ಕೋಲಾರ: ವಯಾ ಚಿಕ್ಕಬಳ್ಳಾಪುರ ಮಾರ್ಗವಾಗಿ ಕೋಲಾರ -ವೈಟ್‌ಫೀಲ್ಡ್ ನಡುವೆ ಅ.31ರಿಂದ ಹೊಸ ರೈಲು ಸಂಚರಿಸಲಿದೆ ಎಂದು ಸಂಸದ ಎಸ್. ಮುನಿಸ್ವಾಮಿ ಘೋಷಿಸಿದ್ದು, ಹುಸಿಯಾಯಿತೇ ಎಂಬ ಅನುಮಾನ ಸಾರ್ವಜನಿಕರನ್ನು ಕಾಡುವಂತಾಗಿದೆ. ಕಳೆದ 30 ವರ್ಷಗಳಿಂದಲೂ ಅವಿಭಜಿತ ಕೋಲಾರ ಜಿಲ್ಲೆಯ ಜನತೆ ರೈಲ್ವೆ ಯೋಜನೆಗಳ ಕುರಿತಂತೆ ಹುಸಿ ಭರವಸೆಗಳನ್ನು ನೋಡಿ ಬೇಸತ್ತಿದ್ದು, ನೂತನ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಅವರಿಂದಲೂ ಹುಸಿ ಭರವಸೆ ಬಂತೇ ಎಂದು ಜನತೆ ಅನುಮಾನದಿಂದ ಕಾಣುವಂತಾಗಿದೆ.
ಅನುಷ್ಠಾನಕ್ಕೆ ಬಂದಿಲ್ಲ: ಕೋಲಾರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ, ಕೋಲಾರ ಜಿಲ್ಲೆಯ ಮುಳಬಾಗಿಲು, ಕೋಲಾರ ಮಾರ್ಗವಾಗಿ ಕಡಪಾದಿಂದ ವೈಟ್‌ಫೀಲ್ಡ್ ಹೊಸ ರೈಲ್ವೆ ಮಾರ್ಗ, ಕೋಲಾರ ವೈಟ್‌ಫೀಲ್ಡ್ ನಡುವೆ ಹೊಸ ರೈಲು ಮಾರ್ಗ, ಮುಳಬಾಗಿಲು ಕೋಲಾರದ ನಡುವೆ ಹೊಸ ರೈಲು ಮಾರ್ಗ, ಕುಪ್ಪಂ ಮಾರಿಕುಪ್ಪಂ ನಡುವೆ ರೈಲುಸಂಪರ್ಕ, ಶ್ರೀನಿವಾಸಪುರ-ಮದನಪಲ್ಲಿ (ಸಿಟಿಎಂ)ನಿಲ್ದಾಣಕ್ಕೆ ಸಂಪರ್ಕ ಇತ್ಯಾದಿ ರೈಲ್ವೇ ಯೋಜನೆಗಳ ಕುರಿತಂತೆ ಜನತೆ ಹಲವು ದಶಕಗಳಿಂದ ಕಾಯುತ್ತಿದ್ದರೂ ಅನುಷ್ಠಾನಕ್ಕೆ ಬಂದಿಲ್ಲ.
ನೂರಾರು ಬಾರಿ ಹೇಳಿಕೆ: ಆಶ್ಚರ್ಯವೆಂದರೆ ಈ ಎಲ್ಲಾ ರೈಲ್ವೆ ಯೋಜನೆಗಳು ಕೇಂದ್ರ ರೈಲ್ವೆ ಬಜೆಟ್‌ನಲ್ಲಿ ಪ್ರಕಟಗೊಂಡಿರುವ ಯೋಜನೆಗಳೇ ಆಗಿವೆ. ಈ ರೈಲ್ವೇ ಯೋಜನೆಗಳ ಕುರಿತಂತೆ ಈವರೆಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ಹೊಸ ರೈಲು ಮಾರ್ಗದ ಸರ್ವೆ ಕಾರ್ಯ ನಡೆದಿದೆ, ಭೂ ಸ್ವಾಧೀನ ಆಗಬೇಕಾಗಿದೆ ಎಂಬ ಪತ್ರಿಕಾ ಹೇಳಿಕೆಗಳನ್ನು ನೂರಾರು ಬಾರಿ ನೀಡಿದ್ದರು. ಆದರೆ, ಯಾವುದೇ ರೈಲ್ವೆ ಯೋಜನೆ ಅನುಷ್ಠಾನಕ್ಕೆ ಬಂದಿರಲಿಲ್ಲ.
ಹುಸಿ ಭರವಸೆ: ಕೋಲಾರ -ಚಿಕ್ಕಬಳ್ಳಾಪುರ ಜಿಲ್ಲೆಗೆ ರೈಲ್ವೆ ಮಂತ್ರಿಯಾಗಿದ್ದಾಗ ಜಾಫರ್ ಷರೀಫ್ಮಂ ಜೂರು ಮಾಡಿದ್ದ ಬ್ರಾಡ್‌ಗ್ರೇಜ್ ಪರಿವರ್ತನೆ ಕಾಮಗಾರಿಯೂ ರೈಲ್ವೆ ಇಲಾಖೆಯ ಕಡತಗಳಲ್ಲಿತ್ತು. ಕೆ.ಎಚ್.ಮುನಿಯಪ್ಪ ರೈಲ್ವೆ ಖಾತೆ ಸಹಾಯಕ ಸಚಿವರಾಗಿದ್ದಾಗ ಬ್ರಾಡ್‌ಗ್ರೇಜ್ ಕಾರ್ಯ ಪೂರ್ಣಗೊಳಿಸಿದ್ದರು. ನಂತರ ದೇಶದ ಯಾವುದೇ ಮೂಲೆಗಾ ದರೂ ಈ ಮಾರ್ಗದಲ್ಲಿ ರೈಲುಗಳ ಸಂಚಾರ ಆರಂಭ ವಾಗುತ್ತದೆ ಎಂಬ ನಿರೀಕ್ಷೆ ಜೋಡಿ ಜಿಲ್ಲೆಯ ಜನರಲ್ಲಿತ್ತು. ಆದರೆ, ರೈಲ್ವೆ ಯೋಜನೆಗಳ ವಿಚಾರದಲ್ಲಿ ಜನ ಪ್ರತಿನಿಧಿಗಳ ಹುಸಿ ಭರವಸೆಗಳಷ್ಟೇ ನೀಡುತ್ತಿದ್ದಾರೆ.
ಕಟ್ರಾ ರೈಲು ಸ್ಥಗಿತ: ಕಳೆದ ಲೋಕಸಭಾ ಚುನಾವಣೆ ವೇಳೆಗೆ ಯಶವಂತಪುರದಿಂದ ಚಿಕ್ಕಬಳ್ಳಾಪುರ, ಕೋಲಾರ ಮಾರ್ಗವಾಗಿ ಜಮ್ಮು ಕಾಶ್ಮೀರದ ಕಟ್ರಾವರೆಗೂ ಮೂರು ತಿಂಗಳ ಕಾಲ ವಾರಕ್ಕೊಮ್ಮೆ ರೈಲು ಸಂಚಾರ ಆರಂಭವಾಗಿತ್ತು. ಪ್ರತಿ ಗುರುವಾರ ಕೋಲಾರಕ್ಕೆ ಆಗಮಿಸುತ್ತಿದ್ದ ಈ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿನಿಂದ ಕೋಲಾರ -ಚಿಕ್ಕಬಳ್ಳಾಪುರ ಜನತೆ ನೇರವಾಗಿ ತಿರುಪತಿ, ದೆಹಲಿ, ವೈಷ್ಣೋದೇವಿ ದರ್ಶನ ಮಾಡಲು ಅನುಕೂಲವಾಗಿತ್ತು. ಆದರೆ, ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಈ ರೈಲನ್ನು ನಿಲ್ಲಿಸಲಾಯಿತು. ಇದರಿಂದ ಕೋಲಾರ ಮಾರ್ಗಕ್ಕೆ ಯಥಾಪ್ರಕಾರ ಬೆಳಗ್ಗೆ ಮಧ್ಯಾಹ್ನ ಸಂಜೆ ಸಂಜೆ ವಾಪಸ್ ಬರುವ ರೈಲುಗಳಷ್ಟೇ ಗತಿಯಾಗಿತ್ತು. ಈ ಸಂದರ್ಭದಲ್ಲಿ ಬಿಜೆಪಿಯಿಂದ ಕೋಲಾರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸಂಸದರಾದ ಎಸ್. ಮುನಿಸ್ವಾಮಿ, ಅ.16 ರಂದು ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲೆಯ ರೈಲ್ವೆ ಪ್ರಯಾಣಿಕರ
ಕುಂದುಕೊರತೆ ಆಲಿಸಲು ಹಾಗೂ ಜಿಲ್ಲೆಗೆ ರೈಲ್ವೆ ಸೌಲಭ್ಯಗಳನ್ನು ಒದಗಿಸಲು ರೈಲಿನಲ್ಲಿಯೇ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಂಸದ ಎಸ್.ಮುನಿಸ್ವಾಮಿ ಅ.31ರಂದು ಕೋಲಾರ -ವೈಟ್‌ಫೀಲ್ಡ್ ನಡುವೆ ಹೊಸ ರೈಲು ಸಂಚರಿಸಲಿದೆ ಎಂದು ಘೋಷಿಸಿದ್ದರು. ಇದೀಗ ಜನತೆಗೆ ಅನುಕೂಲವಲ್ಲದ ವೇಳೆಯಲ್ಲಿ ಸಂಚರಿಸುತ್ತಿರುವ ರೈಲುಗಳ ನಡುವೆ, ಕೋಲಾರ ವೈಟ್‌ಫೀಲ್ಡ್ ನಡುವೆ ಚಿಕ್ಕಬಳ್ಳಾಪುರ ಮಾರ್ಗವಾಗಿ ಮತ್ತೂಂದು ರೈಲಿನ ಸಂಚಾರ ಆರಂಭವಾದರೆ ಕೋಲಾರ -ಚಿಕ್ಕಬಳ್ಳಾಪುರ ಜಿಲ್ಲೆಯ ರೈಲ್ವೆ ಪ್ರಯಾಣಿಕರಿಗೆ ಅನುಕೂಲವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಈ ಯೋಜನೆಯನ್ನು ಜೋಡಿ ಜಿಲ್ಲೆಯ ಜನತೆ ಬಹು ಕಾತುರದಿಂದಲೂ ನಿರೀಕ್ಷಿಸುತ್ತಿದ್ದರು. ಆದರೆ, ಸಂಸದರು ಘೋಷಿಸಿದಂತೆ ಅ.31ರಂದು ಕೋಲಾರ ವೈಟ್‌ಫೀಲ್ಡ್ ನಡುವಿನ ರೈಲು ಸಂಚಾರ ಆರಂಭವಾಗಲೇ ಇಲ್ಲ. ಹಿಂದಿನ ಭರವಸೆಗಳಂತೆ ಇದು ಸಹ ಹುಸಿ ಭರವಸೆಯೇ ಎಂದು ಜನತೆ ನಿರಾಸೆ ಅನುಭವಿಸುವಂತಾಗಿದೆ.
-ಕೆ.ಎಸ್.ಗಣೇಶ್