Advertisement

ಮುನಿಯಪ್ಪ ಅಪ್ಪವಿಜಯಕ್ಕೆ ಮುನಿಸ್ವಾಮಿ ತೊಡರುಗಾಲು

01:22 AM Apr 06, 2019 | Sriram |

ಕೋಲಾರ: ಕಾಂಗ್ರೆಸ್‌ನ ಭದ್ರಕೋಟೆ ಎನಿಸಿರುವ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಭಾರೀ ಪೈಪೋಟಿ ನೀಡುತ್ತಿದೆ.

Advertisement

ಮೇಲ್ನೋಟಕ್ಕೆ ಮೋದಿ ಅಲೆ ಅಬ್ಬರಿಸುತ್ತಿದೆ. ಕಾಂಗ್ರೆಸ್‌ ಗುಪ್ತಗಾಮಿನಿಯಾಗಿದೆ.
ಈವರೆಗೂ ನಡೆದಿರುವ 16 ಲೋಕಸಭಾ ಚುನಾವಣೆಗಳ ಪೈಕಿ 15 ಬಾರಿ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ. ಕಾಂಗ್ರೆಸ್‌ನ ಕೆ.ಎಚ್‌.ಮುನಿಯಪ್ಪ ಸತತ ಏಳು ಗೆಲುವು ದಾಖಲಿಸಿ ಎಂಟನೇ ಗೆಲುವಿಗಾಗಿ ಚುನಾವಣಾ ಕಣದಲ್ಲಿದ್ದಾರೆ. ಇವರಿಗೆ ಬಿಜೆಪಿಯ ಕಾಡುಗೋಡಿ ಕಾರ್ಪೋರೇಟರ್‌ ಎಸ್‌.ಮುನಿಸ್ವಾಮಿ ಪೈಪೋಟಿ ನೀಡುತ್ತಿದ್ದಾರೆ. ಇವರಲ್ಲದೆ,ಕಣದಲ್ಲಿ ಬಿಎಸ್‌ಪಿ ಸೇರಿ ಒಟ್ಟು ಹದಿನಾಲ್ಕು ಮಂದಿ ಇದ್ದಾರೆ.

ಕಣ ಚಿತ್ರಣ: ಹಿಂದಿನ ಏಳು ಚುನಾವಣೆಗಳಲ್ಲಿಯೂ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುತ್ತಿತ್ತು. ತ್ರಿಕೋನ ಸ್ಪರ್ಧೆಯಲ್ಲಿ ವಿಜೇತರಾಗಿ
ಬೀಗುತ್ತಿದ್ದ ಕಾಂಗ್ರೆಸ್‌ನ ಕೆ.ಎಚ್‌.ಮುನಿಯಪ್ಪಗೆ ಈ ಬಾರಿ ನೇರ ಸ್ಪರ್ಧೆಯ ಅಗ್ನಿಪರೀಕ್ಷೆ ಎದುರಾಗಿದೆ. ಕಾಂಗ್ರೆಸ್‌ನ ಕೆ.ಎಚ್‌.ಮುನಿಯಪ್ಪ ಮತ್ತು ಬಿಜೆಪಿಯ ಎಸ್‌.ಮುನಿಸ್ವಾಮಿ ನಡುವೆ ನೇರಾನೇರಾ ಸ್ಪರ್ಧೆ ಏರ್ಪಟ್ಟಿದ್ದು, ಉಳಿದವರು ಆಟಕ್ಕುಂಟು ಲೆಕ್ಕಕ್ಕಿಲ್ಲ
ಎಂಬಂತಾಗಿದೆ.

ಮುನಿಯಪ್ಪಗೆ ಕ್ಷೇತ್ರ ಚಿರಪರಿಚಿತ. ಪ್ರತಿ ಮತಗಟ್ಟೆಯಲ್ಲಿಯೂ ಮತ ಪಡೆಯುವ ಸಾಮರ್ಥ್ಯವಿದೆ. ಚುನಾವಣೆ ನಡೆಸುವ ಕಲೆಕರಗತವಾಗಿರುವುದು ಪ್ಲಸ್‌ ಪಾಯಿಂಟ್‌. ಆಡಳಿತ ವಿರೋಧಿ ಅಲೆ, ಕಾಂಗ್ರೆಸ್‌ನಲ್ಲಿನ ಭಿನ್ನಮತ, ಅಕ್ರಮ ಆಸ್ತಿ ಸಂಪಾದನೆ ಆರೋಪ, ಸಾಧನೆ ಶೂನ್ಯವೆಂಬ ಆರೋಪಗಳು ಮೈನಸ್‌ ಪಾಯಿಂಟ್‌ಗಳಾಗಿವೆ.

ಬಿಜೆಪಿಯ ಎಸ್‌.ಮುನಿಸ್ವಾಮಿಗೆ ಮೋದಿ ಅಲೆಯ ಬಲ. ಕಾಂಗ್ರೆಸ್‌-ಜೆಡಿಎಸ್‌ ಅತೃಪ್ತರ ಬೆಂಬಲ ನಿರೀಕ್ಷೆ, ಬಹುಸಂಖ್ಯಾತ ದಲಿತ ಬಲಗೈ ಪಂಗಡಕ್ಕೆ ಸೇರಿರುವುದು
ಪ್ಲಸ್‌ ಪಾಯಿಂಟ್‌ಗಳಾಗಿವೆ. ಕ್ರಿಮಿನಲ್‌ ಮೊಕದ್ದಮೆಗಳು, ರೌಡಿ ಶೀಟರ್‌ ಆರೋಪ. ಪ್ರತಿ ಬೂತ್‌ಮಟ್ಟದಲ್ಲಿ ಬಿಜೆಪಿಗೆ ನೆಲೆ ಇಲ್ಲದಿರುವುದು,ಕ್ಷೇತ್ರಕ್ಕೆ ಹೊಸಬರಾಗಿರುವುದು, ಇತರ ಪಕ್ಷದ ಮುಖಂಡರ ಮೇಲಿನ ಅವರ ಅವಲಂಬನೆ ಮೈನಸ್‌ ಪಾಯಿಂಟ್‌.

Advertisement

ಈ ಬಾರಿ ಪಕ್ಷಗಳ ನಡುವಿನ ಕದನಕ್ಕಿಂತಲೂ ಮುನಿಯಪ್ಪ ಪರ ಮತ್ತು ವಿರುದಟಛಿವಾಗಿ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್‌-ಜೆಡಿಎಸ್‌ ಅತೃಪ್ತರು ಅತೃಪ್ತರಾಗಿಯೇ ಉಳಿದರೆ ಮುನಿಯಪ್ಪಗೆ ಮುಳುವಾಗಲಿದೆ. ಬಿಜೆಪಿಗೆ ಲಾಭವಾಗಲಿದೆ. ಕಾಂಗ್ರೆಸ್‌ಗೆ ದಲಿತ ಎಡಗೈ, ಅಲ್ಪಸಂಖ್ಯಾತರು ಹಾಗೂ ದಲಿತ ಬಲಗೈ ಹಾಗೂ ಒಕ್ಕಲಿಗರ ಒಂದು ಗುಂಪು
ಬೆಂಬಲವಾಗಿದೆ. ಬಿಜೆಪಿಗೆ ದಲಿತ ಬಲಗೈ ಜಾತಿ ಬೆಂಬಲವಿದೆ. ತಮ್ಮದೇ ತಂತ್ರಗಾರಿಕೆ, ಚಾಣಾಕ್ಷತನಗಳಿಂದ ಏಳು ಬಾರಿ ಗೆದ್ದಿರುವ ಮುನಿಯಪ್ಪ ಅವರ ಎಂಟನೇ ಗೆಲುವನ್ನು– ಮುನಿಸ್ವಾಮಿ ತಡೀತಾರಾ?, ಇಲ್ಲವಾ? ಎನ್ನುವುದನ್ನು ಚುನಾವಣೆ ನಿರ್ಧರಿಸಬೇಕಿದೆ.

ಕ್ಷೇತ್ರವ್ಯಾಪ್ತಿ
ಕೋಲಾರ ಜಿಲ್ಲೆಯ ಕೋಲಾರ,ಬಂಗಾರಪೇಟೆ, ಕೆಜಿಎಫ್, ಮುಳಬಾಗಿಲು, ಶ್ರೀನಿವಾಸಪುರ ಮತ್ತು ಮಾಲೂರು, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮತ್ತು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಗಳು ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತವೆ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್‌, ಎರಡರಲ್ಲಿ ಜೆಡಿಎಸ್‌ ಮತ್ತು ಒಂದರಲ್ಲಿ ಪಕ್ಷೇತರ ಶಾಸಕರಿದ್ದಾರೆ.

ನಿರ್ಣಾಯಕ ಅಂಶ
ಕ್ಷೇತ್ರದಲ್ಲಿ ದಲಿತ ಮತದಾರರೇ ಹೆಚ್ಚು. ಆದರೆ, ಮೀಸಲು ಕ್ಷೇತ್ರವಾದ್ದರಿಂದ ದಲಿತ ಅಭ್ಯರ್ಥಿಗಳ ಒಳಪಂಗಡಗಳಲ್ಲಿ ಮತ ವಿಭಜನೆಯಾಗುವುದರಿಂದ ಹಿಂದುಳಿದ, ಒಕ್ಕಲಿಗ ಹಾಗೂ ಅಲ್ಪಸಂಖ್ಯಾತರ ಮತಗಳು ನಿರ್ಣಾಯಕವಾಗುತ್ತವೆ. ಇಡೀ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಾಂಪ್ರದಾಯಿಕ ಸ್ಪರ್ಧಿಗಳಾಗಿದ್ದು, ಮೈತ್ರಿ ಧರ್ಮದ ಪಾಲನೆ ಅಷ್ಟಾಗಿ ಕಾಣಿಸುತ್ತಿಲ್ಲ. ಕೋಲಾರ ಲೋಕಸಭಾ ಕ್ಷೇತ್ರ, ಕಾಂಗ್ರೆಸ್‌ನ ಭದ್ರಕೋಟೆ ಎನಿಸಿದ್ದರೂ, ಈ ಬಾರಿ ಕಾಂಗ್ರೆಸ್‌ ಪಕ್ಷವನ್ನು ಆಂತರಿಕ ಭಿನ್ನಮತ ಕಾಡುತ್ತಿದೆ. ಇದರ ಲಾಭದಿಂದ ಗೆಲುವು ಸಂಪಾದಿಸಲು ಬಿಜೆಪಿ ಹವಣಿಸುತ್ತಿದೆ.

– ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next