ಕೊಲ್ಹಾರ: ತಾಲೂಕಿನ ಕೂಡಗಿ ಎನ್‌ಟಿಪಿಸಿ ಪೊಲೀಸ್ ಠಾಣೆ ಹವಾಲ್ದಾರ್‌ರೊಬ್ಬರಿಗೆ ಶನಿವಾರ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದ್ದು ಠಾಣೆಯಲ್ಲಿ ಕಾರ್ಯ ನಿರ್ವಹಿಸುವ 34 ಪೊಲೀಸ್ ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಪಿಎಸೈ ರೇಣುಕಾ ಜಕನೂರ ಮತ್ತು ಅವರ ಕಾರು ಚಾಲಕನ ಸ್ವಾಬ್ ಮತ್ತಿತರ ಪರೀಕ್ಷೆ ನಡೆಸಲಾಗುತ್ತಿದ್ದು, ನಿಡಗುಂದಿ ಪೊಲೀಸ್ ಠಾಣೆಗೆ ಎನ್‌ಟಿಪಿಸಿ ಠಾಣೆ ಕಾರ್ಯ ಚಟುವಟಿಕೆಗಳೆಲ್ಲ ವರ್ಗಾವಣೆಗೊಳ್ಳಲಿವೆ. ಹವಾಲ್ದಾರ್‌ಗೆ ಸೋಂಕು ದೃಢಪಟ್ಟ ನಂತರ ಎನ್‌ಟಿಪಿಸಿ ಪೊಲೀಸ್ ಠಾಣೆ ಸುತ್ತಮುತ್ತ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಯಿತು. ಕೊಲ್ಹಾರ-ಬಸವನಬಾಗೇವಾಡಿ ರಸ್ತೆಯ 18ನೇ ಕ್ರಾಸ್ ಬಳಿಯ ಪ್ರದೇಶದಲ್ಲಿ ಎಲ್ಲ ಅಂಗಡಿ-ಮುಂಗಟ್ಟುಗಳನ್ನೆಲ್ಲ ಸಾಮೂಹಿಕವಾಗಿ ಬಂದ್ ಮಾಡಲಾಗಿದೆ. ಕೂಡಗಿ ಎನ್‌ಟಿಪಿಸಿ ಉಷ್ಣ ವಿದ್ಯುತ್ ಸ್ಥಾವರದ ಐಜಾಕ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹಾರಾಷ್ಟ್ರ ಮೂಲದ ಕಾರ್ಮಿಕನೋರ್ವನಿಗೂ ಶುಕ್ರವಾರ ಕೊರೊನಾ ಸೋಂಕು ದೃಢಪಟ್ಟಿದೆ.
ಜೂ. 29ರಂದು ಬಸವನಬಾಗೇವಾಡಿಯಲ್ಲಿ ತಪಾಸಣೆಗೊಳಪಟ್ಟಿದ್ದ ಕಾರ್ಮಿಕ ಅದೇ ದಿನ ಮಹಾರಾಷ್ಟ್ರದ ಮೀರಜ್‌ಗೆ ಪ್ರಯಾಣ ಬೆಳೆಸಿದ್ದಾನೆ. 30ರಂದು ಅಲ್ಲಿ ಪುನಃ ಆರೋಗ್ಯ ತಪಾಸಣೆಗೊಳಪಟ್ಟಾಗ ಕೋವಿಡ್-19 ಸೋಂಕು ದೃಢಪಟ್ಟಿದೆ. ಏತನ್ಮಧ್ಯೆ ತೆಲಗಿ ಲಂಬಾಣಿ ತಾಂಡಾದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಈತನ ಪಕ್ಕದ ಮನೆಯ ಇಬ್ಬರು ವ್ಯಕ್ತಿಗಳನ್ನು ಕೊಲ್ಹಾರದ ರಾಣಿ ಚನ್ನಮ್ಮ ಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಿಸಲಾಗಿದೆ.
ಸೋಂಕು ತಗುಲಿದ ಕಾರ್ಮಿಕ ವಾರದಿಂದ ಸ್ಥಾವರಕ್ಕೆ ಕಾಲಿಟ್ಟಿಲ್ಲ. ಮೇಲಾಗಿ ಆತ ಮಹಾರಾಷ್ಟ್ರಕ್ಕೆ ಹೋದ ಬಳಿಕ ಸೋಂಕು ದೃಢಪಟ್ಟಿದೆ. ಹೀಗಾಗಿ ಸೋಂಕಿತ ವ್ಯಕ್ತಿಗೂ ಸ್ಥಾವರದ ಸುರಕ್ಷತೆಗೂ ಯಾವುದೇ ಹೋಲಿಕೆ ಸಲ್ಲದು.
ಪಿ.ಎ. ಜಾನ್
ಪಿಆರ್‌ಒ, ಎನ್‌ಟಿಪಿಸಿ ಕೂಡಗಿ