Advertisement
ಊರ ಪರವೂರ ಜನರು ಬೆಳಗ್ಗಿನಿಂದಲೇ ತಲೆಯಲ್ಲಿ ಸೊಪ್ಪಿನ ಕಟ್ಟು ಹೊತ್ತುಕೊಂಡು ಗದ್ದೆಗೆ ಸುತ್ತು ಬಂದು ಕೋರಿ ಗದ್ದೆಗೆ ಸೊಪ್ಪನ್ನು ಹಾಕಿ ಆರೋಗ್ಯ ಸಂಬಂಧಿ ಹರಕೆಗಳನ್ನು ಸಲ್ಲಿಸಿದರು. ಗುತ್ತಿನ ಮನೆಯಿಂದ ಜಾನುವಾರುಗಳನ್ನು ಮೆರವಣಿಗೆಯಲ್ಲಿ ದೇವಾಲಯಕ್ಕೆ ಕರೆತರಲಾಯಿತು. ದೇವಸ್ಥಾನದಲ್ಲಿ ದೇವರ ಒಪ್ಪಿಗೆ ಪಡೆದು ಮತ್ತೆ ಈ ಜಾನುವಾರುಗಳನ್ನು ಮೆರವಣಿಗೆಯಲ್ಲಿ ಕೋರಿ ಗದ್ದೆಗೆ ಇಳಿಸಲಾಯಿತು. ಈ ಸಂದರ್ಭ ಹರಕೆಗಾಗಿ ಊರಪರವೂರಿನಿಂದ ಕರೆತಂದಿದ್ದ ಜಾನುವಾರುಗಳನ್ನೂ ಗದ್ದೆಗೆ ಇಳಿಸಿ ಹರಕೆ ಸಲ್ಲಿಸಲಾಯಿತು.
ಜಾತ್ರೆಯಂದು ದೇವರ ಸಮ್ಮುಖದಲ್ಲಿ ಕೋರಿಗದ್ದೆಯಲ್ಲಿ ನೆಡಲಾಗುವ ಎತ್ತರದ ಪೂಕರೆಯು ಯಾವ ಕಡೆಗೆ, ದಿಕ್ಕಿಗೆ ವಾಲುತ್ತದೆ ಅನ್ನುವುದನ್ನೇ ಆಧರಿಸಿ ಈ ಭಾಗದ ಹಲವಾರು ಚಟುವಟಿಕೆಗಳು ಮುಂದಿನ ದಿನಗಳಲ್ಲಿ ನಿರ್ಧರಿಸಲ್ಪಡುತ್ತಿರುವುದು ನಡೆದು ಬಂದ ತುಳುನಾಡಿನ ಒಂದು ನಂಬಿಕೆ. ಕೋರಿ ಗದ್ದೆಯಲ್ಲಿ ನೆಡಲಾಗುವ ಪೂಕರೆಯು ಗದ್ದೆಯು ನೀರು ತುಂಬಿರುವ ಕಾರಣ ನೇರ ನಿಲ್ಲದೆ ಯಾವುದಾದರೂ ಒಂದು ಕಡೆಗೆ ವಾಲುವುದು ಮಾಮೂಲಿ. ಆದರೆ ಪೂಕರೆ ಈ ಬಾರಿ ಯಾವ ದಿಕ್ಕಿಗೆ ವಾಲಿದೆ ಅನ್ನುವ ಲೆಕ್ಕಾಚಾರವನ್ನೇ ಎದುರಿಟ್ಟುಕೊಂಡು ಮುಂದಿನ ಬೆಳೆ, ಮಳೆ, ಜಾತ್ರೆ ಅನಂತರ ನಡೆಯುವ ಕೋಳಿ ಅಂಕದಲ್ಲಿ ಯಾವ ಕಡೆಯ ಕೋಳಿ ಜಯಿಸುತ್ತದೆ, ಶುಭ, ಅಶುಭ ಕಾರ್ಯಗಳು ಈ ಸೀಮೆಯಲ್ಲಿ ಇದೇ ರೀತಿ ಮುಂದೆ ನಡೆಯಲಿ ಅನ್ನುವ ಬಗ್ಗೆ ಈ ಪೂಕರೆ ವಾಲಿರುವ ದಿಕ್ಕನ್ನು ಅನುಸರಿಸಿ ನಿಖರವಾಗಿ ಲೆಕ್ಕಾಚಾರ ಹೇಳುವ ಹಿರಿಯರು ಈಗಲೂ ಇದ್ದಾರೆ.