ಕೋಲಾರ: ನಗರಸಭಾ ಚುನಾವಣಾ ಕಣದಲ್ಲಿ ಒಂದೇ ಕುಟುಂಬದ ಇಬ್ಬರು ಮೂವರು ಬೇರೆ ವಾರ್ಡುಗಳ ಮೂಲಕ ಚುನಾವಣೆಗೆ ಸ್ಪರ್ಧಿಸಿದ್ದರೆ, ಕೆಲವು ವಾರ್ಡುಗಳಲ್ಲಿ ಬಂಧುಗಳೇ ದುರಾಳಿಗಳಾಗಿ ಪೈಪೋಟಿ ನಡೆಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
Advertisement
ಬಾಬು ಕುಟುಂಬ: ಕೋಲಾರ ನಗರಸಭೆ ಹಿಂದಿನ ಅವಧಿಯಲ್ಲಿಯೂ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಪ್ರಸಾದಬಾಬು ಹಾಗೂ ಅವರ ಪತ್ನಿ ಮಹಾಲಕ್ಷ್ಮೀ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಂಪಾದಿಸಿದ್ದರು.
Related Articles
Advertisement
ಪಿವಿಸಿ ಕೃಷ್ಣಪ್ಪ ಕುಟುಂಬ: ಅಂಬೇಡ್ಕರ್ ನಗರದ ಪಿವಿಸಿ ಎ.ಕೃಷ್ಣಪ್ಪರ ಕುಟುಂಬದಿಂದಲೂ ಇಬ್ಬರು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಕೃಷ್ಣಪ್ಪರ ಸಹೋದರ ಎ.ರಮೇಶ್ 24 ನೇ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಕೃಷ್ಣಪ್ಪರ ಮತ್ತೋರ್ವ ಸಹೋದರ ರಾಮುರ ಪತ್ನಿ ಎನ್.ಅಪೂರ್ವ ಪಕ್ಷೇತರ ಅಭ್ಯರ್ಥಿಯಾಗಿ 5ನೇ ವಾರ್ಡಿನಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಸಿಪಿಎಂನಲ್ಲಿ: ಕೋಲಾರ ನಗರದ 35 ವಾರ್ಡುಗಳ ಪೈಕಿ ಸಿಪಿಎಂ ಕೇವಲ ಎರಡು ವಾರ್ಡುಗಳಿಂದ ಮಾತ್ರವೇ ಸ್ಪರ್ಧೆ ಬಯಸಿದೆ. ಎರಡು ವಾರ್ಡುಗಳಲ್ಲಿಯೂ ಅಣ್ಣ ತಮ್ಮ ಸಂಬಂಧಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. 2 ನೇ ವಾರ್ಡಿನಿಂದ ಪಿ.ವೆಂಕಟರಮಣ ಹಾಗೂ 7ನೇ ವಾರ್ಡಿನಿಂದ ಗಾಂಧಿನಗರ ನಾರಾಯಣ ಸ್ವಾಮಿ ಚುನಾವಣೆಗೆ ಸ್ಪರ್ಧಿಸಿ ಮತದಾರರ ಮನ ಗೆಲ್ಲುವ ಪ್ರಯತ್ನದಲ್ಲಿದ್ದಾರೆ.
ಕಠಾರಿಪಾಳ್ಯ ವಾರ್ಡ್: ಕೋಲಾರದ ಕಠಾರಿಪಾಳ್ಯದ ವಾರ್ಡ್ ಸಂಖ್ಯೆ 20ರಲ್ಲಿ ಸಹೋದರ ಸಂಬಂಧಿಗಳು ಪ್ರತಿಸ್ಪರ್ಧಿಗಳಾಗಿದ್ದಾರೆ. ಸಹೋದರ ಸಂಬಂಧಿಗಳಾದ ಮಧು ತನ್ನ ಪುತ್ರಿ ದೇವಿಕಾರನ್ನು ಜೆಡಿಎಸ್‌ನಿಂದ ಕಣಕ್ಕಿಳಿಸಿದ್ದರೆ, ಬಿಜೆಪಿಯಲ್ಲಿರುವ ಮು.ರಾಘವೇಂದ್ರ ತನ್ನ ಪತ್ನಿ ಸೌಭಾಗ್ಯರನ್ನು ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ.
ಹಾರೋಹಳ್ಳಿ ವಾರ್ಡ್: ಕೋಲಾರ ನಗರದ ಹಾರೋಹಳ್ಳಿ ವಾರ್ಡ್ ಸಂಖ್ಯೆ 15 ರಲ್ಲಿ ಬಹುತೇಕ ಸಂಬಂಧಿಗಳ ಪೈಪೋಟಿಯಿಂದಲೇ ಗಮನ ಸೆಳೆಯುತ್ತಿದೆ. ಎಂಟು ಮಂದಿ ಮಹಿಳೆಯರು ಚುನಾವಣಾ ಕಣದಲ್ಲಿದ್ದಾರೆ. ಈ ಪೈಕಿ ಒಬ್ಬರನ್ನು ಹೊರತುಪಡಿಸಿದರೆ ಎಲ್ಲಾ ಅಭ್ಯರ್ಥಿ ಗಳು ಪರಸ್ಪರ ಸಹೋದರ ಸಂಬಂಧಿಗಳ ಪತ್ನಿಯರಾಗಿರುವುದು ವಿಶೇಷವೆನಿಸಿದೆ. ಇವರೆಲ್ಲರೂ ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪರಿಗೂ ಹತ್ತಿರದ ಸಂಬಂಧಿ ಗಳೆನ್ನುವುದು ಮತ್ತೂಂದು ವಿಶೇಷ.
ರಹಮತ್‌ನಗರ: ಕೋಲಾರ ರಹಮತ್‌ನಗರದ 30 ನೇ ವಾರ್ಡಿನಲ್ಲಿ ಜೆಡಿಎಸ್ ಅಭ್ಯರ್ಥಿ ನಸೀಮಾ ತಾಜ್ ಹಾಗೂ ಸಮೀಪ ಬಂಧು ನೂರಿ ಪಕ್ಷೇತರರಾಗಿ ಚುನಾವಣಾ ಕಣದಲ್ಲಿದ್ದಾರೆ.
ತಾಪಂ ಅಧ್ಯಕ್ಷರ ಪತ್ನಿ: ಕೋಲಾರ ತಾಪಂ ಅಧ್ಯಕ್ಷ ಸೂಲೂರು ಆಂಜಿನಪ್ಪರ ಪತ್ನಿ ಎನ್.ಸುವರ್ಣ 15 ನೇ ವಾರ್ಡಿನಿಂದ ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಿ ಗೆಲುವಿನ ಪ್ರಯತ್ನ ನಡೆಸಿದ್ದಾರೆ.
ಜಿಲ್ಲೆಯ ಹಿರಿಯ ರಾಜಕಾರಣಿ ಭೂಹೋರಾಟದ ಹರಿಕಾರ ದಿವಂಗತ ಪಿ.ವೆಂಕಟಗಿರಿಯಪ್ಪರ ಕುಟುಂಬದ ಮೂರನೇ ತಲೆಮಾರಿನ ಅಂದರೆ ಪಿ.ವಿ ಅವರು ಮೊಮ್ಮಗ ಸಿ.ರಾಕೇಶ್ ಜೆಡಿಎಸ್ ಪಕ್ಷದಿಂದ ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಹಿರಿಯ ರಾಜಕಾರಣಿ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ರಾಮರಾಜು ತನ್ನ ಸೊಸೆ ಸ್ವಾತಿಯನ್ನು ಜೆಡಿಎಸ್ ಪಕ್ಷದಿಂದ ಚುನಾವಣೆಗೆ ನಿಲ್ಲುವಂತೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾಗಿದ್ದ ಕೆ.ವಿ.ಸುರೇಶ್ ಕುಮಾರ್ ತನಗೆ ಹಾಗೂ ತನ್ನ ಪತ್ನಿಗೆ ಕಾಂಗ್ರೆಸ್ ಪಕ್ಷದಿಂದ ಬಿ.ಫಾರಂ ಕೋರಿ ಅರ್ಜಿ ಸಲ್ಲಿಸಿದ್ದರು.
ಆದರೆ, ಇಬ್ಬರಿಗೂ ಬಿ ಫಾರಂ ಸಿಗದಿದ್ದ ಕಾರಣದಿಂದ ಜೆಡಿಎಸ್ ಬಿ ಫಾರಂ ಪಡೆದು ತನ್ನ ಪತ್ನಿ ಎಸ್.ಎನ್. ಗೀತಾರಾಣಿಯವರನ್ನು ಚುನಾವಣಾ ಕಣಕ್ಕಿಳಿಸಿದ್ದಾರೆ.
ಒಟ್ಟಾರೆ ಕೋಲಾರದ ಹಲವಾರು ವಾರ್ಡುಗಳಲ್ಲಿ ಪರಸ್ಪರ ಸಂಬಂಧಿಕರೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಗೆ ಇಳಿದಿರುವುದು ಈ ಚುನಾವಣೆಯ ವಿಶೇಷ ಎನಿಸಿದೆ. ಮಾಜಿ ಸಚಿವ ವರ್ತೂರು ಪ್ರಕಾಶ್ ತನ್ನ ಸಂಬಂಧಿ ಸಿ.ಸೋಮಶೇಖರ್‌ರನ್ನು 4 ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲಿಸಿದ್ದು, ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.