Advertisement

ಕೋಟಿ ಮೌಲ್ಯದ 186 ಕೆ.ಜಿ.ಗಾಂಜಾ ವಶ !ಕೋಲಾರ ಜಿಲ್ಲೆಯಲ್ಲಿ ಅತೀ ಹೆಚ್ಚು ಗಾಂಜಾ ವಶ

04:38 PM Sep 10, 2020 | sudhir |

ಕೆಜಿಎಫ್: ನಗರದಲ್ಲಿ ಅಕ್ರಮವಾಗಿ ಶೇಖರಣೆ ಮಾಡಿದ್ದ ಕೋಟಿ ರೂ. ಮೌಲ್ಯದ 186 ಕೆ.ಜಿ. ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇದರ ಹಿಂದಿನ ಜಾಲವನ್ನು ಶೀಘ್ರವೇ ಬೇಧಿಸುವುದಾಗಿ ಕೇಂದ್ರ ವಲಯ ಐಜಿಪಿ ಸೀಮಂತಕುಮಾರ್‌ ಸಿಂಗ್‌ ಹೇಳಿದರು.

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಗಾಂಜಾ ಚಟುವಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಸೂಕ್ತ ಮಾಹಿತಿ ಪಡೆದು ಮಂಗಳವಾರದಂದು ಕೃಷ್ಣಗಿರಿ ಲೈನಿನ ಬಳಿ ಇರುವ ಪುರುಚ್ಚಿಕುಮಾರ್‌ ಎಂಬಾತನ ಮನೆಯ ಮೇಲೆ ಸರ್ಕಲ್‌ ಇನ್ಸ್‌ಪೆಕ್ಟರ್‌ ಸೂರ್ಯಪ್ರಕಾಶ್‌ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದರು. ದಾಳಿಯಲ್ಲಿ ದೊಡ್ಡ ಪ್ರಮಾಣದ ಗಾಂಜಾ ಪತ್ತೆಯಾಯಿತು.

ಕೇಂದ್ರ ವಲಯದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಗಾಂಜಾ ಸಿಕ್ಕಿರುವುದು ಎಂದು ಐಜಿಪಿ ಹೇಳಿದರು.

ಬಹುಮಾನ ಘೋಷಣೆ: ಜೋಸೆಫ್ ಎಂಬಾತನನ್ನು ಬಂಧಿಸಿರುವ ಪೊಲೀಸರು ಇನ್ನು ಹಲವಾರು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಬೆಂಗಳೂರು ನಗರಕ್ಕೆ ಇದು ಹತ್ತಿರವಾದ ಪ್ರದೇಶವಾಗಿದೆ. ಅದೇ ರೀತಿ ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೂ ಗಡಿಯಾಗಿದೆ. ಆದ್ದರಿಂದ ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರಿಗೆ ಸೂಚಿಸಲಾಗಿತ್ತು.

ಅದರಂತೆ ಕೆಜಿಎಫ್ ಪೊಲೀಸರು ಸಾಹಸದಿಂದ ಇಷ್ಟೊಂದು ಪ್ರಮಾಣದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಅವರು ಅಭಿನಂದನೆಗೆ ಅರ್ಹರು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಬಹುಮಾನ ಘೋಷಣೆ ಮತ್ತು ಪ್ರಶಂಸಾ ಪತ್ರ ನೀಡುವುದಾಗಿ ತಿಳಿಸಿದರು.

Advertisement

ಗೂಂಡಾ ಕಾಯ್ದೆ ಜಾರಿ: ನಗರದ ಕೆಲವು ಪ್ರದೇಶಗಳಲ್ಲಿ ರೌಡಿಗಳು ಸಮಾಜ ಘಾತಕ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಅವರಿಗೆ ಯಾವುದೇ ಮುಲಾಜು ನೋಡುವುದಿಲ್ಲ. ತಾವಾಗಿಯೇ ತಮ್ಮ ಚಟುವಟಿಕೆಯನ್ನು ಕಡಿಮೆ ಮಾಡಬೇಕು. ಇಲ್ಲವಾದಲ್ಲಿ ಗೂಂಡಾ ಕಾಯಿದೆಯನ್ನು ಜಾರಿಗೊಳಿಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಕಾರ್ಯಾಚರಣೆ ಪ್ರಾರಂಭ: ಗಾಂಜಾ ಎಲ್ಲಿಂದ ಬರುತ್ತಿದೆ ಎಂಬ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತಿದೆ. ಹಲವಾರು ತನಿಖಾ ತಂಡಗಳು ಕಾರ್ಯಪ್ರವೃತ್ತವಾಗಿವೆ. ಈ ಪ್ರಕರಣ ವೊಂದಕ್ಕೆ ಕಾರ್ಯಾಚರಣೆ ಸೀಮಿತವಲ್ಲ. ಇನ್ನು ಮುಂದೆ ಇನ್ನಷ್ಟು ಹೆಚ್ಚಾಗಿ ಕಾರ್ಯಾಚರಣೆ ನಡೆಯಲಿದೆ ಎಂದು ಎಸ್ಪಿ ತಿಳಿಸಿದರು.

ಎಸ್ಪಿ ಇಲಕ್ಕಿಯಾ ಕರುಣಾಗರನ್‌, ಡಿವೈಎಸ್ಪಿ ಬಿ.ಕೆ. ಉಮೇಶ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಗಳಾದ ಸೂರ್ಯಪ್ರಕಾಶ್‌, ಸಬ್‌ ಇನ್ಸ್‌ಪೆಕ್ಟರ್‌ ಆನಂದಬಾಬು, ಸಿಬ್ಬಂದಿಗಳಾದ ಮಹೇಂದ್ರ, ಚೇತನ್‌ ಕುಮಾರ್‌, ರಾಘವೇಂದ್ರ ನಾಯಕ್‌, ಲೋಕೇಶ್‌ ಇದ್ದರು.

ಗಡಿಯಲ್ಲಿ ಕಟ್ಟೆಚ್ಚರ: ಕೋಲಾರ ಜಿಲ್ಲೆಯು ಆಂಧ್ರ, ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಕಾರಣ ಇಲ್ಲಿ ಅಕ್ರಮವಾಗಿ ಗಾಂಜಾ ಸಾಗಾಣಿಕೆ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲೆಯ ಪೊಲೀಸರು ಅಗತ್ಯ ಕಟ್ಟೆಚ್ಚರ ವಹಿಸಿದ್ದಾರೆ. ಹೀಗಾಗಿ ಕೆಜಿಎಫ್ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುವವರನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next