Advertisement

ದಕ್ಷಿಣ ಕಾಶಿಯಲ್ಲಿ ಶಿವ ಲಕ್ಷ ದೀಪೋತ್ಸವ

05:40 PM Dec 11, 2019 | Naveen |

ಕೋಲಾರ: ದಕ್ಷಿಣ ಕಾಶಿ ಎಂದೇ ಖ್ಯಾತವಾಗಿರುವ ನಗರ ಹೊರವಲಯದ ಅಂತರಗಂಗೆಯಲ್ಲಿ ಮಂಗಳವಾರ ರಾತ್ರಿ ನಡೆದ ಶಿವ ಲಕ್ಷ ದೀಪೋತ್ಸವ ಮತ್ತು ತೆಪ್ಪೋತ್ಸವ ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತ ಸಾಗರ ಹರಿದು ಬಂದಿತ್ತು.

Advertisement

ಇಲ್ಲಿನ ಕಾಶೀ ವಿಶ್ವೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಕಳೆದ 13 ವರ್ಷಗಳಿಂದಲೂ ಅದ್ಧೂರಿಯಾಗಿ ಶಿವ ಲಕ್ಷ ದೀಪೋತ್ಸವವನ್ನು ಮುಖ್ಯಪೇದೆ ಬಿ.ಗೋಪಾಲ್‌ ಮತ್ತು ಕುಟುಂಬದವರು ನಡೆಸಿಕೊಂಡು ಬರುತ್ತಿದ್ದು, ಸಾರ್ವಜನಿಕ ಉತ್ಸವವನ್ನಾಗಿ ಆಚರಿಸುವ ಮೂಲಕ ಗಮನ ಸೆಳೆದರು.

ತೆಪ್ಪೋತ್ಸವದ ಜೊತೆಗೆ ವಿಶಾಲಾಕ್ಷಿ ಸಮೇತ ಕಾಶಿ ವಿಶ್ವೇಶ್ವರ ಸ್ವಾಮಿಯ ಕಲ್ಯಾಣೋತ್ಸವವನ್ನು ಸಹಾ ಏರ್ಪಡಿಸಿದ್ದು, ಜನರನ್ನು ಭಕ್ತಿಸಾಗರದಲ್ಲಿ ಮುಳುಗಿಸಿತ್ತು. ಚಳಿಯ ನಡುವೆಯೂ ಅಂತರಂಗೆಯ ಕ್ಷೇತ್ರವನ್ನು ಒಂದು ಸಾವಿರ ಕೆ.ಜಿ. ಎಣ್ಣೆ ಹಾಕಿ ಲಕ್ಷಾಂತರ ಹಣತೆಗಳಿಂದ ಬೆಳಗಿಸಿದ್ದು, ವಿಶೇಷ ಹೂವಿನ ಅಲಂಕಾರವನ್ನು ನಡೆಸಲಾಗಿತ್ತು. ಕಲ್ಲು ಬಸವನ ಬಾಯಿಂದ ಸದಾ ನೀರು ಜಿನುಗುವ ಅಂತರಂಗೆ ದೇವಾಲಯದ ಕಲ್ಯಾಣಿಯಲ್ಲಿ ತೆಪ್ಪೋತ್ಸವವನ್ನು ನಡೆಸಿದ್ದು, ನೆರೆದಿದ್ದ ಸಹಸ್ರಾರು ಭಕ್ತರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.

ವಿಶಿಷ್ಟ ರೀತಿಯಲ್ಲಿ ಶಿವನಿಗೆ ಅಲಂಕಾರ: ಪ್ರತಿ ವರ್ಷವೂ ಕಾಶಿ ವಿಶ್ವೇಶ್ವರಸ್ವಾಮಿಗೆ ಹೂವಿನ ಅಲಂಕಾರ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಇಡೀ ಗರ್ಭಗುಡಿಯನ್ನು ಕೈಲಾಸ,ಹಿಮ ಪರ್ವತದಂತೆ ಅಲಂಕರಿಸಲಾಗಿದ್ದು, ಗೌರಿಶಂಕರ ಶಿಖರದಲ್ಲಿ ಶಿವನು ಕುಳಿತಂತೆ ಮಾಡಿದ್ದು, ಜನತೆ ಶ್ರದ್ಧಾಭಕ್ತಿಗಳಿಂದ ನಮಿಸಿ ಸಂಭ್ರಮಿಸಿದರು. ಶಿವ ಲಕ್ಷ ದೀಪೋತ್ಸವ, ತೆಪ್ಪೋತ್ಸವಕ್ಕೆ ನಾದಸ್ವರ ಮತ್ತು ಸ್ಯಾಕ್ಸೋಫೋನ್‌ ವಾದನದ ಹಿಮ್ಮೇಳ ಗಮನ ಸೆಳೆಯಿತು.

ಮಧ್ಯರಾತ್ರಿ 1 ಗಂಟೆಯವರೆಗೂ ನಡೆದ ನಾದಸ್ವರ ಮತ್ತಿತರ ಕಾರ್ಯಕ್ರಮಗಳು ಭಕ್ತರನ್ನು ರಂಜಿಸಿದ್ದು, ಇಡೀ ಅಂತರಗಂಗೆ ಸಹಸ್ರಾರು ಹಣತೆಗಳಿಂದ ಕಂಗೊಳಿಸುತ್ತಿತ್ತು. ಸಂಜೆ ಆರು ಗಂಟೆಯಿಂದಲೂ ಅಂತರಂಗೆ ಬೆಟ್ಟದತ್ತ ತೆರಳಿದ ಭಕ್ತರ ಸಮೂಹವನ್ನು ನಿಯಂತ್ರಿಸುವಲ್ಲಿ ಪೊಲೀಸರು ಸಹಕರಿಸಿದರೆ, ಶಿವ ಲಕ್ಷ ದೀಪೋತ್ಸವದಲ್ಲಿ ಪಾಲ್ಗೊಂಡ ಎಲ್ಲಾ ಭಕ್ತಾಗಳಿಗೂ ಪ್ರಸಾದ ವಿನಿಯೋಗಿಸಲಾಯಿತು.

Advertisement

ಇಡೀ ರಾತ್ರಿ ಅಂತರಗಂಗೆ ಬೆಟ್ಟದ ತಪ್ಪಲಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿ, ಜಾತ್ರೆಯ ಕಳೆ ಕಂಡು ಬಂತು. ಅರ್ಚಕರಾದ ಮಂಜುನಾಥ ದೀಕ್ಷಿತ್‌, ಚಂದ್ರಶೇಖರದೀಕ್ಷಿತ್‌, ಸತ್ಯಸೋಮದೀಕ್ಷಿತ್‌, ನೇತೃತ್ವದಲ್ಲಿ ಪೂಜಾಕೈಂಕರ್ಯಗಳು ನಡೆದಿದ್ದು, ಬಜರಂಗದಳ ಬಾಲಾಜಿ, ಅಪ್ಪಿ, ಕಿಲಾರಿಪೇಟೆ ಶ್ರೀನಿವಾಸ್‌, ರಾಮಕೃಷ್ಣ, ಮಣಿ, ಮುನಿವೆಂಕಟ ಯಾದವ, ಕೆ.ವಿ.ಮಂಜು, ಆರ್‌.ರಮೇಶ್‌, ಡೆಕೋರೇಷನ್‌ ಶಂಕರ್‌, ಫೋಟೋ ಸ್ಟುಡಿಯೋ ಮಂಜು, ರವಿಪ್ರಿಂಟರ್ ಮಂಜು, ಪಿ. ವೆಂಕಟೇಶ್‌, ನಾಗೇಶ್‌ ಶ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next