Advertisement

ಕೊಕ್ಕಡ ದೇವಸ್ಥಾನ : ಕೋರಿ ಜಾತ್ರೆ ಸಂಪನ್ನ

01:10 AM Dec 21, 2018 | Karthik A |

ಕೊಕ್ಕಡ: ಪೂರ್ವಶಿಷ್ಟ ಸಂಪ್ರದಾಯದಂತೆ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಡಿ. 18ರಂದು ಕೊಕ್ಕಡ ಕೋರಿ ಜಾತ್ರೆ, ಉತ್ಸವಾದಿಗಳು ನಡೆದವು. ದೇವಸ್ಥಾನದಲ್ಲಿ ಉತ್ಸವಾದಿಗಳು ನಡೆದು ಕೋರಿಗದ್ದೆಗೆ ಮೆರವಣಿಗೆಯಲ್ಲಿ ದೇವರು ಸಾಗಿ, ಕಟ್ಟೆಯಲ್ಲಿ ವಿರಾಜಮಾನರಾಗಿ, ಸಂಪ್ರದಾಯದಂತೆ ಜಾನುವಾರುಗಳನ್ನು ಇಳಿಸಿ ಗದ್ದೆಗೆ ಪೂಕರೆಯನ್ನು ಹಾಕುವ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

Advertisement

ಜಾನುವಾರು ಗದ್ದೆಗೆ
ಬ್ರಹ್ಮಶ್ರೀ ಎಡಮನೆ ನೀಲೇಶ್ವರ ದಾಮೋದರ ತಂತ್ರಿಗಳ ನೇತೃತ್ವದಲ್ಲಿ ದೇವಸ್ಥಾನದಲ್ಲಿ ಗಣಹೋಮ, ಏಕಾದಶ ರುದ್ರ, ಮಹಾಪೂಜೆ ನಡೆದು ಗುತ್ತಿನ ಮನೆಯಿಂದ ಜಾನುವಾರುಗಳನ್ನು ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಕರೆತರಲಾಯಿತು. ದೇವಸ್ಥಾನದಲ್ಲಿ ದೇವರ ಒಪ್ಪಿಗೆ ಪಡೆದು ಮತ್ತೆ ಈ ಜಾನುವಾರುಗಳನ್ನು ಬ್ಯಾಂಡು ವಾಲಗ, ಕೊರಗ ಭೂತಗಳ ಮೆರವಣಿಗೆಯ ಸಮೇತ ಕೋರಿ ಗದ್ದೆಗೆ ಇಳಿಸಲಾಯಿತು. ಊರ- ಪರವೂರಿನಿಂದ ಕರೆತಂದಿದ್ದ ಜಾನುವಾರುಗಳನ್ನು ಗದ್ದೆಯಲ್ಲಿ ಇಳಿಸಿ ಹರಕೆ ಸಲ್ಲಿಸಲಾಯಿತು. ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.


ಪೂಕರೆ

ದೇವರು ಕೋರಿ ಗದ್ದೆಯ ಕಟ್ಟೆಗೆ ಸಾಗಿ ಪೂಜೆ ಸಲ್ಲಿಕೆಯಾದೊಡನೆ ನಾಗಬ್ರಹ್ಮರು ಮತ್ತು ಇತರ ದೈವಗಳ ಸಮಕ್ಷಮ ಕೋರಿ ಗದ್ದೆಗೆ ಪೂಕರೆಯನ್ನು ಹಾಕಲಾಯಿತು. ದೇವಸ್ಥಾನದಲ್ಲಿ ಸಂಜೆ ವೇಳೆ ಉತ್ಸವಾದಿಗಳು ನಡೆದ ಅನಂತರ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ರಾತ್ರೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ಮೇಳದವರಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಿತು. ಅರ್ಚಕ ರಮಾನಂದ ಭಟ್‌ ಮತ್ತಿತರರು ಧಾರ್ಮಿಕ ವಿಧಿ - ವಿಧಾನಗಳನ್ನು ನಡೆಸಿದರು.

ಕೊಕ್ಕಡ ಕೋರಿ ಜಾತ್ರೆಯ ಕಾರ್ಯಕ್ರಮ ದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ರಾವ್‌ ಹಾಗೂ ಸದಸ್ಯರು, ಅರ್ಚಕ ರಮಾನಂದ ಭಟ್‌ ಮತ್ತು ಪವಿತ್ರಪಾಣಿ ರಾಧಾಕೃಷ್ಣ ಯಡಪ್ಪಾಡಿತ್ತಾಯ, ಉದ್ಯಮಿ ಪೂವಾಜೆ ಕುಶಾಲಪ್ಪ ಗೌಡ, ದೇವದಾಸ್‌ ಬಾಣಜಾಲು, ಮಹಾಬಲ ನಾಯ್ಕ, ಕೃಷ್ಣಪ್ಪ ಗೌಡ, ರುಕ್ಮಯ್ಯ ಮಡಿವಾಳ, ಜನಾರ್ದನ ಶಬರಾಡಿ ಮತ್ತು ಊರಿನ ಗಣ್ಯರು ಭಾಗವಹಿಸಿದರು.

ಹರಕೆ ಸಲ್ಲಿಕೆ
ಭಕ್ತರು ಬೆಳಗ್ಗಿನಿಂದಲೇ ತಲೆಯಲ್ಲಿ ಸೊಪ್ಪಿನ ಕಟ್ಟು ಹೊತ್ತುಕೊಂಡು ಗದ್ದೆಗೆ ಸುತ್ತು ಬಂದು ಈ ಕೋರಿ ಗದ್ದೆಗೆ ಸೊಪ್ಪನ್ನು ಹಾಕುವಂತಹ ಆರೋಗ್ಯ ಸಂಬಂಧಿ ಹರಕೆಗಳನ್ನು ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next