Advertisement

ಜಿಲ್ಲೆ ಮೇಲೆ ಮತ್ತೆ ಆವರಿಸಿದ ಬರದ ಕಾರ್ಮೋಡ

03:59 PM Aug 29, 2019 | Team Udayavani |

ಕೋಲಾರ: ಸತತವಾಗಿ ಬರಗಾಲ ಎದುರಿಸುತ್ತಿರುವ ಕೋಲಾರ ಜಿಲ್ಲೆಯ ಮೇಲೆ ಈ ಸಾಲಿನಲ್ಲಿಯೂ ಬರದ ಛಾಯೆ ಆವರಿಸುತ್ತಿರುವುದು ಸ್ಪಷ್ಟವಾಗುತ್ತಿದೆ.

Advertisement

ಮುಂಗಾರು ಅವಧಿ ಮುಗಿಯುತ್ತಿದ್ದರೂ ಜಿಲ್ಲೆಯ ಒಟ್ಟು ಕೃಷಿ ಭೂಮಿಯಲ್ಲಿ ಕೇವಲ ಶೇ.65.1 ರಷ್ಟು ಮಾತ್ರವೇ ಬಿತ್ತನೆ ಮಾಡಲು ಸಾಧ್ಯವಾಗಿದೆ. ಜಿಲ್ಲೆಯಲ್ಲಿ ಒಟ್ಟು 1.02 ಲಕ್ಷ ಹೆಕ್ಟೇರ್‌ ಕೃಷಿ ಭೂಮಿ ಇದ್ದು, ಈ ಪೈಕಿ ಕೇವಲ 66,409 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ನಡೆದಿದೆ. ಮುಂಗಾರು ಅವಧಿ ಮುಗಿಯುತ್ತಿರುವುದರಿಂದ ಇನ್ನುಳಿದ ಶೇ.35 ಪ್ರದೇಶ ಬಿತ್ತನೆಯಿಂದ ಅನಿವಾರ್ಯವಾಗಿ ಹೊರಗುಳಿಯುವಂತಾಗಿದೆ. ಈಗ ಬಿತ್ತನೆ ಆಗಿರುವ ಪ್ರದೇಶದಲ್ಲಿಯೂ ಬೆಳೆ ನಿರೀಕ್ಷಿಸಬೇಕಾದರೆ ಮುಂದಿನ ದಿನಗಳಲ್ಲಿ ಮಳೆ ಸಕಾಲದಲ್ಲಿ ಸುರಿಯಲೇಬೇಕು ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ಹಿಂದಿನ 3 ಅವಧಿಗಳಿಗೆ ಹೋಲಿಸಿದರೆ 2016-17 ನೇ ಸಾಲಿನಲ್ಲಿಯೂ ಕೋಲಾರ ಜಿಲ್ಲೆ ಬರಪೀಡಿತವಾಗಿತ್ತು, 2017-18 ರಲ್ಲಿ ಬರ ಇದ್ದರೂ ರಾಗಿ ಬೆಳೆಗೆ ತೊಂದರೆಯಾಗಿರಲಿಲ್ಲ, ಇದೀಗ 2018-19 ನೇ ಸಾಲಿನಲ್ಲಿ ಮತ್ತೇ ಬರದ ಛಾಯೆ ಆವರಿಸಿಕೊಳ್ಳುತ್ತಿರುವುದು ರೈತರನ್ನು ಚಿಂತಾಕ್ರಾಂತರನ್ನಾಗಿಸಿದೆ.

ಬಿತ್ತನೆ ಕೃಷಿ ಪ್ರದೇಶ: ಕೋಲಾರ ಜಿಲ್ಲೆಯಲ್ಲಿ 8710 ಹೆಕ್ಟೇರ್‌ ನೀರಾವರಿ ಕೃಷಿ ಭೂಮಿ, 93290 ಹೆಕ್ಟೇರ್‌ ಮಳೆಯಾಧಾರಿತ ಕೃಷಿ ಭೂಮಿ ಸೇರಿದಂತೆ ಒಟ್ಟು 1.02 ಲಕ್ಷಹೆಕ್ಟೇರ್‌ ಕೃಷಿ ಭೂಮಿ ಇದೆ. 8710 ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ಕೇವಲ 470 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. 93290 ಹೆಕ್ಟೇರ್‌ ಮಳೆಯಾಧಾರಿತ ಕೃಷಿ ಪ್ರದೇಶದಲ್ಲಿ 65939 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರವೇ ಬಿತ್ತನೆ ಕಾರ್ಯ ಜರುಗಿದೆ.ಜೂನ್‌ ಅಂತ್ಯದವರೆಗೂ ಕೇವಲ ಶೇ.12 ಮಾತ್ರವೇ ಬಿತ್ತನೆ ಕಾರ್ಯ ಜರುಗಿದ್ದು, ತೀರಾ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಜುಲೈ ಅಂತ್ಯಕ್ಕೆ ಮತ್ತು ಆಗಸ್ಟ್‌ನಲ್ಲಿ ಸುರಿದ 3-4 ದಿನಗಳ ಮಳೆಯಿಂದಾಗಿ ಒಟ್ಟು ಬಿತ್ತನೆ ಕಾರ್ಯ ಶೇ.65 ತಲುಪುವಂತಾಗಿದೆ.

ಬೆಳೆಯಾಧಾರಿತ ಬಿತ್ತನೆ: ರಾಗಿ ಕೋಲಾರ ಜಿಲ್ಲೆಯ ಪ್ರಮುಖ ಕೃಷಿ ಬೆಳೆ. ಒಟ್ಟು 67550 ಹೆಕ್ಟೇರ್‌ ರಾಗಿ ಬಿತ್ತನೆಯಾಗಬೇಕಾಗಿದ್ದು, 52344 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಭತ್ತ ಕೇವಲ 8 ಹೆಕ್ಟೇರ್‌, ಮುಸುಕಿನ ಜೋಳ 263 ಹೆಕ್ಟೇರ್‌, ಮೇವಿನ ಜೋಳ 1698 ಹೆಕ್ಟೇರ್‌, ಸಿರಿಧಾನ್ಯ 412 ಹೆಕ್ಟೇರ್‌, ತೊಗರಿ 1836 ಹೆಕ್ಟೇರ್‌, ಅಲಸಂದೆ 833 ಹೆಕ್ಟೇರ್‌, ಅವರೆ 4786 ಹೆಕ್ಟೇರ್‌, ನೆಲಗಡಲೆ 3956 ಹೆಕ್ಟೇರ್‌, ಎಳ್ಳು 160, ಹುಚ್ಚೆಳ್ಳು 20, ಸಾಸುವೆ 85, ಹರಳು 8 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

Advertisement

ತಾಲೂಕುವಾರು ಬಿತ್ತನೆ: ಜಿಲ್ಲೆಯಲ್ಲಿ ಆಗಿರುವ ಒಟ್ಟು ಶೇ.65 ಬಿತ್ತನೆ ಪ್ರದೇಶಗಳ ಪೈಕಿ, ಬಂಗಾರಪೇಟೆ ತಾಲೂಕಿನಲ್ಲಿ ಶೇ.61.4, ಕೋಲಾರ ಶೇ.72.3, ಮಾಲೂರು ಶೇ.71.2, ಮುಳಬಾಗಿಲು ಶೇ.54.6, ಶ್ರೀನಿವಾಸಪುರದಲ್ಲಿ ಶೇ.72.6 ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.

ರಸಗೊಬ್ಬರ ದಾಸ್ತಾನು: ಜಿಲ್ಲೆಯಲ್ಲಿ ಕೃಷಿ ಇಲಾಖೆ, ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ದಾಸ್ತಾನು ಮಾಡಿಕೊಂಡಿದೆ. ಜಿಲ್ಲೆಗೆ 24346 ಮೆಟ್ರಿಕ್‌ ಟನ್‌ ರಸಗೊಬ್ಬರದ ನಿರೀಕ್ಷೆ ಇದ್ದು, 15351 ಮೆಟ್ರಿಕ್‌ ಟನ್‌ ಸರಬರಾಜು ಆಗಿದೆ. ಈ ಪೈಕಿ ಕೇವಲ 8618 ಮೆಟ್ರಿಕ್‌ ಟನ್‌ ರಸಗೊಬ್ಬರ ಮಾತ್ರವೇ ಮಾರಾಟವಾಗಿದೆ. ಉಳಿದಂತೆ 6733 ಮೆ.ಟನ್‌ ರಸಗೊಬ್ಬರ ದಾಸ್ತಾನಿದೆ.ಬಂಗಾರಪೇಟೆಯಲ್ಲಿ 1344 ಮೆ.ಟನ್‌, ಕೋಲಾರದಲ್ಲಿ 1580 ಮೆ.ಟನ್‌, ಮಾಲೂರಿನಲ್ಲಿ 1212 ಮೆ.ಟನ್‌, ಮುಳಬಾಗಿಲಿನಲ್ಲಿ 12164 ಮೆ.ಟನ್‌, ಶ್ರೀನಿವಾಸಪುರದಲ್ಲಿ 1333 ಮೆ.ಟನ್‌ ರಸಗೊಬ್ಬರ ದಾಸ್ತಾನು ಇಡಲಾಗಿದೆ.

ಇದರೊಂದಿಗೆ ಕೆಎಸ್‌ಸಿಎಂಎಫ್ ಫೆಡರೇಷನ್‌ನಲ್ಲಿ 2246 ಮೆ.ಟನ್‌ ರಸಗೊಬ್ಬರ ದಾಸ್ತಾನಿಡಲಾಗಿದೆ.

ಬೆಳೆ ವಿಮೆ: ಜಿಲ್ಲೆಯಲ್ಲಿ ರೈತರಿಗೆ ಕೃಷಿ ಬೆಳೆ ಸತತವಾಗಿ ಕೈಕಚ್ಚುತ್ತಿದ್ದರೂ ಬೆಳೆ ವಿಮೆ ಆಶ್ರಯಿಸುವುದು ಕಡಿಮೆ. ಈ ಹಿಂದಿನ ಸಾಲಿನಲ್ಲಿ ಬೆಳೆ ವಿಮೆ ಸಕಾಲದಲ್ಲಿ ರೈತರನ್ನು ತಲುಪದೇ ಇದ್ದುದೇ ರೈತರ ನಿರಾಸಕ್ತಿಗೆ ಕಾರಣ. ಆದರೂ, ಸಾಕಷ್ಟು ಪ್ರಚಾರದಿಂದಾಗಿ ಕಳೆದ ಸಾಲಿನಲ್ಲಿ 22 ಕೋಟಿ ರೂ. ಬೆಳೆ ವಿಮೆ ಪರಿಹಾರವಾಗಿ ಸಿಕ್ಕಿದ್ದು, ಸದ್ಯಕ್ಕೆ ಈ ಪೈಕಿ 4 ಸಾವಿರ ರೈತರಿಗೆ 3.50 ಕೋಟಿ ಮಂಜೂರಾಗಿ ರೈತರ ಖಾತೆಗಳಿಗೆ ನೇರ ಜಮೆಯಾಗುತ್ತಿದೆ. ಈ ಬಾರಿ ಸಾಕಷ್ಟು ಪ್ರಚಾರ ಮಾಡಿದರೂ ಕೇವಲ 14,122 ಮಂದಿ ರೈತರು ಮಾತ್ರವೇ ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದಾರೆ.

ನೆರೆ-ಬರದ ಬರೆ: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನೆರೆ ಪ್ರವಾಹದ ಹಾನಿಯಾಗಿ ರಾಷ್ಟ್ರ ಗಮನ ಸೆಳೆದಿದ್ದರೆ, ಸತತವಾರಿ ದಶಕಗಳಿಂದ ಬರದ ಬರೆಗೆ ತುತ್ತಾಗುತ್ತಿರುವ ಕೋಲಾರ ಜಿಲ್ಲೆ ಮಾತ್ರ ಸರ್ಕಾರ ಗಮನ ಸೆಳೆಯುವಲ್ಲಿ ವಿಫ‌ಲವಾಗಿರುವುದು, ರೈತರನ್ನು ಸಂಕಷ್ಟಗಳಲ್ಲಿ ಸಿಲುಕುವಂತೆ ಮಾಡಿದೆ.

ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಅಲ್ವಸ್ವಲ್ಪ ಮೇವು ಬೆಳೆದುಕೊಂಡು ಹೈನುಗಾರಿಕೆಯಿಂದಾಗಿ ಕೋಲಾರ ಜಿಲ್ಲೆಯ ಜನತೆ ಕೊಂಚ ನೆಮ್ಮದಿಯಿಂದ ಜೀವನ ಸಾಗಿಸುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next