ಭಾರತೀನಗರ: ಸಮೀಪದ ಕೊಕ್ಕರೆಬೆಳ್ಳೂರು ಪಕ್ಷಿಧಾಮದಲ್ಲಿ ಕಳೆದ ಮಂಗಳವಾರ (ಮಾ.17) ಮೃತಪಟ್ಟಿದ್ದ ಪೆಲಿಕಾನ್‌ಗೆ ಹಕ್ಕಿಜ್ವರವಿಲ್ಲ ಎಂದು ಬೆಂಗಳೂರು ಹೆಬ್ಟಾಳದ ಪಶು ವೈದ್ಯಕೀಯ ಹಾಗೂ ಜೈವಿಕ ಸಂಸ್ಥೆ ದೃಢೀಕರಿಸಿದೆ.
ಮೃತ ಪೆಲಿಕಾನ್ ಕಳೆದ ಮಾ.13ರಂದು ಶುಕ್ರವಾರ ಅಸ್ವಸ್ಥಗೊಂಡು ಮರದಿಂದ ಕೆಳಕ್ಕುರುಳಿತ್ತು. ಕೂಳಗೆರೆ ಪಶು ಆಸ್ಪತ್ರೆ ವೈದ್ಯ ಡಾ.ಸತೀಶ್, ಅಸ್ವಸ್ಥಗೊಂಡ ಪೆಲಿಕಾನ್‌ಗೆ ಶುಶ್ರೂಷೆ ನೀಡುತ್ತಿದ್ದರು. ಅಸ್ವಸ್ಥಗೊಂಡ ಪೆಲಿಕಾನ್ ವೈದ್ಯರ ಚಿಕಿತ್ಸೆಗೆ ಸ್ಪಂದಿಸದೇ ಮಂಗಳವಾರ(ಮಾ.17ರಂದು) ಅಸು ನೀಗಿತ್ತು.
ಮೃತ ಪೆಲಿಕಾನ್‌ಗೆ ಹಕ್ಕಿಜ್ವರ ಇದೆಯೋ ಇಲ್ಲವೋ ದೃಢೀಕರಿಸಿಕೊಳ್ಳಲು, ಪೆಲಿಕಾನ್ ಕಳೇಬರವನ್ನು ಹೆಬ್ಟಾಳದ ಪಶು ವೈದ್ಯಕೀಯ ಹಾಗೂ ಜೈವಿಕ ಸಂಸ್ಥೆಗೆ ಕಳುಹಿಸಿಕೊಡಲಾಗಿತ್ತು. ಮೃತಪಟ್ಟ ಪೆಲಿಕಾನ್‌ನಲ್ಲಿ ಹಕ್ಕಿಜ್ವರದ ಲಕ್ಷಣ ಕಂಡು ಬಂದಿಲ್ಲ ಎಂದು ಸಂಸ್ಥೆ ವರದಿ ತಿಳಿಸಿದೆ ಎಂದು ಕೂಳಗೆರೆ ಪಶು ಆಸ್ಪತ್ರೆ ವೈದ್ಯ ಡಾ.ಸತೀಶ್ ಹೇಳಿದರು.
ಮೈಸೂರಿನಲ್ಲಿ ಹಕ್ಕಿಜ್ವರ ದೃಢಪಟ್ಟ ಬೆನ್ನಲ್ಲೇ ಕೊಕ್ಕರೆಬೆಳ್ಳೂರು ಪಕ್ಷಿಧಾಮದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಮಾ.18ರಂದು ಗ್ರಾಮಕ್ಕೆ ಭೇಟಿ ನೀಡಿ ಮುಂಜಾಗ್ರತೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದರಂತೆ ಆಗಾಗ್ಗೆ ಆ್ಯಂಟಿ ವೈರಲ್ ಔಷಧ ಸಿಂಪಡಣೆ, ನಾಟಿ ಕೋಳಿಗಳ ರಕ್ತದ ಮಾದರಿ, ಹಿಕ್ಕೆ, ಮಣ್ಣು, ನೀರು ಪರೀಕ್ಷೆ ಮಾಡಲಾಗುತ್ತಿದೆ ಎಂದು ವೈದ್ಯರು ಹೇಳಿದರು.
ಮಾ.17ರಂದು ಮೃತಪಟ್ಟ ಪೆಲಿಕಾನ್ ಹಕ್ಕಿ ದೊಡ್ಡದೊಂದು ಮೀನು ನುಂಗಿ ಜೀರ್ಣಿಸಿಕೊಳ್ಳಲಾಗದೆ ಮೃತಪಟ್ಟಿದೆ. ಮೃತಪಟ್ಟಿರುವ ಈ ಪೆಲಿಕಾನ್ ಹಕ್ಕಿಗೆ ಹಕ್ಕಿಜ್ವರವಿಲ್ಲ ಎಂದು ವರದಿ ಬಂದಿದೆ.
-ಡಾ.ಸತೀಶ, ಪಶುವೈದ್ಯಾಧಿಕಾರಿ, ಕೂಳಗೆರೆ