ಕಡಬ: ಕೊಯಿಲದಲ್ಲಿನ ಎಂಡೋಸಲ್ಫಾನ್ ಸಂತ್ರಸ್ತರ ಪಾಲನ ಕೇಂದ್ರಕ್ಕೆ ಮೂಲಸೌಕರ್ಯಗಳನ್ನು ಕಲ್ಪಿಸಲು ಶೀಘ್ರ ಅನುದಾನ ನೀಡು ವುದಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ವಿಶೇಷ ಮೇಲ್ವಿಚಾರಕ ಡಾ| ಯೋಗೀಶ್ ದುಬೆ ತಿಳಿಸಿದ್ದಾರೆ.
ಅವರು ಗುರುವಾರ ಪಾಲನ ಕೇಂದ್ರಕ್ಕೆ ಭೇಟಿ ಅಲ್ಲಿನ ಸ್ಥಿತಿಗತಿ ಅವಲೋಕಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಎಂಡೋ ಪೀಡಿತರ ಸಮಸ್ಯೆಗಳನ್ನು ಕಂಡು ಮರುಗಿದ ಅವರು ಈ ಸಮಸ್ಯೆ ಇಲ್ಲಿಗೇ ಕೊನೆಯಾಗಬೇಕು. ಮುಂದೆ ಯಾವುದೇ ಸಮಸ್ಯೆ ಉದ್ಭವವಾಗದಂತೆ ಕೇಂದ್ರ ಸರಕಾರ ಹಾಗೂ ಮಾನವ ಹಕ್ಕುಗಳ ಆಯೋಗ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.
ಕೇಂದ್ರದ ಸಮಸ್ಯೆಗಳ ಬಗ್ಗೆ ಹಾಗೂ ಎಂಡೋ ಸಮಸ್ಯೆಯ ಮೂಲದ ಸಮಗ್ರ ಮಾಹಿತಿ ಪಡೆದ ಅವರು, ಕೇಂದ್ರದ ಮೂಲಸೌಕರ್ಯಗಳಿಗೆ ಕೂಡಲೇ ಬೇಡಿಕೆ ಸಲ್ಲಿಸಿದಲ್ಲಿ ಅಗತ್ಯ ಅನುದಾನವನ್ನು ಶೀಘ್ರ ಒದಗಿಸುವುದಾಗಿ ಹೇಳಿದರು. ಎಂಡೋ ಪೀಡಿತರು ಇನ್ನಷ್ಟು ಚಟು ವಟಿಕೆಯಿಂದ ಇರಲು ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು. ಸಂತ್ರರಿಗೆ ಸಿಗುವ ಮಾಸಾಶನ ಹಾಗೂ ಇತರ ಸವಲತ್ತುಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡರು.
ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ಡಾ| ಗೋಪಾಲಕೃಷ್ಣ, ಎಂಡೋ ಪಾಲನ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ| ನವೀನ್ ಕುಲಾಲ್, ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ| ದೀಪಕ್ ರೈ, ಕಡಬ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ತಿಳಿಸಿದರು.
ಎಂಡೋ ಪಾಲನ ಜಿಲ್ಲಾ ಸಂಯೋಜಕ ಶಾಜುದ್ದೀನ್, ಪುತ್ತೂರು ಬಿಆರ್‌ಸಿಗಳಾದ ತನುಜಾ, ಸೀತಮ್ಮ, ಕೊಯಿಲ ಎಂಡೋ ಪಾಲನ ಕೇಂದ್ರದ ವ್ಯವಸ್ಥಾಪಕ ಜಾಕ್ಸನ್, ಶಿಕ್ಷಕಿ ನಮಿತಾ ಉಪಸ್ಥಿತರಿದ್ದರು.