Advertisement
ಜಿಲ್ಲಾ ರಾಜಕಾರಣದಲ್ಲಿ ಸದ್ಯಕ್ಕೆ ಕಾಂಗ್ರೆಸ್ ಪಕ್ಷದ ಎರಡು ಗುಂಪುಗಳು ಹಾಗೂ ಜೆಡಿಎಸ್ ಅಥವಾ ಬಿಜೆಪಿ ನಡುವೆ ಪ್ರತಿ ಕ್ಷೇತ್ರದಲ್ಲೂ ಪೈಪೋಟಿ ನಡೆಯುತ್ತಿದೆ. ಇದೇ ರೀತಿಯ ಸ್ಪರ್ಧೆ ಜಿಲ್ಲಾ ಮಟ್ಟದಲ್ಲಿಯೂ ಕಾಣಿಸುತ್ತಿದೆ. ಈ ಮೂರು ಗುಂಪುಗಳ ನಡುವಿನ ಜಗಳದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಗೆದ್ದ ಮುಳಬಾಗಿಲು ಶಾಸಕ ಎಚ್.ನಾಗೇಶ್‌ರಿಗೆ ಅಧಿಕಾರ ಅನಾಯಾಸವಾಗಿ ಒಲಿದು ಬರುವಂತಾಗಿದೆ.
Related Articles
Advertisement
ಸ್ವಂತ ಬಲವಿಲ್ಲ: ಚುನಾವಣೆ ಗೆದ್ದ ನಂತರವೂ ಎಚ್.ನಾಗೇಶ್ ಮುಳಬಾಗಿಲು ಕ್ಷೇತ್ರದಲ್ಲಿ ಸ್ವಂತ ಬೆಂಬಲಿಗ ಪಡೆಯನ್ನು ಸೃಷ್ಟಿಸಿಕೊಳ್ಳುವ ಯಾವುದೇ ಪ್ರಯತ್ನಕ್ಕೆ ಕೈಹಾಕಿಲ್ಲ. ಕೊತ್ತೂರು ಮಂಜುನಾಥ್‌ರ ನೆರಳಿನಲ್ಲಿಯೇ ರಾಜಕೀಯ ಮಾಡುತ್ತಿರುವ ಅವರ ಹಿಂಬಾಲಕರನ್ನು ನಂಬಿಕೊಂಡೇ ಮುಂದುವರಿಯುತ್ತಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ಮಂತ್ರಿಗಿರಿ ಸಿಗಲಿಲ್ಲವೆಂಬ ಕಾರಣಕ್ಕೆ ಮುನಿಸಿಕೊಂಡಿದ್ದ ಎಚ್.ನಾಗೇಶ್ ಕಳೆದ ಒಂದು ವರ್ಷದ ಅವಧಿಯಲ್ಲಿ ಮುಳಬಾಗಿಲು ಕ್ಷೇತ್ರದಲ್ಲಿ ಸಭೆ ಸಮಾರಂಭ ನಡೆಸಿದ್ದೇ ಕಡಿಮೆ. ಕೆಲವು ತಿಂಗಳುಗಳ ಹಿಂದಷ್ಟೇ ಮೈತ್ರಿ ಸರ್ಕಾರವು ಎಚ್.ನಾಗೇಶ್‌ರಿಗೆ ಮಂತ್ರಿ ಸ್ಥಾನವನ್ನು ನೀಡಿತ್ತು. ವಿಳಂಬ ಮಾಡಿ ಸಣ್ಣ ಕೈಗಾರಿಕೆಯ ಖಾತೆಯನ್ನು ಹಂಚಿತ್ತು. ಇದಾದ ನಂತರವೂ ಕೋಲಾರ ಮತ್ತು ಮುಳಬಾಗಿಲು ರಾಜಕೀಯದಲ್ಲಿ ಎಚ್.ನಾಗೇಶ್‌ರಿಗೆ ಮಂತ್ರಿ ಸ್ಥಾನ ಸಿಕ್ಕಿದ್ದಕ್ಕೆ ಅಭೂತಪೂರ್ವ ಸ್ವಾಗತವೇನು ಸಿಕ್ಕಿರಲಿಲ್ಲ. ಇದಾದ ಕೆಲವೇ ದಿನಗಳಲ್ಲಿ ಎಚ್.ನಾಗೇಶ್ ತಮಗೆ ಸಿಕ್ಕ ಮಂತ್ರಿಗಿರಿಗೆ ರಾಜೀನಾಮೆ ನೀಡಿ ವಿಶೇಷ ವಿಮಾನದಲ್ಲಿ ಮುಂಬೈ ಸೇರಿಕೊಂಡಿದ್ದರು. ಇದೀಗ ಬದಲಾದ ರಾಜಕೀಯ ಚಿತ್ರಣದಲ್ಲಿ ಕೋಲಾರ ಜಿಲ್ಲೆಯಿಂದ ಅಧಿಕಾರ ಪಡೆಯುವ ಏಕೈಕ ಶಾಸಕರಾಗಿ ನಿಂತಿದ್ದಾರೆ.
ಬಿಜೆಪಿಯೇ ಆಸರೆ: ಪಕ್ಷೇತರ ಶಾಸಕ ಎಚ್.ನಾಗೇಶ್‌ರಿಗೆ ಕೋಲಾರ ಜಿಲ್ಲೆಯ ರಾಜಕೀಯ ನಂಟು ಇಲ್ಲವೇ ಇಲ್ಲ. ಮಹದೇವಪುರ ಕ್ಷೇತ್ರದ ನಾಗೇಶ್‌ರಿಗೆ ಅಲ್ಲಿಯೇ ರಾಜಕೀಯ ಮಾಡುವ ಬಯಕೆ. ಆದರೆ, ಅದೃಷ್ಟದ ಆಟದಲ್ಲಿ ಶಾಸಕರಾಗಿ ಸಚಿವರಾಗುತ್ತಿರುವ ಎಚ್.ನಾಗೇಶ್ ಕೋಲಾರ ಜಿಲ್ಲೆಯಲ್ಲಿಯೇ ರಾಜಕೀಯ ಮಾಡಬೇಕಾದರೆ ಬಿಜೆಪಿಯನ್ನು ಅಶ್ರಯಿಸುವುದು ಅನಿವಾರ್ಯವಾಗುತ್ತದೆ.
2018ರ ಚುನಾವಣೆಯಲ್ಲಿ ಮುಳಬಾಗಿಲು ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಎಚ್.ನಾಗೇಶ್ 74 ಸಾವಿರ ಮತಗಳನ್ನು ಪಡೆದುಕೊಂಡಿದ್ದರು. ಅವರ ಪ್ರತಿಸ್ಪರ್ಧಿ ಜೆಡಿಎಸ್‌ನ ಸಮೃದ್ಧಿ ಮಂಜುನಾಥ್ 67 ಸಾವಿರ ಮತಗಳನ್ನು ಗಳಿಸಿದ್ದರು. ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡಿದ್ದ ಮಾಜಿ ಶಾಸಕ ಅಂಬರೀಶ್ ಕೇವಲ 8 ಸಾವಿರ ಮತಗಳನ್ನು ಪಡೆಯುವಲ್ಲಿ ಸಫಲವಾಗಿದ್ದರು.
ಈ ಹಿನ್ನೆಲೆಯಲ್ಲಿ ಪಕ್ಷೇತರ ಎಚ್.ನಾಗೇಶ್ ಮುಳಬಾಗಿಲು ಕ್ಷೇತ್ರದಿಂದಲೇ ಚುನಾವಣೆ ಎದುರಿಸಲು ಮುಂದಾದರೆ ಬಿಜೆಪಿಯೇ ಆಸರೆಯಾಗಲಿದೆ.
ಮೂವರ ಜಗಳದಲ್ಲಿ ಎಚ್.ನಾಗೇಶ್‌ಗೆ ಲಾಭ: ಕೋಲಾರ ಜಿಲ್ಲೆಯ ಕಾಂಗ್ರೆಸ್‌ನಲ್ಲಿನ ಕೆ.ಎಚ್.ಮುನಿಯಪ್ಪ ಹಾಗೂ ಕೆ.ಆರ್.ರಮೇಶ್‌ಕುಮಾರ್ ನೇತೃತ್ವದ ಬಣಗಳ ನಡುವೆ ಪೈಪೋಟಿ ನಡೆಯುತ್ತಿದೆ. ಈ ಬಣಗಳ ಪೈಪೋಟಿಯಲ್ಲಿಯೇ ಲೋಕಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಬಿಜೆಪಿಯ ಕಮಲ ಅರಳುವಂತಾಗಿತ್ತು.
ಲೋಕಸಭಾ ಚುನಾವಣೆಯಲ್ಲಿ ಎಚ್.ನಾಗೇಶ್, ಕೊತ್ತೂರು ಮಂಜುನಾಥ್‌ರನ್ನು ಹಿಂಬಾಲಿಸಿ ಬಿಜೆಪಿ ಬೆಂಬಲಿಸಿದ್ದರು. ಇದೇ ಕಾರಣಕ್ಕೆ ಮೈತ್ರಿ ಸರ್ಕಾರದಲ್ಲಿ ಎಚ್.ನಾಗೇಶ್‌ರಿಗೆ ಮಂತ್ರಿ ಸ್ಥಾನ ಕೊಟ್ಟಿದ್ದನ್ನು ಕೆ.ಎಚ್.ಮುನಿಯಪ್ಪ ಆಕ್ಷೇಪಿಸಿದ್ದರು. ಆದರೆ, ರಮೇಶ್‌ಕುಮಾರ್ ಬಣವು ನಾಗೇಶ್‌ರಿಗೆ ಸಿಕ್ಕ ಮಂತ್ರಿಗಿರಿಯನ್ನು ಸ್ವಾಗತಿಸಲೂ ಇಲ್ಲ, ವಿರೋಧಿಸಲೂ ಇಲ್ಲ.
ಕೋಲಾರ ಜಿಲ್ಲೆಯಲ್ಲಿ ಪ್ರಬಲವಾಗಿರುವ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪೈಪೋಟಿಯಲ್ಲಿ ಪಕ್ಷೇತರರಾಗಿ ಗೆದ್ದಿರುವ ಎಚ್.ನಾಗೇಶ್ ದಿನಕ್ಕೊಂದು ನಿಲುವು ತೆಗೆದುಕೊಂಡರೂ ಅಧಿಕಾರ ಅವರನ್ನು ಹಿಂಬಾಲಿಸುವಂತಾಗಿದೆ. ಎಚ್.ನಾಗೇಶ್‌ರಿಗೆ ಸಿಗುತ್ತಿರುವ ಈ ಅಧಿಕಾರವು ಕೋಲಾರ ಜಿಲ್ಲೆಯ ಅಭಿವೃದ್ಧಿಗೆ ಹೇಗೆ ಸಹಕಾರಿಯಾಗಬಹುದು ಎನ್ನುವುದನ್ನು ಮುಂದಿನ ದಿನಗಳೇ ನಿರೂಪಿಸಬೇಕಿದೆ.