Advertisement

ಕೊರೆದ ಬೋರ್ವೆಲ್‌ ವಿವರ 15 ದಿನದಲ್ಲಿ ನೀಡಿ

03:24 PM Jun 27, 2019 | Naveen |

ಕೋಲಾರ: ಜಿಲ್ಲೆಯಲ್ಲಿ ಕುಡಿಯುವ ನೀರು ಮತ್ತು ಕೃಷಿಗಾಗಿ ಕೊರಸಲಾಗಿರುವ ಕೊಳವೆಬಾವಿಗಳ ಪೈಕಿ ಕಾರ್ಯನಿರ್ವಹಿಸುತ್ತಿರುವ ಮತ್ತು ವಿಫಲ ಕೊಳವೆ ಬಾವಿಗಳ ವಿವರಗಳನ್ನು 15 ದಿನಗಳೊಳಗೆ ಸಲ್ಲಿಸಿ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಅಂತರ್ಜಲ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಂತರ್ಜಲ, ಸಣ್ಣ ನೀರಾವರಿ ಇಲಾಖೆ, ಅಂಬೇಡ್ಕರ್‌, ದೇವರಾಜ ಅರಸು ನಿಗಮದ ಅಧಿಕಾರಿಗಳ ಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ಜಿಲ್ಲೆಯಲ್ಲಿ ತೀವ್ರ ಸಮಸ್ಯೆ ಎದುರಾಗಿದೆ. ಕೊಳವೆಬಾವಿಗಳನ್ನು ಕೊರೆಸಿ ದರೂ ಕೆಲ ಭಾಗಗಳಲ್ಲಿ ನೀರು ಸಿಗುತ್ತಿಲ್ಲ. ಇದಕ್ಕೆ ಕಾರಣವೇನು ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚುವ ಕೆಲಸ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಸು ದಾಖಲಿಸಿದ್ದೀರಾ: ಜಿಲ್ಲೆಯಲ್ಲಿ ಕಳೆದ 10 ವರ್ಷಗಳಿಂದ ಅಂತರ್ಜಲಮಟ್ಟ ಪಾತಾಳಕ್ಕೆ ಕುಸಿದಿದೆ. ಇದಕ್ಕೆ ಕಾರಣವೇನು ಎಂಬುದನ್ನು ಇಲಾಖೆ ಅಧಿಕಾರಿಗಳು ಪತ್ತೆ ಮಾಡಬೇಕಿತ್ತು. ಕೊಳವೆಬಾವಿಗಳನ್ನು ಕೊರೆಸುವ ಅನಧಿಕೃತ ಏಜೆನ್ಸಿಗಳ ವಿರುದ್ಧ ಎಷ್ಟು ಪ್ರಕರಣ ದಾಖಲಿಸಿದ್ದೀರ ಎಂದು ಪ್ರಶ್ನಿಸಿದರು.

ಅಂತರ್ಜಲ ಇಲಾಖೆ ವಿಜ್ಞಾನಿ ತಿಪ್ಪೇಸ್ವಾಮಿ, ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಏಜೆನ್ಸಿಗಳ ಮಾಲಿಕರಿಗೆ ದಂಡ ವಿಧಿಸಿ ಕ್ರಮಕೈಗೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

155 ಬೋರ್ವೆಲ್ ನೋಂದಣಿ: ಷಣ್ಮುಗಂ, ಶ್ರೀನಿವಾಸ, ಮೋನಿ, ಚಿತ್ರಾ, ಶ್ವೇತಾ ಎಜೆನ್ಸಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಅಂತರ್ಜಲ ಅಭಿವೃದ್ಧಿ ಮಂಡಳಿಯಿಂದ ಅನುಮತಿ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ. ಇದುವರೆಗೂ ಕೊರೆಸಲಾಗಿರುವ 155 ಕೊಳವೆಬಾವಿಗಳು ನೋಂದಣಿಯಾಗಿವೆ ಎಂದು ಮಾಹಿತಿ ನೀಡಿದರು.

Advertisement

ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ, ಎಷ್ಟು ದಂಡ ವಿಧಿಸಿ ಎಫ್‌ಐಆರ್‌ ದಾಖಲು ಮಾಡಿದ್ದೀರಾ, ಮತ್ತೆ ಅವರು ಅದೇ ತಪ್ಪು ಮಾಡಿದ್ದರೆ ಕಠಿಣ ಕ್ರಮಕೈಗೊಳ್ಳಲು ಮುಂದಾಗಿದ್ದೀರಾ ಎಂದು ಪ್ರಶ್ನಿಸಿದರು.

ಕೇಸು ದಾಖಲಿಸುವಲ್ಲಿ ವಿಫ‌ಲ: ಒಂದು ಮರಳು ಲಾರಿ ಹಿಡಿದರೆ ಪ್ರಕರಣ ದಾಖಲು ಮಾಡುತ್ತೇವೆ, ಆನಂತರ ಅವರು ಕೋರ್ಟ್‌ಗೆ ಹೋಗಿ ಬಿಡಿಸಿ ಕೊಂಡು ಹೋಗುತ್ತಾರೆ. ಇಂತಹ ಪ್ರಕರಣಗಳನ್ನು ಯಾಕೆ ದಾಖಲಿಸಿಲ್ಲ, ಇಲಾಖೆಯ ಜವಾಬ್ದಾರಿ ನಿಭಾ ಯಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದೀರ, ಮನಸ್ಸಿಗೆ ಬಂದ ಹಾಗೆ ಮಾಹಿತಿ ಕೊಟ್ಟು ದಿಕ್ಕುತಪ್ಪಿಸ ಬೇಡಿ ಎಂದು ತರಾಟೆಗೆ ತೆಗೆದುಕೊಂಡರು.

ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ನೀರಿನ ಸಮಸ್ಯೆ ಇದೆ. ಶಾಸಕರು ಕೊಳವೆಬಾವಿ ಕೊರೆಸುವಂತೆ ಬೇಡಿಕೆ ಇಟ್ಟಿದ್ದಾರೆ. ನೀರಿನ ಇಳುವರಿಯ ಬಗ್ಗೆ ಮಾಹಿತಿ ನೀಡಲು ಯಾಕೆ ಮುಂದಾಗಲಿಲ್ಲ. ನಾನು ನಿಮ್ಮ ಜಾಗದಲ್ಲಿ ಇದಿದ್ದರೆ ಸಂಪೂರ್ಣ ಮಾಹಿತಿ ಪಡೆದು ಕೊಂಡು ಜನಪ್ರತಿನಿಧಿಗಳಿಗೆ ಪರಿಸ್ಥಿತಿಯ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರದಿಂದ ಹಾಗೂ ರೈತರು ಕೊಳವೆಬಾವಿಗಳನ್ನು ಕೊರೆಸುತ್ತಿದ್ದಾರೆ. ಇದರ ಮಾಹಿತಿ ನೀಡುವಂತೆ ಸೂಚಿಸಿದರು. ಕೆಲ ರೈತರು ನೋಂದಣಿ ಮಾಡಿಸಿ ಕೊಂಡಿದ್ದು, ಆರ್‌ಡಿಪಿಆರ್‌ ಇಲಾಖೆ, ಅಂಬೇಡ್ಕರ್‌, ದೇವರಾಜ ಅರಸು ನಿಗಮಗಳಿಂದ ಕೊರೆಸಿರುವ ಕೊಳವೆಬಾವಿಗಳನ್ನು ನೋಂದಣಿ ಮಾಡಿಸಿದ್ದಾರೆ. ನಗರ ಮತ್ತು ಪುರಸಭೆಗಳ ವ್ಯಾಪ್ತಿಯಲ್ಲಿ ಕೊರೆಸಿರು ವುದಕ್ಕೆ ನೋಂದಣಿಯಾಗಿಲ್ಲ ಎಂದು ವಿಜ್ಞಾನಿ ತಿಪ್ಪೇಸ್ವಾಮಿ ಮಾಹಿತಿ ನೀಡಿದರು.

ತಪಾಸಣೆ: ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಕೊಳವೆಬಾವಿ ಗಳನ್ನು ಕೊರೆಸಿರುವ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟದ ಮೇಲೆ ಪರಿಣಾಮ ಬೀರಿದೆ. ಕೆ.ಸಿ. ವ್ಯಾಲಿ ನೀರು ಹರಿಯುತ್ತಿರುವ ಭಾಗದಲ್ಲಿ ಎಷ್ಟು ಅಡಿಯಲ್ಲಿ ನೀರು ಸಿಗಬಹುದು ಎಂಬುದರ ಬಗ್ಗೆ ಪ್ರತಿವಾರ ತಪಾಸಣೆ ನಡೆಸಲಾಗುತ್ತಿದೆ. ಜತೆಗೆ ನೀರು ತುಂಬಿರುವ ಚೆಕ್‌ ಡ್ಯಾಂಗಳ ಬಳಿಯೂ ತಪಾಸಣೆ ಮಾಡಲಾಗುತ್ತಿದೆ ಎಂದು ಹೇಳಿದರು.

4.95 ಕೋಟಿ ರೂ.: ಸಣ್ಣ ನೀರಾವರಿ ಇಲಾಖೆ ಎಇಇ ಬೈರಾರೆಡ್ಡಿ ಮಾತನಾಡಿ, 5 ಕೋಟಿ ರೂ. ವೆಚ್ಚದಲ್ಲಿ ಚೆಕ್‌ ಡ್ಯಾಂ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 4.95 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ನೀವೇನು 5 ಕೋಟಿ ಡ್ಯಾಂ ನಿರ್ಮಾಣ ಮಾಡುತ್ತೀ ರೇನು, ಮಾಹಿತಿ ನೀಡುವುದರಲ್ಲಿ ಅರ್ಥ ಇರಬೇಕು. ಜನರ ಉದ್ಧಾರಕ್ಕಾಗಿ ಕೆಲಸ ಮಾಡಬೇಕು. ಸ್ಥಳ ಪರಿಶೀಲನೆ ಮಾಡಿದರೆ ನಿಮ್ಮ ಬಂಡವಾಳ ಬಯ ಲಾಗುತ್ತದೆ. ಅಂತರ್ಜಲ ಇಲಾಖೆಯ ಅಧಿಕಾರಿಗಳು ಕೊಳವೆಬಾವಿಗಳನ್ನು ನೊಂದಾಯಿಸಿ 15 ದಿನದೊಳಗೆ ಮಾಹಿತಿ ನೀಡಬೇಕು ಎಂದು ಕಟ್ಟಪ್ಪಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next