ಕೋಲಾರ: ಸಂಸದ ಎಸ್.ಮುನಿಸ್ವಾಮಿ ಎರಡು ತಿಂಗಳ ಹಿಂದೆ ಪ್ರಕಟಿಸಿದಂತೆ ಕೋಲಾರ ಮತ್ತು ವೈಟ್ ಫೀಲ್ಡ್ ನಿಲ್ದಾಣಗಳ ನಡುವೆ ಚಿಕ್ಕಬಳ್ಳಾಪುರ ಮಾರ್ಗವಾಗಿ ಹೊಸ ರೈಲು ಸಂಚಾರ ಡಿ.23ರಿಂದ ಆರಂಭವಾಗಲಿದೆ. 06543 ಮತ್ತು 06544 ಸಂಖ್ಯೆಯ ರೈಲುಗಳ ಸಂಚಾರ ಪ್ರತಿ ನಿತ್ಯವೂ ಕೋಲಾರ ಮತ್ತು ವೈಟ್‌ಫೀಲ್ಡ್ ನಡುವೆ ಸಂಚರಿಸಲಿದೆ.
ಭಾನುವಾರ ಹೊರತುಪಡಿಸಿ ಪ್ರತಿ ದಿನವೂ ಬೆಳಗ್ಗೆ 7.30 ಕ್ಕೆ ಕೋಲಾರವನ್ನು ಬಿಡುವ ರೈಲು ಬೆಳಗ್ಗೆ 10.55ಕ್ಕೆ ವೈಟ್‌ಫೀಲ್ಡ್ ತಲುಪುತ್ತದೆ. ಹಾಗೆಯೇ ಮಧ್ಯಾಹ್ನ 4.15ಕ್ಕೆ ವೈಟ್‌ಫೀಲ್ಡ್ ಬಿಡುವ ರೈಲು ರಾತ್ರಿ 7.40 ಕ್ಕೆ ಕೋಲಾರ ನಿಲ್ದಾಣವನ್ನು ತಲುಪುತ್ತದೆ.
ಹೆಚ್ಚುವರಿಯಾಗಿ ಓಡಾಟ: ಬಂಗಾರಪೇಟೆಯಿಂದ ಆರಂಭವಾಗುವ ರೈಲುಗಳ ಸಂಚಾರ ಕೋಲಾರ ಮತ್ತು ಚಿಕ್ಕಬಳ್ಳಾಪುರ ನಡುವೆ ಬೆಳಗ್ಗೆ ಆರಂಭವಾಗಿ ಕಂಟೋನ್ಮೆಂಟ್ ನಿಲ್ದಾಣ ಹಾಗೂ ಮೆಜೆಸ್ಟಿಕ್ ನಿಲ್ದಾಣ ಗಳನ್ನು ತಲುಪುತ್ತಿವೆ. ಇವುಗಳ ನಡುವೆ ಹೆಚ್ಚುವರಿಯಾಗಿ ಈ ಹೊಸ ರೈಲು ನಿತ್ಯವೂ ಕೋಲಾರ ಮತ್ತುವೈಟ್ ಫೀಲ್ಡ್ ನಡುವೆ ಸಂಚರಿಸಲಿದೆ.
ಹಲವು ವರ್ಷಗಳ ಬೇಡಿಕೆ: ಕೋಲಾರ ಮತ್ತು ವೈಟ್ ಫೀಲ್ಡ್ ನಡುವೆ ನೇರ ಸಂಪರ್ಕ ಕಲ್ಪಿಸಬೇಕೆಂಬ ಬೇಡಿಕೆ ಕೋಲಾರ ಜಿಲ್ಲೆಯ ಜನರಿಂದ ಹಲವಾರು ವರ್ಷಗಳಿಂದ ಕೇಳಿಬರುತ್ತಿದೆ. ಕೋಲಾರ ವೈಟ್‌ಫೀಲ್ಡ್ ನಡುವೆ ಹೊಸ ರೈಲು ಮಾರ್ಗ ಅಳವಡಿಸಲು ಸರ್ವೇ ಕಾರ್ಯವು ಪೂರ್ಣಗೊಂಡಿದೆ. ಆದರೆ, ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಚಿಕ್ಕಬಳ್ಳಾಪುರ ಮಾರ್ಗವಾಗಿ ಕೋಲಾರ – ವೈಟ್ ಫೀಲ್ಡ್ ನಡುವೆ ರೈಲುಗಳ ಸಂಚಾರವನ್ನು ಆರಂಭಿಸಲಾಗುತ್ತಿದೆ.
ಕಾಟ್ರಾ ರೈಲು ಸ್ಥಗಿತ: ಲೋಕಸಭಾ ಚುನಾವಣೆಗೂ ಮುನ್ನ ಯಶವಂತಪುರ ನಿಲ್ದಾಣದಿಂದ ಜಮ್ಮು ಕಾಶ್ಮೀರದ ಕಾಟ್ರಾ ರೈಲ್ವೆ ನಿಲ್ದಾಣದವರೆಗೂ ವಾರಕ್ಕೊಮ್ಮೆ ಪ್ರತಿ ಗುರುವಾರ ಕೋಲಾರ ಚಿಕ್ಕಬಳ್ಳಾಪುರ ಮಾರ್ಗವಾಗಿ ವಿಶೇಷ ನಿಜಾಮಾಬಾದ್ ಎಕ್ಸ್‌ಪ್ರೆಸ್ ಸಂಚರಿಸುತ್ತಿತ್ತು. ಆದರೆ, ಪ್ರಾಯೋಗಿಕವಾಗಿ ಮೂರು ನಾಲ್ಕು ತಿಂಗಳ ಸಂಚಾರದ ನಂತರ ಇಲಾಖೆಯು ನಿಜಾಮಾಬಾದ್‌ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ನಿಲ್ಲಿಸಿಬಿಟ್ಟಿತು. ಇದು ಜೋಡಿ ಜಿಲ್ಲೆಯ ರೈಲ್ವೆ ಪ್ರಯಾಣಿಕರ ಆಕ್ರೋಶಕ್ಕೂ ತುತ್ತಾಗಿತ್ತು. ಇದೀಗ ಸ್ಥಳೀಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಹೊಸ ರೈಲು ಸಂಚಾರ ಆರಂಭವಾಗುತ್ತಿದ್ದು, ಇದನ್ನು ಇಲಾಖೆಯು ಸ್ಥಗಿತಗೊಳಿಸದಂತೆ ನಿಯಮಿತವಾಗಿ ವೇಳಾಪಟ್ಟಿಗೆ ತಕ್ಕಂತೆ ಸಂಚರಿಸುವಂತೆ ಮಾಡಿದರೆ ಪ್ರಯಾಣಿಕರು ನಿತ್ಯ ಸಂಚಾರಕ್ಕೆ ಅನುಕೂಲವಾಗುತ್ತದೆಯೆಂದು ರೈಲ್ವೆ ಪ್ರಯಾಣಿಕರು ಅಭಿಪ್ರಾಯಪಡುತ್ತಿದ್ದಾರೆ.