Advertisement

ಕೊಕ್ಕಡ: ಉಪ್ಪಾರು-ರೆಖ್ಯಾ ರಸ್ತೆಗೆ ಕೊನೆಗೂ ಡಾಮರು

09:07 PM Apr 12, 2019 | mahesh |

ಕೊಕ್ಕಡ: ಹಲವು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದ್ದ ಉಪ್ಪಾರು (ಉಪ್ಪರಡ್ಕ)- ರೆಖ್ಯಾ ರಸ್ತೆಗೆ ರೆಖ್ಯಾದ ಮೂಲ ಸೌಕರ್ಯಗಳ ಹೋರಾಟ ಸಮಿತಿಯ ನಿರಂತರ ಹೋರಾಟದ ಫ‌ಲವಾಗಿ ಡಾಮರು ಅಳವಡಿಸುವ ಮೊದಲ ಹಂತದ ಕಾಮಗಾರಿ ನಡೆ ಯುತ್ತಿದ್ದು, ಸಮಸ್ಯೆಗೆ ಕೊನೆಗೂ ಮುಕ್ತಿ ದೊರೆಯುವ ಹಂತದಲ್ಲಿದೆ.

Advertisement

ಒಟ್ಟು 2.85 ಕೋಟಿ ರೂ. ವೆಚ್ಚದಲ್ಲಿ ಡಾಮರು ಕಾಮಗಾರಿ ನಡೆಯುತ್ತಿದೆ. ಇದರಿಂದ ರೆಖ್ಯಾ- ಉಪ್ಪರಡ್ಕ ನಿವಾಸಿಗಳಿಗೆ ಹಾಗೂ ಹೆದ್ದಾರಿಯಲ್ಲಿ ಅವಘಡಗಳು ನಡೆದಾಗಲೆಲ್ಲ ತುರ್ತು ಸಂದರ್ಭದ ವಾಹನ ಸಂಚಾರಕ್ಕೆ ಬಳಕೆಯಾಗುತ್ತಿದ್ದ ಈ ರಸ್ತೆ ಅವಲಂಬಿತ ಗ್ರಾಮಸ್ಥರು ಈಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಹೋರಾಟ ಸಮಿತಿ ಶ್ರಮ
ಹಲವು ದಶಕಗಳಿಂದಲೂ ಅವಗಣನೆಗೆ ಒಳಗಾದ ರೆಖ್ಯಾ ಗ್ರಾಮವು ಹತ್ಯಡ್ಕ ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟಿದ್ದು, ಈ ಪ್ರಮುಖ ಸಂಪರ್ಕ ರಸ್ತೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎಂಜಿರ ಸಮೀಪದಿಂದ ಹತ್ಯಡ್ಕ ಗ್ರಾಮಕ್ಕೆ ಹಾಗೂ ಪ್ರಸಿದ್ಧ ಯಾತ್ರಾಕ್ಷೇತ್ರ ಧರ್ಮಸ್ಥಳಕ್ಕೂ ಸಂಪರ್ಕ ಕಲ್ಪಿಸುತ್ತದೆ. ರಸ್ತೆಯಲ್ಲಿ ಡಾಮರು ಎಲ್ಲಿದೆ ಎಂದು ಹುಡುಕುವ ಸ್ಥಿತಿ ಇತ್ತು. ಮಳೆಗಾಲದಲ್ಲಿ ಕೆಸರಿನ ಹೊಂಡವಾಗುತ್ತಿದ್ದ ರಸ್ತೆಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹರಸಾಹಸ ಮಾಡಿ ಪ್ರಯಾಣ ಬೆಳೆಸಬೇಕಾದ ಅನಿವಾರ್ಯತೆ ಇತ್ತು. ಈ ಭಾಗದ ಜನರು ಶ್ರೀಧರ ಗೌಡ ಗುಡ್ರಾಡಿ ಅವರ ನೇತೃತ್ವದಲ್ಲಿ ಮೂಲಸೌಕರ್ಯಗಳ ಹೋರಾಟ ಸಮಿತಿ ರಚಿಸಿಕೊಂಡು ನಿರಂತರ ಪ್ರತಿಭಟನೆ ಹಮ್ಮಿಕೊಂಡಿದ್ದರು. ಸ್ಥಳೀಯ ಜನಪ್ರತಿನಿಧಿಗಳಿಂದ ಹಿಡಿದು ಸಚಿವರ ವರೆಗೂ ಮನವಿಗಳನ್ನು ಕೊಟ್ಟರು. ಅಧಿಕಾರಿಗಳ ಬೆನ್ನು ಬಿಡದೆ ಹೋರಾಟ ನಡೆಸಿದ ಫ‌ಲವಾಗಿ ಈಗ ರಸ್ತೆ ಸಮಸ್ಯೆಗೆ ಮುಕ್ತಿ ಸಿಗುವ ಹಂತ ತಲುಪಿದೆ. ರಸ್ತೆ ದುರವಸ್ಥೆ ಕುರಿತು ಉದಯವಾಣಿ ಸುದಿನದಲ್ಲೂ ವಿಶೇಷ ವರದಿ ಪ್ರಕಟವಾಗಿತ್ತು.

ಮಾಜಿ ಶಾಸಕ ವಸಂತ ಬಂಗೇರ ಅವರು ತಮ್ಮ ಶಾಸಕತ್ವ ಅವಧಿಯ ಕೊನೆಯಲ್ಲಿ ಈ ರಸ್ತೆಗೆ ಅನುದಾನ ಮಂಜೂರು ಮಾಡಿಸಿದರು. ಹಾಲಿ ಶಾಸಕ ಹರೀಶ್‌ ಪೂಂಜ ಅವರು ಮುತುವರ್ಜಿ ವಹಿಸಿದ ಫ‌ಲವಾಗಿ ಕಾಮಗಾರಿ ವೇಗ ಪಡೆದುಕೊಂಡಿತು.

ಬಹೋಪಯೋಗಿ ರಸ್ತೆ
ರಾ.ಹೆ. 75ರ ಎಂಜಿರದಿಂದ ರೆಖ್ಯಾ ಗ್ರಾಮದ ಮೂಲಕ ಹತ್ಯಡ್ಕ, ಶಿಶಿಲ ಹಾಗೂ ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸಿ ಸಂಚಾರಕ್ಕೆ ತಡೆಯುಂಟಾದಾಗ ಯಾತ್ರಾರ್ಥಿಗಳಿಗೆ ಅನುಕೂಲ ಕಲ್ಪಿಸುತ್ತದೆ. ರಾತ್ರಿ ಹೆದ್ದಾರಿಯಲ್ಲಿ ಕಾಲ ಕಳೆಯುವ ಸಂಕಷ್ಟ ತಪ್ಪಿಸುತ್ತದೆ. ಶಿಶಿಲ, ಹತ್ಯಡ್ಕ ಭಾಗದ ಜನರು ಸುಬ್ರಹ್ಮಣ್ಯ ಅಥವಾ ಬೆಂಗಳೂರಿಗೆ ತೆರಳುವ ಸಂದರ್ಭದಲ್ಲಿ ಕೊಕ್ಕಡ, ಪೆರಿಯಶಾಂತಿ ಬಳಸು ದಾರಿಯಲ್ಲಿ ಪ್ರಯಾಣಿಸುವ ಕಷ್ಟವೂ ತಪ್ಪುತ್ತದೆ.

Advertisement

ನಿರಂತರ ಹೋರಾಟ
ಕುಗ್ರಾಮವಾಗಿದ್ದ ರೆಖ್ಯಾ ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿತ್ತು. ಇದಕ್ಕಾಗಿ ಸಮಿತಿ ರಚಿಸಿಕೊಂಡು ನಿರಂತರ ಹೋರಾಟ ಮಾಡುತ್ತಿದ್ದೇವೆ. ಕುಡಿಯುವ ನೀರು, ರಸ್ತೆಯಂತಹ ಮೂಲಸೌಕರ್ಯಗಳೇ ಮರೀಚಿಕೆಯಾದ ಸಂದರ್ಭದಲ್ಲಿ ಸಂಘಟಿತ ಹೋರಾಟದ ಮೂಲಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಣ್ಣು ತೆರೆಸಲಾಗಿದೆ. ಜನರ ಬಹು ವರ್ಷಗಳ ಬೇಡಿಕೆಯಾದ ರೆಖ್ಯಾ-ಉಪ್ಪರಡ್ಕ ರಸ್ತೆ ಸಮಿತಿಯ ನಿರಂತರ ಹೋರಾಟಗಳ ಫ‌ಲವಾಗಿ ಕಾಮಗಾರಿ ಕಾಣುವಂತಾಗಿದೆ. ಇದಕ್ಕೆ ಸಹಕರಿಸಿದ ಮಾಜಿ ಶಾಸಕ ವಸಂತ ಬಂಗೇರ ಹಾಗೂ ಹಾಲಿ ಶಾಸಕ ಹರೀಶ್‌ ಪೂಂಜ ಅವರನ್ನು ಹೋರಾಟ ಸಮಿತಿ ಅಭಿನಂದಿಸುತ್ತದೆ.
ಶ್ರೀಧರ ಗೌಡ, ಗುಡ್ರಾಡಿ
ಅಧ್ಯಕ್ಷರು, ಮೂಲ ಸೌಕರ್ಯಗಳ ಹೋರಾಟ ಸಮಿತಿ, ರೆಖ್ಯಾ

Advertisement

Udayavani is now on Telegram. Click here to join our channel and stay updated with the latest news.

Next