ಕೋಲಾರ: ಲೋಕಸಭಾ ಚುನಾವಣೆಗೆ ಸಿದ್ಧತೆಗಳು ಆರಂಭವಾಗಿದ್ದು, ಕೋಲಾರ ಮೀಸಲು ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಜೆಡಿಎಸ್ ತನ್ನ ನಿರ್ಧಾರವನ್ನು ಘೋಷಿಸಲು ಸಭೆ ಕರೆದಿದೆ. ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಹೊಂದಿದ ನಂತರ ಜೆಡಿಎಸ್‌ಗೆ ಯಾವ್ಯಾವ ಕ್ಷೇತ್ರ ಬಿಟ್ಟುಕೊಡಲಾಗುವುದು, ಬಿಜೆಪಿ ಯಾವ ಕ್ಷೇತ್ರಗಳನ್ನು ಉಳಿಸಿಕೊಳ್ಳುತ್ತದೆ ಎನ್ನುವುದು ಕುತೂಹಲ ಕೆರಳಿಸುವ ಸಂಗತಿಯಾಗಿದೆ.
ಅದರಲ್ಲೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಕ್ಷೇತ್ರಗಳ ಮೇಲೆ ಜೆಡಿಎಸ್ ಕಣ್ಣಿಟ್ಟಿದ್ದು, ಜೆಡಿಎಸ್ ಯಾವ ಕ್ಷೇತ್ರವನ್ನು ಉಳಿಸಿಕೊಳ್ಳುತ್ತದೆ ಯಾವು ದನ್ನು ಬಿಜೆಪಿಗೆ ಉಳಿಸಲಿದೆ ಎನ್ನುವುದರ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿವೆ. ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಅಭ್ಯರ್ಥಿಗಳಾಗಲು ಆಹಾರ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಸೇರಿದಂತೆ 12 ಮಂದಿ ಅಭ್ಯರ್ಥಿಗಳ ಹೆಸರುಗಳು ಚಾಲ್ತಿಗೆ ಬಂದು ಬಿಟ್ಟಿದೆ. ಆದರೆ, ಮೈತ್ರಿ ಕಾರಣಕ್ಕೆ ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಗೊಂದಲಮಯ ವಾತಾವರಣ ಕಂಡು ಬರುತ್ತಿದೆ.
ಕೋಲಾರ ಕ್ಷೇತ್ರದಲ್ಲಿ ಬಿಜೆಪಿ: ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಬೇರುಮಟ್ಟದ ಬಲವಿಲ್ಲ. ಗ್ರಾಪಂ, ವಾರ್ಡುವಾರು ಚುನಾವಣೆಗಳಲ್ಲಿ ಬಿಜೆಪಿಯದು ನಿರಾಶಾದಾಯಕ ಸಾಧನೆ. ಆದರೆ, ಲೋಕಸಭಾ ಚುನಾವಣೆಗೆ ಬಂದ ಸಂದರ್ಭದಲ್ಲಿ ಬಿಜೆಪಿ ಯದು ಅನಿರೀಕ್ಷಿತ ಸಾಧನೆ. 1999ರ ಚುನಾವಣೆಯಲ್ಲಿ ರಾಜೀವ್‌ಗಾಂಧಿ ನಿಧನದ ಅನುಕಂಪದಲ್ಲಿ ಕಾಂಗ್ರೆಸ್‌ನ ಕೆ.ಎಚ್.ಮುನಿ ಯಪ್ಪ ಗೆಲ್ಲದಿದ್ದರೆ ಬಿಜೆಪಿ ಅಂದೇ ಮಾಲೂರು ಹನುಮಪ್ಪರ ಗೆಲುವಿನ ಮೂಲಕ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಖಾತೆ ತೆರೆಯುತ್ತಿತ್ತು. ಆದರೆ, ಅಂದು ಅನುಕಂಪದ ಅಲೆಯಲ್ಲಿ ಗೆದ್ದ ಕೆ.ಎಚ್.ಮುನಿಯಪ್ಪ ಸತತ 7 ಗೆಲುವು ದಾಖಲಿಸಿದ್ದರು. ಗೆಲುವಿನ ಸನಿಹಕ್ಕೆ ಬರುತ್ತಿದ್ದ ಬಿಜೆಪಿಗೆ ಗೆಲುವು ದಕ್ಕಲು ಬಿಟ್ಟಿರಲಿಲ್ಲ. 2019 ರ ಚುನಾವಣೆಯಲ್ಲಿ ಜೆಡಿಎಸ್. ಕಾಂಗ್ರೆಸ್ ಬಿಜೆಪಿ ಒಗ್ಗೂಡಿ ಕೆ.ಎಚ್.ಮುನಿಯಪ್ಪರನ್ನು ಸೋಲಿಸಬೇಕಾಗಿತ್ತು.
ಬಿಜೆಪಿ 1999 ರಿಂದಲೂ ಸೋಲುತ್ತಿದ್ದರೂ ಗೆಲ್ಲಲೇ ಬೇಕೆಂಬ ಪ್ರಯತ್ನವನ್ನು ಬಿಟ್ಟಿರಲಿಲ್ಲ. ಇಡೀ ಕ್ಷೇತ್ರದಲ್ಲಿ ಬೇರು ಮಟ್ಟದ ರಾಜಕೀಯ ಬಲ ಇಲ್ಲದಿದ್ದರೂ, ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಲಕ್ಷಗಟ್ಟಲೇ ಮತ ಸಂಪಾದಿಸುತ್ತಿತ್ತು. ಇದೇ ಕಾರಣದಿಂದ ಹಿಂದಿನ ಐದಾರು ಚುನಾವಣೆಗಳಲ್ಲಿ ಗೆಲುವು ಕೆ.ಎಚ್.ಮುನಿಯಪ್ಪದ್ದಾದರೆ, ಎರಡೇ ಸ್ಥಾನ ಬಿಜೆಪಿಯದ್ದಾಗಿರು ತ್ತಿತ್ತು. ಅದೂ 12 ರಿಂದ 40 ಸಾವಿರ ಮತಗಳ ನಡುವಿನ ಕಡಿಮೆ ಅಂತರದ ಸೋಲು. ಮುನಿಸ್ವಾಮಿ ಗೆಲುವು: ಹಿಂದಿನ ಚುನಾವಣೆಗಳ ಪ್ರ ಯತ್ನಕ್ಕೆ ಫಲ ಕೊಟ್ಟಂತೆ, 2019ರ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದ ಮೊದಲ ಬಿಜೆಪಿ ಸಂಸದರಾಗಿ ಎಸ್.ಮುನಿಸ್ವಾಮಿ ಆಯ್ಕೆಯಾದರು. ಆದರೆ, ಈ ಗೆಲುವಿನಲ್ಲಿ ಬಿಜೆಪಿಗಿಂತಲೂ ಜೆಡಿಎಸ್ ಮತ್ತು ಕಾಂಗ್ರೆಸ್ಸಿಗರ ಆಶೀರ್ವಾದ ಹೆಚ್ಚಾಗಿತ್ತು. ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸಲೇ ಬೇಕೆಂದು ನಿರ್ಧರಿಸಿದ್ದ ಜೆಡಿಎಸ್, ಕಾಂಗ್ರೆಸ್ ಮುಖಂಡರು ನೇರವಾಗಿಯೇ ಬಿಜೆಪಿ ಬೆಂಬಲಿಸಿ ಎಸ್.ಮುನಿಸ್ವಾಮಿಯನ್ನು ಸಂಸದರಾಗಿ ಆಯ್ಕೆ ಮಾಡಿ ಸಂಸತ್‌ಗೆ ಕಳುಹಿಸಿದ್ದರು. ಆದರೆ, 2024 ರ ಚುನಾವಣೆಯಲ್ಲಿ ಇದೇ ವಾತಾವರಣ ಇಲ್ಲ. ಕ್ಷೇತ್ರ ವ್ಯಾಪ್ತಿಯ ಎಂಟು ಕ್ಷೇತ್ರಗಳ ಪೈಕಿ ಕಾಂಗ್ರೆಸ್ 5 ರಲ್ಲಿ ಜೆಡಿಎಸ್ 3 ರಲ್ಲಿ ಗೆಲುವು ಸಂಪಾದಿಸಿದೆ.
ಬಿಜೆಪಿಯದು ಶೂನ್ಯ ಸಂಪಾದನೆ. ಇದು ಬಿಜೆಪಿಯುಕ್ಷೇತ್ರ ಉಳಿಸಿಕೊಳ್ಳಲು ಇರುವ ಪ್ರಮುಖ ತೊಡಕಾಗಿದೆ. ಆದರೂ, ಕೋಲಾರ ಕ್ಷೇತ್ರವನ್ನು ಬಿಜೆಪಿಗೆ ಉಳಿಸಿಕೊಳ್ಳುವಲ್ಲಿ ಹಾಲಿ ಸಂಸದ ಎಸ್.ಮುನಿಸ್ವಾಮಿ ತೀವ್ರ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಎರಡನೇ ಸ್ಥಾನದಲ್ಲಿರುವುದರಿಂದ ಈ ಬಾರಿಯೂ ಬಿಜೆಪಿ ಕ್ಷೇತ್ರ ಉಳಿಸಿಕೊಂಡರೆ ಗೆಲುವು ಸುಲಭ ಎಂಬ ವಾದ ಮಂಡಿಸುತ್ತಿದ್ದಾರೆ.
ಜೆಡಿಎಸ್ ನಿಲುವು: ಕೋಲಾರ ಲೋಕಸಭಾ ಕ್ಷೇತ್ರ ದಲ್ಲಿ ಮೂವರು ಶಾಸಕರ ಬಲವನ್ನು ಹೊಂದಿರುವ ಹಾಗೂ ಉಳಿದೆಡೆ ಎರಡನೇ ಸ್ಥಾನದಲ್ಲಿರುವ ಸಾಧನೆ ಮಾಡಿರುವ ಜೆಡಿಎಸ್ ಕ್ಷೇತ್ರ ಉಳಿಸಿಕೊಳ್ಳುವುದು ಪಕ್ಷಸಂಘಟನೆಗೆ ಅನುಕೂಲಕರ ಎಂಬ ವಾದವನ್ನು ಜೆಡಿಎಸ್ ಕಾರ್ಯಕರ್ತರು ಮಂಡಿಸುತ್ತಿದ್ದಾರೆ. ಈಗಾಗಲೇ ಕ್ಷೇತ್ರ ವ್ಯಾಪ್ತಿಯ ಹಲವಾರು ಮುಖಂಡರು ಪ್ರತ್ಯೇಕವಾಗಿ ಪಕ್ಷದ ವರಿಷ್ಠ ಎಚ್.ಡಿ.ಕುಮಾರಸ್ವಾಮಿಗೆ ಮಾಹಿತಿ ನೀಡಿ ಕೋಲಾರವನ್ನು ಜೆಡಿಎಸ್‌ಗೆ ಉಳಿಸಿಕೊಂಡರೆ ಗೆಲುವು ಸುಲಭವಾಗುತ್ತದೆ, ಪಕ್ಷ ಸಂಘಟನೆಯೂ ಆಗುತ್ತದೆ, ಕಾರ್ಯಕರ್ತರ ಉತ್ಸಾಹವು ಇಮ್ಮಡಿಯಾಗುತ್ತದೆ ಎಂದು ವಿವರಿಸುತ್ತಿದ್ದಾರೆ.
ಶನಿವಾರ ಸಭೆ: ಕೋಲಾರ ಮೀಸಲು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಉಳಿಸಿಕೊಳ್ಳಬೇಕಾ ಅಥವಾ ಬಿಜೆ ಪಿಗೆ ಉಳಿಸಬೇಕಾ ಎಂಬ ವಿಚಾರದಲ್ಲಿ ನಿರ್ಧಾರ ತೆಗೆ ದುಕೊಳ್ಳಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಡದಿ ಬಳಿಯ ತಮ್ಮ ತೋಟದಲ್ಲಿ ಫೆ.3 ಶನಿವಾರ ಕ್ಷೇತ್ರ ವ್ಯಾಪ್ತಿಯ ಮುಖಂಡರ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಮುಖಂಡರ ಸಲಹೆಗಳನ್ನು ಆಲಿಸಿ, ಕ್ಷೇತ್ರವನ್ನು ಉಳಿಸಿಕೊಳ್ಳಬೇಕಾ, ಬಿಡಬೇಕಾ, ಉಳಿಸಿಕೊಂಡರೆ ಯಾರು ಅಭ್ಯರ್ಥಿಯಾದರೆ ಸೂಕ್ತ ಎಂಬ ವಿಚಾರಗಳ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.
ಜೆಡಿಎಸ್‌ಗೆ ಕ್ಷೇತ್ರ ಬಿಟ್ಟರೆ ಅಭ್ಯರ್ಥಿಗಳ್ಯಾರು?: ಒಂದು ವೇಳೆ ಜೆಡಿಎಸ್ ಕೋಲಾರ ಕ್ಷೇತ್ರವನ್ನು ಉಳಿಸಿಕೊಂಡರೆ ಅಭ್ಯರ್ಥಿ ಯಾರಾಗಬಹುದು ಎನ್ನುವುದು ಕುತೂಹಲವೇ. ಕೋಲಾರದ ಕೆ.ಎಚ್.ಮುನಿಯಪ್ಪ ಅವರಿಂದ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸೋತಿರುವ ನಿಸರ್ಗ ನಾರಾಯಣ ಸ್ವಾಮಿ ಹೆಸರು ಕೇಳಿ ಬರುತ್ತಿದೆ. ಹಾಗೆಯೇ ಕೋಲಾರದ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಮತ್ತು ಬಂಗಾರಪೇಟೆ ಪರಾಜಿತ ಅಭ್ಯರ್ಥಿ ಮಲ್ಲೇಶ್‌ಬಾಬು ಹೆಸರುಗಳು ಸದ್ಯಕ್ಕೆ ಪ್ರಸ್ತಾಪವಾಗುತ್ತಿದೆ. ಈ ಮೂವರ ಪೈಕಿ ಯಾರು ಅಭ್ಯರ್ಥಿಯಾದರೆ ಸೂಕ್ತ ಅಥವಾ ಹೊಸ ಅಭ್ಯರ್ಥಿಯನ್ನು ಹುಡುಕಬೇಕಾ ಎನ್ನುವ ಕುರಿತು ಕುಮಾರಸ್ವಾಮಿಯವರು ಪಕ್ಷದ ಮುಖಂಡರ ಸಲಹೆಗಳ ಮೇಲೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಈ ಕಾರಣಕ್ಕಾಗಿ ಶನಿವಾರದ ಜೆಡಿಎಸ್ ಸಭೆ ಕೋಲಾರ ಲೋಕಸಭಾ ರಾಜಕೀಯ ವಲಯದಲ್ಲಿ ಮಹತ್ವದ್ದಾಗಿದೆ.
– ಕೆ.ಎಸ್.ಗಣೇಶ್