Advertisement

Milk Union: ಹಾಲು ಉತ್ಪಾದಕರಿಗೆ ದರ ಕಡಿತದ ಬರೆ!

04:16 PM Dec 03, 2023 | Team Udayavani |

ಚಿಕ್ಕಬಳ್ಳಾಪುರ: ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ದಿಢೀರ್‌ನೆ ಪ್ರತಿ ಲೀಟರ್‌ ಹಾಲಿನ ಮೇಲೆ 1 ರೂ.ದರ ಕಡಿತಗೊಳಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದ್ದು, ಬರದಲ್ಲೂ ಕೋಚಿಮುಲ್‌ ಆಡಳಿತ ಮಂಡಳಿ ರೈತರ ನೆರವಿಗೆ ಧಾವಿಸದೇ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ಪ್ರತಿ ಲೀಟರ್‌ ಹಾಲಿಗೆ ಕೋಚಿಮುಲ್‌ ಇಲ್ಲಿವರೆಗೂ 34.40 ಪೈಸೆ ದರ ನೀಡುತ್ತಿತ್ತು. ಆದರೆ ಇದೀಗ 1 ರೂ. ದರ ಕಡಿತಗೊಳಿಸಿದ್ದು, ರೈತರಿಗೆ ಪ್ರತಿ ಲೀಟರ್‌ಗೆ 33.40 ಪೈಸೆ ಸಿಗಲಿದೆ. ಬರಗಾಲದ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಂಕಷ್ಟದಲ್ಲಿ ರುವಾಗ ಬೆಲೆ ಕಡಿತ ಎಷ್ಟು ಮಾತ್ರ ಸರಿ ಎನ್ನುವ ಮಾತು ಜಿಲ್ಲೆಯ ಹೈನೋದ್ಯಮ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.

Advertisement

ಜಿಲ್ಲೆಗೆ ಹೈನೋದ್ಯಮವೇ ಜೀವಾಳ: ಬರಪೀಡಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷಿ, ತೋಟಗಾರಿಕೆಗಿಂತ ಹೆಚ್ಚಾಗಿ ಹೈನೋದ್ಯಮವೇ ಎರಡು ಜಿಲ್ಲೆಗಳ ಲಕ್ಷಾಂತರ ಕುಟುಂಬಗಳಿಗೆ ಜೀವಾಳ ಆಗಿದೆ. ಸಣ್ಣ, ಅತಿ ಸಣ್ಣ ರೈತರು, ಮಧ್ಯಮ ವರ್ಗದ ರೈತರು ಹೈನೋದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಕೋಚಿಮುಲ್‌ ಆಡಳಿತ ಬರಗಾಲದದಲ್ಲಿ ರೈತರ ನೆರವಿಗೆ ಬರುವುದು ಬಿಟ್ಟು ಪ್ರತಿ ಲೀಟರ್‌ ಹಾಲಿನ ಮೇಲೆ 1 ರೂ. ಕಡಿತಗೊಳಿಸುವ ಮೂಲಕ ರೈತರು ಇನ್ನಷ್ಟು ಸಂಕಷ್ಟಕ್ಕಿಡಾಗುವಂತಾಗಿದೆ ಮಾಡಿದೆ.

ಹೇಳಿ ಕೇಳಿ ಜಿಲ್ಲೆಯು ಆಂಧ್ರದ ಗಡಿಯಲ್ಲಿದೆ. ಜಿಲ್ಲೆಯಲ್ಲಿ ಮೊದಲೇ ಬರದಿಂದ ಹಾಲಿನ ಉತ್ಪಾದನೆ ದಿನದಿಂದ ದಿನಕ್ಕೆ ಕ್ಷೀಣಿಸಿ ತೊಡಗಿದೆ. ಖಾಸಗಿ ಡೇರಿಗಳ ಅಬ್ಬರ ಮಧ್ಯೆ ಕೋಚಿಮುಲ್‌ ಡೇರಿಗಳು ನಲುಗುತ್ತಿವೆ. ಇತಂಹ ಸಂದರ್ಭದಲ್ಲಿ ರೈತರಲ್ಲಿ ಇನ್ನಷ್ಟು ವಿಶ್ವಾಸ ಮೂಡಿಸುವ ದಿಸೆಯಲ್ಲಿ ರೈತರ ಕೈ ಹಿಡಿಯಬೇಕಾದ ಕೋಚಿಮುಲ್‌ ಆಡಳಿತ ಮಂಡಳಿ ಬೆಲೆ ಕಡಿತ ಮಾಡಿರುವುದು ಜಿಲ್ಲೆಯ ಹಾಲು ಉತ್ಪಾದಕರ ಆಕ್ರೋಶಕ್ಕೆ ಕಾರಣವಾಗಿದೆ.

ಇತ್ತೀಚಿನ ದಿನಗಳಲ್ಲಿ ಗುಣಮಟ್ಟದ ಮೇವು ಸಿಗದೇ ಅದರಲ್ಲೂ ಹಸಿರು ಮೇವು ಸಿಗದೇ ರೈತರು ಪರದಾಡುತ್ತಿದ್ದು, ಇದರ ನಡುವೆ ಪಶು ಆಹಾರ ಬೆಲೆ ಕೂಡ ಮುಕ್ತ ಮಾರುಕಟ್ಟೆಯಲ್ಲಿ ವಿಪರೀತ ಏರಿಕೆ ಆಗಿರುವುದರ ಪರಿಣಾಮ ಹೈನೋದ್ಯಮ ಕೂಡ ರೈತರಿಗೆ ಸಾಕಷ್ಟು ಆರ್ಥಿಕ ಹೊರೆಯಾಗಿದೆ ಎನ್ನುವ ಮಾತು ಕೇಳಿ ಬರುತ್ತಿದ್ದು, ಇದರ ನಡುವೆ ಕೋಚಿಮುಲ್‌ ದರ ಕಡಿತಗೊಳಿಸಿರುವುದು ಹಾಲು ಉತ್ಪಾದಕರ ಅಸಮಾಧಾನಕ್ಕೆ ಕಾರಣವಾಗಿದೆ.

ಬೆಲೆ ಕಡಿತಕ್ಕೆ ಸಚಿವರು ತೀವ್ರ ಅಸಮಾಧಾನ! : ರಾಜ್ಯದ ಕೆಲವೊಂದು ಹಾಲು ಒಕ್ಕೂಟಗಳು ರೈತರಿಗೆ ನೀಡುವ ಹಾಲಿನ ದರವನ್ನು ಇಳಿಕೆ ಮಾಡಿರುವುದಕ್ಕೆ ಪಶು ಸಂಗೋಪನಾ ಸಚಿವ ವೆಂಕಟೇಶ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಈ ಕುರಿತು ಪತ್ರಿಕ್ರಿಯೆ ನೀಡಿರುವ ಅವರು, ಬರಗಾಲದ ಸಂದರ್ಭದಲ್ಲಿ ಹಾಲಿನ ದರ ಕಡಿತದಿಂದ ರೈತರಿಗೆ ತೊಂದರೆ ಆಗುತ್ತದೆಯೆಂದು ಅವರು ಒಕ್ಕೂಟಗಳ ಬೆಲೆ ಇಳಿಕೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಅನುದಾನ ಕೊರತೆಗೆ ಬೆಲೆ ಕಡಿತ!: ಕೋಚಿಮುಲ್‌ ವತಿಯಿಂದ ಸರಿ ಸುಮಾರು 350 ಕೋಟಿ ರೂ. ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಪ್ರಮುಖವಾಗಿ ಕೋಲಾರದಲ್ಲಿ ಗೋಲ್ಡ್‌ ಡೇರಿಗೆ 150 ಕೋಟಿ ರೂ. ಚಿಂತಾಮಣಿಯಲ್ಲಿ ಐಸ್‌ ಕ್ರೀಂ ಫ್ಯಾಕ್ಟರಿಗೆ 50 ಕೋಟಿ, ಚಿಕ್ಕಬಳ್ಳಾಪುರದಲ್ಲಿ ಟೆಟ್ರಾಪ್ಯಾಕ್‌ ಯೋಜನೆಗೆ ಸುಮಾರು 50 ಕೋಟಿ ಯೋಜನೆ ಹಾಗೂ ಸೋಲಾರ್‌ ಪ್ಲಾಂಟ್‌ಗೆ ಸುಮಾರು 60 ಕೋಟಿ ಹೀಗೆ 350 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಗಳನ್ನು ಕೈಗೊಳ್ಳುತ್ತಿರುವುದರಿಂದ ಬಂಡವಾಳ ಹೂಡಿಕೆಗೆ ಅನುದಾನ ಅವಶ್ಯಕತೆ ಇದ್ದು, ಲೀಟರ್‌ ಮೇಲೆ 1 ರೂ. ಕಡಿತಗೊಳಿಸಲಾಗಿದೆ.

ಈ ಮೊದಲು ಕೂಡ ಮೂಲಭೂತ ಸೌಕರ್ಯ ನಿಧಿಗಾಗಿ ರೈತರಿಂದ ಲೀಟರ್‌ ಮೇಲೆ 1ರೂ.ಕಡಿತ ಮಾಡುತ್ತಿದ್ದವು. ಅದನ್ನು ಒಂದು ವರ್ಷದಿಂದ ಮಾಡಿರಲಿಲ್ಲ. ಹಾಗಾಗಿ 1 ರೂ.ಕಡಿತ ಮಾಡುತ್ತಿದ್ದೇವೆ, ಹಾಲಿನ ಉತ್ಪಾದನೆ ಕೂಡ ನಿರೀಕ್ಷೆಗೂ ಮೀರಿ ಅಧಿಕವಾಗಿರುವುದರಿಂದ ಬೆಲೆ ಕಡಿತ ಅನಿರ್ವಾಯ. ಮತ್ತೆ ದರ ಹೆಚ್ಚಿಸುತ್ತೇವೆಂದು ಕೋಚಿಮುಲ್‌ ನಿರ್ದೇಶಕರಾದ ಊಲವಾಡಿ ಅಶ್ವತ್ಥನಾರಾಯಣ ಬಾಬು ಉದಯವಾಣಿಗೆ ತಿಳಿಸಿದರು.

ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಅದರಲ್ಲೂ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ರಾಸುಗಳಿಗೆ ಮೇವು, ನೀರಿಗೆ ತೀವ್ರ ಹಾಹಾಕಾರ ಇರುವ ಸಂದರ್ಭದಲ್ಲಿ ಹಾಲಿನ ದರ ಕಡಿತಗೊಳಿಸಿರುವುದು ಸರಿಯಲ್ಲ. ಅಭಿವೃದ್ಧಿ ಕೆಲಸಗಳಿಗೆ ಆರ್ಥಿಕ ಮುಗ್ಗಟ್ಟು ಎಂದು ಹೇಳುತ್ತಿದ್ದಾರೆ.

ಒಕ್ಕೂಟ 19 ಕೋಟಿ ಲಾಭದಲ್ಲಿದೆ ಎನ್ನುತ್ತಾರೆ. ಇತಂಹ ವೇಳೆ 300 ಕೋಟಿಗೂ ಹೆಚ್ಚು ಅಧಿಕ ಟೆಂಡರ್‌ಗಳನ್ನು ಕರೆದು ನೂರಾರು ಕೋಟಿ ಸಾಲ ಮಾಡಿ ಒಕ್ಕೂಟವನ್ನು ದಿವಾಳಿ ಅಂಚಿಗೆ ತಲುಪುವ ದಿನಗಳು ದೂರವಿಲ್ಲ. ಈಗಾಗಲೇ ಒಕ್ಕೂಟದಿಂದ ಉತ್ಪಾದಕರಿಗೆ ಸಾಕಷ್ಟು ಆನ್ಯಾಯ ಆಗಿದ್ದು, ಇದರಿಂದ ಉತ್ಪಾದಕರು ಒಕ್ಕೂಟದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಕೋಚಿಮುಲ್‌ – ಕೆ.ವಿ.ನಾಗರಾಜ್‌, ಒಕ್ಕೂಟದ ಮಾಜಿ ಅಧ್ಯಕ್ಷರು.

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next