Advertisement
ಕಿಡಿಗೇಡಿ ಪ್ರವಾಸಿಗರ ಸಮಸ್ಯೆಸಾಲು ಸಾಲು ಗುಡ್ಡಗಳಿಗೆ ಪ್ರಕೃತಿಯ ಹಚ್ಚ ಹಸುರಿನ ಹೊದಿಕೆಯಿಂದ ನೋಡುಗರ ಕಣ್ಮನ ಸೆಳೆಯುವ ಈ ಪ್ರದೇಶಕ್ಕೆ ತನ್ನ ಸೌಂದರ್ಯವೇ ಮುಳುವಾದಂತಿದೆ. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಬರುವ ಜನರು ಪರಿಸರದ ಸ್ವಚ್ಛತೆಗೆ ಗಮನ ನೀಡದೇ ಹಾಳುಗೆಡವುತ್ತಿರುವುದು ಫಾರ್ಮ್ನ ಅಧಿಕಾರಿಗಳಿಗೆ ತಲೆನೋವಾಗಿ ಪರಿ ಣಮಿಸಿದೆ. ಗುಡ್ಡದ ಎಲ್ಲೆಡೆ ಖಾಲಿ ಮದ್ಯದ ಬಾಟಲಿಗಳು, ಒಡೆದ ಗ್ಲಾಸಿನ ಚೂರುಗಳು, ಪ್ಲಾಸ್ಟಿಕ್ ಕವರ್‌ಗಳು, ತಿಂಡಿ ತಿನಿಸಿನ ತ್ಯಾಜ್ಯಗಳು ಹಾಗೂ ಅನೈತಿಕ ಚಟುವಟಿಕೆಗಳಿಗೆ ಬಳಕೆಯಾಗುವ ವಸ್ತುಗಳ ಕುರುಹುಗಳು ಕಂಡುಬರುತ್ತಿವೆ. ಗುಡ್ಡದ ಅಂದವನ್ನು ಸವಿಯಲು ಬರುವ ಮಂದಿಗಿಂತ ಮಜಾ ಉಡಾಯಿಸಲು ಬರುವವರ ಸಂಖ್ಯೆ ಹೆಚ್ಚಾಗಿದೆ ಎನ್ನುವುದು ಇಲ್ಲಿನ ಜನರ ಆರೋಪ.
ಸುಮಾರು 704 ಎಕ್ರೆಯಲ್ಲಿ ಹರಡಿ ಕೊಂಡಿರುವ ಪಶುಸಂಗೋಪನ ಇಲಾಖೆಗೆ ಸೇರಿದ ಎ ಫಾರ್ಮ್ ಒಂದು ಕಾಲದಲ್ಲಿ ರಾಜ್ಯದಲ್ಲೇ ಹೆಸರು ಪಡೆದಿತ್ತು. ಆದರೆ ಈಗ ಇಲ್ಲಿನ ಪರಿಸ್ಥಿತಿ ಬದಲಾಗಿದೆ. ಸಿಬಂದಿ ಕೊರತೆಯಿಂದಾಗಿ ಯಾವ ಕೆಲಸವೂ ಸಮರ್ಪಕವಾಗಿ ನಡೆಯುತ್ತಿಲ್ಲ. ದನ, ಕರು, ಎಮ್ಮೆ, ಕೋಣ, ಹಂದಿ, ಕೋಳಿ ಮುಂತಾದುವುಗಳನ್ನು ಇಲ್ಲಿ ಸಾಕಲಾಗುತ್ತಿದೆ. ಮಳೆಗಾಲ ಆರಂಭದಿಂದ ವರ್ಷಾಂತ್ಯದವರೆಗೆ ಗುಡ್ಡಗಳು ಹಚ್ಚ ಹಸಿರಿನಿಂದ ಕೂಡಿರುತ್ತದೆ. ಈ ಹಿಂದೆ ಭದ್ರತೆಗಾಗಿ ಫಾರ್ಮ್ ಸುತ್ತ ಮಣ್ಣು ಅಗೆದು ಅಗಳು ತೆಗೆದು ಬೇಲಿ ಹಾಕಲಾಗಿತ್ತು. ಆದರೆ ಹಲವು ಕಡೆ ಕಿಡಿಗೇಡಿಗಳು ಬೇಲಿಯನ್ನು ಕಿತ್ತೆಸೆದು ಅಕ್ರಮ ಹಾದಿಗಳನ್ನು ನಿರ್ಮಿಸಿದ್ದಾರೆ. ಗಂಡಿಬಾಗಿಲು, ಆನೆಗುಂಡಿ ಮೊದಲಾದೆಡೆ ಫಾರ್ಮ್ಗೆ ಪ್ರವೇಶಿಸಲು ಅಕ್ರಮ ಮಾರ್ಗಗಳಿವೆ. ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಗೋಕುಲನಗರ ಎಂಬಲ್ಲಿ ಸುಂದರ ಪ್ರವೇಶ ದ್ವಾರವಿದೆ. ಈ ಹಿಂದೆ ಮುಖ್ಯ ಪ್ರವೇಶ ದ್ವಾರದಲ್ಲಿ ಕಾವಲುಗಾರ ಕಾರ್ಯನಿರ್ವಹಿಸುತ್ತಿದ್ದ. ಒಳ ,ಹೊರ ಹೋಗಲು ಸಮಯ ನಿಗದಿಪಡಿಸಲಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅದ್ಯಾವುದೂ ಇಲ್ಲ. ಗೇಟು ಸದಾ ತೆರದಿರುತ್ತೆ. ರಜಾ ದಿನ ಬಂದರೆ ಸಾಕು ಯುವ ಜನರು ಮೋಜು ಮಸ್ತಿಗೆ ಆಗಮಿಸುತ್ತಾರೆ. ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ, ತಿಂಡಿ ಪೊಟ್ಟಣಗಳನ್ನು ಅಲ್ಲಲ್ಲಿ ಬಿಸಾಡುತ್ತಾರೆ. ನೀರಿನ ಟ್ಯಾಂಕ್‌ಗಳಿಗೆ ಕಸಕಡ್ಡಿಗಳನ್ನು ಹಾಕುತ್ತಾರೆ. ಪ್ರಶ್ನಿಸಲು ಹೋದ ಸಿಬಂದಿಯನ್ನೇ ದಬಾಯಿಸುತ್ತಾರೆ. ಸ್ಥಳೀಯರ ಆಗ್ರಹ.
ಇದಕ್ಕೆಲ್ಲ ಕಡಿವಾಣ ಹಾಕಲು ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹ.
Related Articles
ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಬರುವುದು ತಪ್ಪಲ್ಲ. ಆದರೆ ಅದನ್ನು ಹಾಳುಗೆಡಹುವುದು ಯಾವ ನ್ಯಾಯ? ಇಲ್ಲಿನ ಭದ್ರತೆಯ ಬಗ್ಗೆ ಇಲಾಖೆ ಆಸ್ಥೆ ವಹಿಸಿಬೇಕು. ಕೊಯಿಲ ಕೇಂದ್ರಿತವಾಗಿ ಪೊಲೀಸ್ ಹೊರಠಾಣೆ ತೆರೆದರೆ ಇಲ್ಲಿಗೆ ಬರುವ ಕಿಡಿಗೇಡಿ ಪ್ರವಾಸಿಗರ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದು.
– ಪ್ರದೀಪ್ ಕೊಯಿಲ, ಸ್ಥಳೀಯ ಮುಖಂಡ
Advertisement
ನಾಗರಾಜ್ ಎನ್.ಕೆ.