ಮಾಲೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡಿರುವ ಸ್ಥಳದಲ್ಲಿ ಥೀಮ್ ಪಾರ್ಕ್ ನಿರ್ಮಾಣಕ್ಕೆ ಮಣ್ಣು ಸಂಗ್ರಹ ಮಾಡಲು ಕೆಂಪೇಗೌಡ ರಥ ಯಾತ್ರೆ ತಾಲೂಕಿನ ಟೇಕಲ್ ಹೋಬಳಿ ಕೆ.ಜಿ.ಹಳ್ಳಿಗೆ ಆಗಮಿಸಿದ್ದು, ಬಿಜೆಪಿ ಎರಡು ಬಣಗಳ ನಡುವೆ ಉಂಟಾದ ಗದ್ದಲ, ಮಾತಿನ ಚಕ ಮಕಿ ನಡೆದು ಅರ್ಥಹೀನಾವಾಗಿ ಪರಿಣಮಿಸಿತ್ತು.
ಬಿಜೆಪಿಯ ಗುಂಪೊಂದು ಕೆಂಪೇಗೌಡ ರಥಯಾತ್ರೆಯನ್ನು ಸರ್ಕಾರ ಮತ್ತು ಜಿಲ್ಲಾಡಳಿತಗಳ ನಿದೇಶನದಂತೆ ಪೂರ್ಣಕುಂಭ ಸ್ವಾಗತದಿಂದ ಕರೆದೋಯ್ಯಬೇಕು ಎಂದು ಪಟ್ಟು ಹಿಡಿದ ಹಿನ್ನೆಲೆ, ಮಾಜಿ ಶಾಸಕ ಕೆ.ಎಸ್. ಮಂಜುನಾಥ್ ಗೌಡ ಹಾಗೂ ಹೂಡಿ ವಿಜಯ್‌ಕುಮಾರ್ ಅವರ ಬೆಂಬಲಿಗ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.
ಸಂಸದ ಎಸ್.ಮುನಿಸ್ವಾಮಿ ಹಾಗೂ ಪೊಲೀಸರ ಮಧ್ಯಸ್ತಿಕೆಯಿಂದ ತಿಳಿಗೊಂಡಿತು. ಬಂಗಾರಪೇಟೆಯಿಂದ ಪಾರ್ಶಗಾನಹಳ್ಳಿ ಮಾರ್ಗವಾಗಿ ರಥಯಾತ್ರೆ ಕೆ.ಜಿ.ಹಳ್ಳಿ ಗ್ರಾಮಕ್ಕೆ ಆಗಮಿಸಿದ ವೇಳೆ ಬಿಜೆಪಿಯ ಹೂಡಿ ವಿಜಯ್ ಕುಮಾರ್, ಆರ್.ಪ್ರಭಾಕರ್ ಅವರ ಬೆಂಬಲಿಗರು ರಥಕ್ಕೆ ಸ್ವಾಗತ ಕೋರಲು ಪೂರ್ಣಕುಂಭ ಕಳಶಗಳನ್ನು ಹೊತ್ತ ಮಹಿಳೆಯರು ಸ್ವಾಗತ ಕೋರಲು ಆಗಮಿಸದ ಕಾರಣ, ರಥಯಾತ್ರೆ ಹೋಗುವುದು ಬೇಡ ಎಂದು ಪಟ್ಟು ಹಿಡಿದರು.
ಸಂಸದ ಎಸ್.ಮುನಿಸ್ವಾಮಿ ಅವರು, ಕಾರ್ಯಕ್ರಮಕ್ಕೆ ಈಗಾಗಲೇ ತಡವಾಗಿದೆ. ರಥಯಾತ್ರೆಯೂ ತಾಲೂಕಿನ ಸಂಚರಿಸಬೇಕೆಂದು ಎಷ್ಟೇ ಮನವೊಲಿಸಿದರೂ, ಹೂಡಿ ವಿಜಯ್ ಕುಮಾರ್ ಬೆಂಬಲಿಗರು ರಥವನ್ನು ಮುಂದೆ ಸಂಚರಿಸಲು ಬಿಡಲಿಲ್ಲ. ಆಗ ಕಾರ್ಯಕ್ರಮ ನಿಗದಿಪಡಿಸಿದ ಸ್ಥಳದಿಂದ ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ ಅವರು ಆಗಮಿಸಿ ಕೆಂಪೇಗೌಡ ರಥಯಾತ್ರೆಯು ತಾಲೂಕಿಗೆ ಆಗಮಿಸಿರುವುದು ಈಗಾಗಲೇ ತಡವಾಗಿದೆ. ಪಕ್ಷಾತೀತವಾಗಿ ರಥಯಾತ್ರೆಗೆ ನಾವು ಭವ್ಯ ಸ್ವಾಗತವನ್ನು ಕೋರಬೇಕು ಹೊರತು, ರಥಯಾತ್ರೆಗೆ ಅಡ್ಡಿಪಡಿಸುವುದು ಸರಿಯಲ್ಲವೆಂದು ಹೇಳಿದರು. ಅಷ್ಟೊತ್ತಿಗೆ ಎರಡೂ ಕಡೆಯ ಬೆಂಬಲಿಗ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ವಾಗ್ವಾದ ತಾರಕಕ್ಕೇರಿತು. ಪೊಲೀಸರು ಮಧ್ಯಪ್ರವೇಶಿ ಎರಡು ಬಣಗಳನ್ನು ಮನವೊಲಿಸಿ ರಥಯಾತ್ರೆ ತಾಲೂಕು ಆಡಳಿತ ನಿಗದಿಪಡಿಸಿದ್ದ ಸ್ಥಳಕ್ಕೆ ಕೆಂಪೇಗೌಡ ರಥಯಾತ್ರೆ ತೆರಳಿತು.
ಬಿಜೆಪಿಯಲ್ಲಿ ಯಾವುದೇ ಬಣಗಳಿಲ್ಲ: ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಕೆಂಪೇಗೌಡರ ಥೀಮ್ ಪಾರ್ಕ ನಿರ್ಮಿಸಲು ರಾಜ್ಯದ ಎಲ್ಲ ಕಡೆಯಿಂದ ಮಣ್ಣು ಸಂಗ್ರಹ ಹಾಗೂ ಕೆಂಪೇಗೌಡರ ಇತಿಹಾಸವನ್ನು ಸಾರುವ ರಥಯಾತ್ರೆ ಹಮ್ಮಿಕೊಂಡಿದೆ. ಎಲ್ಲರೂ ಪಕ್ಷಾತೀತವಾಗಿ ರಥಯಾತ್ರೆಯನ್ನು ಸ್ವಾಗತಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆದರೆ, ಕೆಲವರು ರಥಯಾತ್ರೆಗೆ ಅಡ್ಡಿಪಡಿಸಿರುವುದು ಕೆಂಪೇಗೌಡ ಅವರಿಗೆ ಅಪಮಾನವೇಸಗಿದಂತೆ. ಬಿಜೆಪಿಯಲ್ಲಿ ಯಾವುದೇ ಬಣಗಳಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ರಥಯಾತ್ರೆಯನ್ನು ತಾಲೂಕಿನಲ್ಲಿ ಸಂಚರಿಸಲು ಸಹಕಾರ ನೀಡಬೇಕು ಎಂದರು. ಮಾಜಿ ಶಾಸಕ ಕೆ.ಎಸ್. ಮಂಜುನಾಥ್ ಗೌಡ ಮಾತನಾಡಿ, ಕೆಂಪೇಗೌಡ ರಥಯಾತ್ರೆಗೆ ಹೂಡಿ ವಿಜಯ್ ಕುಮಾರ್, ಆರ್.ಪ್ರಭಾಕರ್ ಹಾಗೂ ಅವರ ಬೆಂಬಲಿಗರು ಅಡ್ಡಿಪಡಿಸುವುದರ ಮೂಲಕ ಕೆಂಪೇಗೌಡ ರಥ ಯಾತ್ರೆಗೆ ಅಪಮಾನ ಮಾಡಿದ್ದಾರೆ. ಇದು ಪಕ್ಷದಲ್ಲಿ ಒಳ್ಳೆಯ ಬೆಳವಣಿಗೆಗಳಲ್ಲ ಎಂದರು.
ಕಾರ್ಯಕರ್ತರ ಮೇಲೆ ಹಲ್ಲೆ: ಬಿಜೆಪಿ ಫಲಾನುಭವಿಗಳ ಪ್ರಕೋಷ್ಠ ಸಮಿತಿ ಸದಸ್ಯ ಹೂಡಿ ವಿಜಯ್ ಕುಮಾರ್ ಮಾತನಾಡಿ, ಪೂರ್ಣ ಕುಂಭದೊಂದಿಗೆ ರಥಯಾತ್ರೆ ಕರೆ ದೋಯ್ಯಲು ಸಂಸದರ ಬಳಿ ತಿಳಿಸಿದ್ದೆವು. ಆದರೆ, ಮಾಜಿ ಶಾಸಕರು ಏಕ ಏಕಿ ಆಗಮಿಸಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ, ಸ್ವತಃ ಅವರೇ ರಥಯಾತ್ರೆಯ ವಾಹನ ಚಾಲನೆ ಮಾಡಲು ಮುಂದಾಗಿದ್ದು ಸರಿಯಲ್ಲ ಎಂದು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ತಹಶೀಲ್ದಾರ್ ಮಲ್ಲಿಕಾ ರ್ಜುನ್, ತಾಪಂ ಇಒ ಮುನಿರಾಜು, ಜಿ.ಇ.ರಾಮೇ ಗೌಡ, ಸತೀಶ್ ಆರಾಧ್ಯ, ತಾಲೂಕು ಬಿಜೆಪಿ ಅಧ್ಯಕ್ಷ ಪುರ ನಾರಾಯಣಸ್ವಾಮಿ, ಎಂ.ರಮಮೂರ್ತಿ, ಆಗ್ರಿನಾರಾಯಣಪ್ಪ, ಹರೀಶ್ ಗೌಡ, ಟಿ.ಬಿ. ಕೃಷ್ಣಪ್ಪ, ನೂಟವೆ ವೆಂಕಟೇಶ್ ಗೌಡ, ಬಿ. ಆರ್.ವೆಂಕಟೇಶ್, ತಿಮ್ಮನಾಯಕನಹಳ್ಳಿ ನಾರಾಯಣಸ್ವಾಮಿ, ಬಾನುತೇಜ್, ಮುನಿರಾಜು, ಸೋಮಣ್ಣ, ಚಂದ್ರಶೇಖರ್, ಅಜ್ಗರ್, ಕೂರಿಮಂಜು, ಬೋರ್ ಮಂಜು ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.