ಪಡುಬಿದ್ರಿ: ಸಂಸ್ಕೃತ ಶಿರೋಮಣಿ, ಕನ್ನಡ ವಿದ್ವಾನ್, ಪ್ರಕಾಂಡ ಪಂಡಿತರಾಗಿದ್ದ ವೇ| ಮೂ| ಕೊಕ್ಕಡ ಅನಂತಪದ್ಮನಾಭ ಶಾಸ್ತ್ರಿ (92) ಅವರು ಮಾ. 29ರಂದು ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಪುತ್ರ ಕಿನ್ನಿಗೋಳಿಯ ಎಸ್. ಕೋಡಿಯಲ್ಲಿ ವೈದ್ಯಕೀಯ ಸೇವೆ ನೀಡುತ್ತಿರುವ ಡಾ|ರಾಧಾ ಕೃಷ್ಣ ಶಾಸ್ತ್ರಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಇವರು ವೇದ, ಉಪನಿಷತ್ತುಗಳಲ್ಲಿ ಆಳವಾದ ಅಧ್ಯಯನ ನಡೆಸಿದ್ದರು. ಅನೇಕ ಪುಸ್ತಕಗಳನ್ನೂ ರಚಿ ಸಿದ್ದು, ಧರ್ಮಸ್ಥಳ, ಬಪ್ಪನಾಡು, ಎಲ್ಲೂರು, ಸೌತಡ್ಕ ಮುಂತಾದ ಅನೇಕ ದೇಗುಲಗಳ ಸುಪ್ರಭಾತ, ಭಕ್ತಿಗೀತೆಗಳ ಸಾಹಿತ್ಯವನ್ನೂ ಬರೆದಿದ್ದರು. ಉಜಿರೆ, ಧರ್ಮಸ್ಥಳ, ಕೊಡಗು ಸರಕಾರಿ ಪ್ರೌಢಶಾಲೆ, ಮೂಲ್ಕಿ ಪ. ಪೂ. ಕಾಲೇಜುಗಳಲ್ಲಿ ಸಂಸ್ಕೃತ ಪಂಡಿತರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ನಿವೃತ್ತಿ ಬಳಿಕ ಸಂಸ್ಕೃತ ಹಾಗೂ ವೇದಾಧ್ಯಯನ ಗುರುಕುಲಗಳನ್ನು ಸ್ಥಾಪಿಸಿ ಅನೇಕ ಮಂದಿಗೆ ಶಿಕ್ಷಣ ನೀಡಿ ದ್ದರು.2014ರಲ್ಲಿ ಶಿಶಿಲದಲ್ಲಿ ನಡೆದಿದ್ದ 13ನೇ ಬೆಳ್ತಂಗಡಿ ತಾ| ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು. 2009ರಲ್ಲಿ ಸೌತಡ್ಕದಲ್ಲಿ ನಡೆದಿದ್ದ 9ನೇ ಬೆಳ್ತಂಗಡಿ ತಾ| ಕನ್ನಡ ಸಾಹಿತ್ಯ ಸಮ್ಮೇಳನ, ಪಡುಬಿದ್ರಿಯ ಶ್ರೀ ವನದುರ್ಗಾ ಟ್ರಸ್ಟ್ ಹಾಗೂ ಉಡುಪಿಯ ಅಷ್ಟ ಮಠಾಧೀಶರಿಂದಲೂ ಸಮ್ಮಾನಿಸಲ್ಪಟ್ಟಿದ್ದರು.
ಪಲಿಮಾರು ಯೋಗದೀಪಿಕಾ ಗುರುಕುಲದಲ್ಲಿ 10 ವರ್ಷ ಪ್ರಾಚಾರ್ಯರಾಗಿದ್ದ ಇವರ ನಿಧನಕ್ಕೆ ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಸಹಿತ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.