಿಯುವಂತಾಗಿದೆ. ಇದಲ್ಲದೇ 23 ಕೋಟಿ ಮೊತ್ತದ ಬೃಂದಾವನ ಯೋಜನೆಯೂ ಧೂಳು ತಿನ್ನುವಂತಾಗಿದೆ.

ಕಾಮಗಾರಿಗಳ ಆಮೆಗತಿ: ಅಮೃತ ಯೋಜನೆಯಡಿ 1.95 ಕೋಟಿ ರೂ.ಗಳಲ್ಲಿ ಕೆರೆಯ ಅಭಿವೃದ್ಧಿ ಕೆಲಸ ಆರಂಭಿಸಿ ಒಂದೂವರೆ ವರ್ಷವಾದರೂ ಕಾಮಗಾರಿಗಳಿಗೆ ವೇಗ ಸಿಕ್ಕಿಲ್ಲ. ಈವರೆಗೆ ಶೇ.30 ಕಾಮಗಾರಿಯಷ್ಟೇ ಪೂರ್ಣಗೊಂಡಿದೆ.

ಕಾಮಗಾರಿಗಳಿಗೆ ವೇಗ ನೀಡುವ ಕೆಲಸ ಜನಪ್ರತಿನಿಧಿಗಳಿಂದ ಆಗುತ್ತಿಲ್ಲ. ಪಾಲಿಕೆ ಸದಸ್ಯರು ಮಾಜಿ ಆಗಿರುವ ಕಾರಣ ಇತ್ತ ಲಕ್ಷ್ಯ ವಹಿಸದೇ ಸುಮ್ಮನಾಗಿದ್ದರೆ, ಶಾಸಕರೂ ಗಮನ ಹರಿಸುತ್ತಿಲ್ಲ. ಕಾಮಗಾರಿಗಳಿಗೆ ವೇಗ ದೊರೆಯುವಂತೆ ಮಾಡುವುದರ ಜೊತೆಗೆ ಬೃಂದಾವನ ಯೋಜನೆಗೆ ಮತ್ತೆ ಚಾಲನೆ ಸಿಗುವಂತೆ ಮಾಡಬೇಕಿದೆ. ಕೆರೆ ಒತ್ತುವರಿ ತೆರವು ಮಾಡಿ, ಒಳಚರಂಡಿ ನೀರು ಸೇರದಂತೆ ಅಥವಾ ಚರಂಡಿ ನೀರು ಶುದ್ಧೀಕರಿಸಿ ಬಿಡುವಂತೆ ಮಾಡಲು ಘಟಕ ನಿರ್ಮಾಣಕ್ಕೆ ಬೇಡಿಕೆ ಇದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈ ನಿಟ್ಟಿನಲ್ಲಿ ಇಚ್ಛಾಶಕ್ತಿ ತೋರಬೇಕಿದೆ.

Advertisement

33 ಗುಂಟೆ ಜಾಗ ಒತ್ತುವರಿ: ಕೆರೆಯ 42 ಎಕರೆಯಲ್ಲಿ 33 ಗುಂಟೆ ಜಾಗ ಒತ್ತುವರಿ ಆಗಿದ್ದು, ಇದು ತೆರವಾಗಬೇಕಿದೆ. ಪಾಲಿಕೆ ಒಂದು ವರ್ಷದಿಂದ ಸರ್ವೇ ಮಾಡುತ್ತಿದ್ದರೂ ಆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಕೆರೆಗೆ ಅಂತಿಮ ಗೆರೆ ಹಾಕಲು ಸಿಟಿ ಸರ್ವೇ ಅಧಿಕಾರಿಗಳ ಪೂರ್ಣ ಸಹಕಾರ ಬೇಕಿದೆ. ಸದ್ಯ ಕೆರೆಯ ಸ್ಮಶಾನ ಭಾಗದ ಕಡೆ 17 ಮನೆಗಳು ಕೆರೆಯ ಜಾಗದಲ್ಲಿ ನಿರ್ಮಾಣ ಆಗಿದ್ದು, ಕರೆಮ್ಮನ ಗುಡಿ ಹಾಗೂ ಹೊಸಯಲ್ಲಾಪುರ ಕಡೆ ಗುರುತಿಸುವ ಕಾರ್ಯ ಸಾಗಿದೆ. ಆದಷ್ಟು ಬೇಗ ಸರ್ವೇ ಕಾರ್ಯ ಮುಗಿಸಿ ಒತ್ತುವರಿ ತೆರವು ಕೆಲಸವೂ ಆಗಬೇಕಿದೆ.

ಅಮೃತ ಯೋಜನೆಯಡಿ 1.95 ಕೋಟಿ ವೆಚ್ಚದಲ್ಲಿ ಕಾಮಗಾರಿ
ಕೈಗೊಂಡು ಕೆರೆ ಅಭಿವೃದ್ಧಿ ಮಾಡಲಾಗುತ್ತಿದೆ. ಈವರೆಗೆ ಶೇ.30 ಕಾಮಗಾರಿ ಆಗಿದೆ. ಕೆರೆಯ ಒತ್ತುವರಿ ಗುರುತಿಸಲಾಗಿದ್ದು,
ಸರ್ವೇ ಅಂತಿಮ ಹಂತದಲ್ಲಿದೆ. ಅದು ಪೂರ್ಣಗೊಂಡ ಬಳಿಕ ಒತ್ತುವರಿ ಮಾಡಿದವರಿಗೆ ನೋಟಿಸ್‌  ಜಾರಿಗೊಳಿಸಿ ಒತ್ತುವರಿ ತೆರವು ಕಾರ್ಯಾಚರಣೆಗೂ  ಚಾಲನೆ ನೀಡಲಾಗುವುದು.
ಸುರೇಶ ಇಟ್ನಾಳ, -ಆಯುಕ್ತ, ಹು-ಧಾ ಮಹಾನಗರ ಪಾಲಿಕೆ

 

-ಶಶಿಧರ್‌ ಬುದ್ನಿ

Advertisement

Udayavani is now on Telegram. Click here to join our channel and stay updated with the latest news.

Next