ಮುಳಬಾಗಿಲು : ಅಕ್ರಮ ಮರಳು ಫಿಲ್ಟರ್ ದಂಧೆಯಲ್ಲಿ ತೊಡಗಿದ್ದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿದ್ದ ಆರೋಪಿಯನ್ನು ಪೊಲೀಸರು ಕೇಸು ದಾಖಲಿಸದೇ ಬಿಡುಗಡೆ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ತಾಲೂಕಿನ ಮುಷ್ಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ಯಾಟನೂರು ಬಳಿ ಕೌಂಡಿನ್ಯ ನದಿಯಲ್ಲಿ ಹಲವು ದಿನಗಳಿಂದ ಅಕ್ರಮವಾಗಿ ಮರಳು ಫಿಲ್ಟರ್ ಮಾಡುತ್ತಿದ್ದ 3 ಅಡ್ಡೆಗಳ ಮೇಲೆ ಶನಿವಾರ ಸಂಜೆ ನಂಗಲಿ ಠಾಣೆ ಪಿಎಸ್‌ಐ ವರಲಕ್ಷ್ಮಮ್ಮ ಹಾಗೂ ಸಿಬ್ಬಂದಿ ದಾಳಿ ಮಾಡಿ 5 ಟ್ರ್ಯಾಕ್ಟರ್ ಮರಳನ್ನು ಠಾಣೆಗೆ ಸಾಗಿಸಿದ್ದರು.
ಆರೋಪಿ ಬಿಡುಗಡೆ: ನಂತರ ಜೆಸಿಬಿ ಯಂತ್ರದಿಂದ ಫಿಲ್ಟರ್ ಅಡ್ಡೆಗಳನ್ನು ನಾಶಪಡಿಸಿ, ಅದರ ಮೇಲೆ ಗಿಡ ಗಂಟಿ ಮುಚ್ಚಿ ದಂಧೆಯ ಪ್ರಮುಖ ಆರೋಪಿ ಚಿಕ್ಕನಗವಾರ ಹರಿಕೃಷ್ಣ ಎಂಬಾತನನ್ನು ಬಂಧಿಸಿದ್ದರು. ಆದರೆ, ಆರೋಪಿಯನ್ನು ಠಾಣೆಗೆ ಕರೆ ತಂದ ಪಿಎಸ್‌ಐ ಪ್ರಕರಣ ದಾಖಲಿಸದೇ ಆ ಮರಳು ಫಿಲ್ಟರ್ ಅಡ್ಡೆಗಳು ಆಂಧ್ರಪ್ರದೇಶದ ಜಮೀನು ವ್ಯಾಪ್ತಿಯಲ್ಲಿ ಇದೆ ಎಂದು ಹೇಳಿ ಆರೋಪಿಯನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಅಡ್ಡೆಗಳು ಆಂಧ್ರಕ್ಕೆ ಸೇರಲ್ಲ: ವಾಸ್ತವವಾಗಿ ಈ ಮರಳು ಫಿಲ್ಟರ್ ಅಡ್ಡೆಗಳು ಬ್ಯಾಟನೂರು ಗ್ರಾಮ ವ್ಯಾಪ್ತಿಯಲ್ಲಿ ಹರಿಯುವ ಕೌಂಡಿನ್ಯ ನದಿಯಲ್ಲಿ, ಆಂಧ್ರಗಡಿ ರೇಖೆಯಿಂದ 1 ಕಿ.ಮೀ. ದೂರದಲ್ಲಿ ಇವೆ. ಈ ಮರಳು μಲ್ಟರ್ ಅಡ್ಡೆಗಳು ಠಾಣೆ ವ್ಯಾಪ್ತಿಯಲ್ಲಿ ಬಾರದೇ ಇದ್ದಲ್ಲಿ ಅಡ್ಡೆಗಳನ್ನು ಏಕೆ ನಾಶ ಪಡಿಸಿದರು. ಆಂಧ್ರದ ವ್ಯಾಪ್ತಿಯಲ್ಲಿ ಬರುವುದಾದರೆ ಆಂಧ್ರ ಪೊಲೀಸರಿಗೆ
ತಿಳಿಸಬಹುದಾಗಿತ್ತು. ಒಂದು ವೇಳೆ ನಾಶಪಡಿಸಿದರೂ ಅಲ್ಲಿದ್ದ 5 ಲೋಡ್ ಮರಳನ್ನು ಸಾಗಿಸಿ ಠಾಣೆ ಆವರಣದಲ್ಲಿ ಹಾಕಿಸಿದರೂ ದಂಧೆಯಲ್ಲಿ ತೊಡಗಿದ್ದ, ಬಂಧಿಸಿದ ಆರೋಪಿಯನ್ನು ಪ್ರಕರಣ ದಾಖಲಿಸದೇ ಬಿಟ್ಟು ಕಳುಹಿಸಿರುವ ವಿಚಾರ ಸಾರ್ವಜನಿಕರಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ : ಮಂಜುನಾಥ ಬಡಾವಣೆಯಲ್ಲಿ ಹಂದಿ, ಸೊಳ್ಳೆಗಳ ಕಾಟ; ದುರ್ವಾಸನೆಗೆ ನಿವಾಸಿಗಳು ಹೈರಾಣ
ಈ ಕುರಿತು ಪ್ರತಿಕ್ರಿಯಿಸಿದ ನಂಗಲಿ ಠಾಣೆಯ ಪೇದೆ ಶ್ರೀನಿವಾಸ್, ಅಕ್ರಮ ಮರಳು ಫಿಲ್ಟರ್ ದಂಧೆಯ ಮೇಲೆ ದಾಳಿ ಮಾಡಿರುವುದು ಪಿಎಸ್‌ಐ ಅವರಿಗೆ ಬಿಟ್ಟ ವಿಚಾರವೆಂದರು.