Advertisement

ಬೆಳೆ ನಾಶಕ್ಕೆ 5 ಲಕ್ಷ ರೂ. ಪರಿಹಾರ ನೀಡಿ

04:44 PM Jan 05, 2020 | Naveen |

ಕೋಲಾರ: ಗಡಿಭಾಗಗಳ ರೈತರ ಬೆಳೆ ನಾಶ ಮಾಡುತ್ತಿರುವ ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಿ ನಾಶವಾಗಿರುವ ಪ್ರತಿ ಎಕರೆಗೆ 5 ಲಕ್ಷ ರೂ. ಪರಿಹಾರ ನೀಡಬೇಕೆಂದು ರೈತ ಸಂಘದಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಮುಂದೆ ಹೋರಾಟ ಮಾಡಿ, ಮನವಿ ನೀಡಿ ಆಗ್ರಹಿಸಲಾಯಿತು.

Advertisement

ಹೋರಾಟದ ನೇತೃತ್ವ ವಹಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ರೈತರು ಹಗಲು ರಾತ್ರಿ ಕಷ್ಟಪಟ್ಟು ಬೆಳೆದ ಬೆಳೆಗಳು ಕೈಗೆ ಬರುವ ಸಮಯದಲ್ಲಿ 10 ವರ್ಷಗಳಿಂದ ಸತತ ಕಾಡು ಪ್ರಾಣಿಗಳ ಹಾವಳಿಗೆ ತುತ್ತಾಗಿ, ಸಂಪೂರ್ಣ ಬೆಳೆ ನಾಶವಾಗುತ್ತಿದೆ. ಹಾಕಿದ ಬಂಡವಾಳ ಬಾರದೆ ಖಾಸಗಿ ಸಾಲಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗುವಂತಾಗಿದೆ ಎಂದು ಹೇಳಿದರು.

ಅಧಿಕಾರಿಗಳ ವಿರುದ್ಧ ಅಸಮಾಧಾನ: ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತವಾದ ಪರಿಹಾರ ಕಲ್ಪಿಸು ವಲ್ಲಿ ಸಂಪೂರ್ಣವಾಗಿ ಅರಣ್ಯ ಇಲಾಖೆ ವಿಫಲ ವಾಗಿದೆ. ದಾಳಿ ಮಾಡಿದಾಗ ನೆಪ ಮಾತ್ರಕ್ಕೆ ಬಂದು ರೈತರಿಗೆ ಮುಖ ತೋರಿಸುವ ಅಧಿಕಾರಿ ಗಳು ಮತ್ತೆ ಆ ಕಡೆ ತಲೆ ಹಾಕಿ ಮಲಗುವುದಿಲ್ಲ.

ಇನ್ನು ಅರಣ್ಯ ಇಲಾಖೆ ಕೊಡುವ ಪರಿಹಾರಕ್ಕಾಗಿ ರೈತರು ಸಾವಿರಾರು ರೂ.ಖರ್ಚು ಮಾಡಿ ಅಧಿಕಾರಿಗಳ ಬಳಿಗೆ ಬರ ಬೇಕಾದ ಪರಿಸ್ಥಿತಿ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಾಣಿಗಳು ನಾಡಿನತ್ತ: ಜಿಲ್ಲಾಧ್ಯಕ್ಷ ಮರಗಲ್‌ ಶ್ರೀನಿವಾಸ್‌ ಮಾತನಾಡಿ, ಅರಣ್ಯ ಇಲಾಖೆ ಗಳಲ್ಲಿ ಸತತವಾಗಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಮತ್ತು ಮರಳುಗಾರಿಕೆಗೆ ಕಡಿವಾಣ ಇಲ್ಲದಂತಾಗಿದೆ. ಕಾಡುಗಳಲ್ಲಿ ಪ್ರಾಣಿಗಳಿಗೆ ಬೇಕಾದ ಹಣ್ಣಿನ ಮರಗಳನ್ನು ಬೆಳೆಸಿ ನೀರಿನ ವ್ಯವಸ್ಥೆ ಮಾಡಬೇಕಾದ ಅರಣ್ಯ ಇಲಾಖೆಗಳ ಬೇಜವಾಬ್ದಾರಿಯಿಂದಾಗಿ, ಕಾಡಿನಲ್ಲಿರಬೇಕಾದ ಪ್ರಾಣಿಗಳು ನಾಡಿನತ್ತ ಮುಖ ಮಾಡುತ್ತಿವೆ ಎಂದು ಆರೋಪಿಸಿದರು.

Advertisement

ಮನಸ್ಸು ಕರಗುತ್ತಿಲ್ಲ: ಬೆಳೆ ನಾಶವಾಗಿರುವ ಕಾಮ ಸಮುದ್ರ ರೈತ ತಿಮ್ಮಣ್ಣ ಮಾತನಾಡಿ, 10 ವರ್ಷಗಳಿಂದ ಕಾಡುಪ್ರಾಣಿಗಳು ಸತತವಾಗಿ ರೈತರ ಬೆಳೆಗಳ ಮೇಲೆ ತಮ್ಮ ಪ್ರತಾಪವನ್ನು ತೋರಿಸುತ್ತಿವೆ. ಜೊತೆಗೆ ಹತ್ತಕ್ಕೂ ಹೆಚ್ಚು ರೈತರು ಕಾಡುಪ್ರಾಣಿಗಳ ದಾಳಿಗೆ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅದರ ಜೊತೆಗೆ ಭೀಕರವಾದ ಬರಗಾಲದಲ್ಲೂ ಕೊಳವೆ ಬಾವಿಯನ್ನು ಕೊರೆಸಿ ಮಾಡಿರುವ ಬೆಳೆಗಳಾದ ಟೆಮೆಟೋ, ಕ್ಯಾಪ್ಸಿಕಾಂ, ಹುರಳಿಕಾಯಿ ಮತ್ತಿತರ ವಾಣಿಜ್ಯ ಬೆಳೆಗಳನ್ನು ರಾತ್ರೋರಾತ್ರಿ ಪ್ರಾಣಿಗಳು ಆಳು ಮಾಡುತ್ತಿವೆ. ಇದಕ್ಕೆ ಶಾಶ್ವತ ಪರಿಹಾರ ಕೊಡಿ ಎಂದು ಅಂಗಲಾಚಿದರೂ ಅಧಿಕಾರಿಗಳ ಮನಸ್ಸು ಕರಗುತ್ತಿಲ್ಲ ಎಂದು ಹೇಳಿದರು.

ಬಂದ್‌ ಎಚ್ಚರಿಕೆ: ಅಧಿಕಾರಿಗಳಿಗೆ ರೈತರ ಮೇಲೆ ಕಾಳಜಿ ಇದ್ದರೆ ಕೂಡಲೇ ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಿ ನಷ್ಟವಾಗಿರುವ ಪ್ರತಿ ಎಕರೆಗೆ 5 ಲಕ್ಷ ರೂ. ಪರಿಹಾರ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಬೆಳೆಗಳ ಸಮೇತ ಬಂದ್‌ ಮಾಡುವ ಎಚ್ಚರಿಕೆಯನ್ನು ನೀಡಿದರು.

ಸಮಸ್ಯೆ ಬಗೆಹರಿಸುವ ಭರವಸೆ: ಮನವಿ ಸ್ವೀಕರಿಸಿ ಮಾತನಾಡಿದ ವ್ಯವಸ್ಥಾಪಕ ಎಂ.ಚೆನ್ನಕೃಷ್ಣಪ್ಪ, ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸರ್ಕಾರದ ಕಾಯ್ದೆಯಂತೆ ನಾವು ಪರಿಹಾರ ನೀಡುತ್ತೇವೆ. ಮನವಿಯನ್ನು ಮೇಲಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು.

ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿ, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ನಾಗೇಶ್‌, ಸುಪ್ರಿಂಚಲ, ಮೀಸೆ ವೆಂಕಟೇಶಪ್ಪ, ಆನಂದರೆಡ್ಡಿ, ಈಕಂಬಳ್ಳಿ ಮಂಜುನಾಥ್‌, ಜುಬೇರ್‌ಪಾಷ, ಪಾರುಕ್‌ಪಾಷ, ಸಾಗರ್‌, ಪೊಂಬರಹಳ್ಳಿ ನವೀನ್‌, ವಕ್ಕಲೇರಿ ಹನುಮಯ್ಯ, ಗಣೇಶ್‌, ವಡ್ಡಹಳ್ಳಿ ಮಂಜುನಾಥ, ಸುಧಾಕರ್‌ ಆಶ್ವತ್‌, ಶಿವು, ಯಲ್ಲೇಶ್‌, ಜಗದೀಶ್‌, ವಿನೋದ್‌, ಪವನ್‌ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next