Advertisement

ಕೊಹ್ಲಿ ಬ್ಯಾಟಿಂಗ್‌ಗೆ ಸಚಿನ್‌ ದಾಖಲೆ ಛಿದ್ರ 

03:55 AM Oct 28, 2017 | |

200 ಪಂದ್ಯಗಳಿಂದ 31 ಶತಕ ಸಂಪಾದಿಸಿರುವ ವಿರಾಟ್‌ ಕೊಹ್ಲಿ ಸಚಿನ್‌ ತೆಂಡೂಲ್ಕರ್‌ರ ದಾಖಲೆಗಳ ಸಮೀಪಕ್ಕೆ ಬರುತ್ತಿದ್ದಾರೆ. 30 ಶತಕದ ಎ.ಬಿ.ಡಿವಿಲಿಯರ್ ವಯಸ್ಸಿನ ಕಾರಣಕ್ಕೆ ಈ ನಿಟ್ಟಿನಲ್ಲಿ ಕೊಹ್ಲಿಗೆ ಸವಾಲಾಗಲಿಕ್ಕಿಲ್ಲ. ಆದರೆ ಈಗಾಗಲೇ 158 ಇನಿಂಗ್ಸ್‌ನಿಂದ 26 ಶತಕ ಬಾರಿಸಿರುವ ದಕ್ಷಿಣ ಆಫ್ರಿಕಾದ ಹಶೀಮ್‌ ಆಮ್ಲಾ ಕೂಡ ಒಂದರ್ಥದ ರನ್‌ ಮಿಷೀನ್‌. ಕೊಹ್ಲಿ ದಾಖಲೆಗಳಿಗೆ ಇವರಿಂದ ಅಪಾಯವಿದೆ! 

Advertisement

ಒಂದು ನಿರೀಕ್ಷಣಾ ಜಾಮೀನಿನ ರಕ್ಷಣೆಯಲ್ಲಿಯೇ ಮಾತಿನ ಬ್ಯಾಟಿಂಗ್‌ ಆರಂಭಿಸಬೇಕು. ವಿರಾಟ್‌ ಕೊಹ್ಲಿಯವರ ರನ್‌ಗಳು ಕ್ರಿಕೆಟ್‌ ಪ್ರಪಂಚದ ದಾಖಲೆಗಳ ವಿಚಾರದಲ್ಲಿ ಅಪ್ರತಿಮವಾದುದು, ಭಾರತದ ಗೆಲುವಿನಲ್ಲಿ ಕೊಹ್ಲಿ ಸಾಧನೆ ಅಪರೂಪವಾದದ್ದು. ಹಾಗಂತ ಒಂದೇಟಿಗೆ ವಿರಾಟ್‌ ಕೊಹ್ಲಿ ಕ್ರಿಕೆಟ್‌ನ ಎಲ್ಲ ತಲೆಮಾರುಗಳ ವಿಚಾರದಲ್ಲಿ ಟಾಪ್‌ ಒನ್‌ ಬ್ಯಾಟ್ಸ್‌ಮನ್‌ ಎಂದು ಪ್ರತಿಪಾದಿಸಲು ಹೊರಟರೆ ಹಲವು ದಿಕ್ಕುಗಳಿಂದ ವಿರೋಧ ವ್ಯಕ್ತವಾಗಬಹುದು.

 200 ಪಂದ್ಯಗಳಿಂದ 31 ಶತಕ ಸಂಪಾದಿಸಿ ವಿರಾಟ್‌ ಕೊಹ್ಲಿ ಸಚಿನ್‌ ತೆಂಡೂಲ್ಕರ್‌ರ49ಕ್ಕಿಂತಷ್ಟೇ ಹಿಂದಿದ್ದಾರೆ. 30 ಶತಕದ ಎ.ಬಿ.ಡಿವಿಲಿಯರ್ ವಯಸ್ಸಿನ ಕಾರಣಕ್ಕೆ ಈ ನಿಟ್ಟಿನಲ್ಲಿ ಕೊಹ್ಲಿಗೆ ಸವಾಲಾಗಲಿಕ್ಕಿಲ್ಲ. ಆದರೆ ಈಗಾಗಲೇ 158 ಇನಿಂಗ್ಸ್‌ನಿಂದ 26 ಶತಕ ಬಾರಿಸಿರುವ ದಕ್ಷಿಣ ಆಫ್ರಿಕಾದ ಹಶೀಮ್‌ ಆಮ್ಲಾ ಕೂಡ ಒಂದರ್ಥದ ರನ್‌ ಮಿಷೀನ್‌. ಕೊಹ್ಲಿ ದಾಖಲೆಗಳಿಗೆ ಇವರಿಂದ ಅಪಾಯವಿದೆ! 

 ಎಳೆದೆಳೆದು ತರುತ್ತಿದ್ದ ಸಚಿನ್‌ ರನ್ನು!
ಸಚಿನ್‌ ಹಾಗೂ ಕೊಹ್ಲಿ ನಡುವಿನ ಹೋಲಿಕೆಯಲ್ಲಿ ಅಂಕಿಅಂಶಗಳಷ್ಟೇ ಪ್ರಾಮುಖ್ಯ ವಹಿಸಬಾರದು. ಆಡುವ ಸಂದರ್ಭ, ತಂಡದ ಬಲ ಹಾಗೂ ಎದುರಾಳಿ ಶಕ್ತಿ ಕೂಡ ಪರಿಗಣನೆಗೆ ಬರಬೇಕು ಎಂಬ ವಾದವಿದೆ. ಅಂಕಿಅಂಶಗಳನ್ನೇ ತೆಗೆದುಕೊಂಡರೆ 200 ಪಂದ್ಯಗಳ ಮಾನದಂಡದಲ್ಲಿ ವಿರಾಟ್‌ ವಿರಾಟ್‌ ಸ್ವರೂಪಿಯಾಗುತ್ತಾರೆ. ಇಷ್ಟು ಪಂದ್ಯವಾಡಿದಾಗ 41.74ರ ಸರಾಸರಿಯಲ್ಲಿ 7,305 ರನ್‌ಗಳನ್ನಷ್ಟೇ ಸಚಿನ್‌ಗೆ ಕೂಡಿಸಲಾಗಿತ್ತು. ವಿರಾಟ್‌ 55.55ರ ಸರಾಸರಿ ಲೆಕ್ಕದಲ್ಲಿ 8,888 ರನ್‌ ಸಂಪಾದಿಸಿದ್ದಾರೆ. ವಿದೇಶಿ ನೆಲದಲ್ಲಿ ಆಟ ಕಷ್ಟ ಎಂಬ ಅಭಿಪ್ರಾಯಕ್ಕೆ 18 ಶತಕ ಸಮೇತ ಕೊಹ್ಲಿ 5,200 ರನ್‌ ಬಾರಿಸಿದ್ದರೆ 10 ಶತಕದ ಸಹಾಯದಿಂದ ತೆಂಡೂಲ್ಕರ್‌ 4,618 ರನ್‌ ದಾಖಲಿಸಿದ್ದಾರೆ. ಆದರೆ ಟಿ20 ಹಾಗೂ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಅವತಾರಕ್ಕಿಂತ ಮುನ್ನ ಪಿಚ್‌ಗಳು ಬೌಲರ್‌ಗೂ ಒಂದು ಪ್ರಮಾಣದ ಸಹಾಯ ಮಾಡುತ್ತಿತ್ತು. ಸಾಂಪ್ರದಾಯಿಕ ಕೆಂಪು ಚೆಂಡು ವಾತಾವರಣದ ಚೂರು ಬೆಂಬಲ ಸಿಕ್ಕರೂ ಅತ್ಯಧಿಕ ಸ್ವಿಂಗ್‌ ಆಗುತ್ತಿತ್ತು. ಇನಿಂಗ್ಸ್‌ನಲ್ಲಿ ಒಂದೇ ಚೆಂಡು ಬಳಕೆ 25-30 ಓವರ್‌ಗಳ ನಂತರ ರಿವರ್ಸ್‌ ಸ್ವಿಂಗ್‌ ಎಂಬ ಆಡಲಾಗದ ಸವಾಲನ್ನು ಬ್ಯಾಟ್ಸ್‌ಮನ್‌ಗೆ ತಂದೊಡ್ಡುತ್ತಿತ್ತು. ವಕಾರ್‌ ಯೂನಿಸ್‌ ಎಂಬ ವೇಗಿ ಇನಿಂಗ್ಸ್‌ನ ಆರಂಭಕ್ಕಿಂತ ನಡುವಿನ ಸ್ಪೆಲ್‌ಗ‌ಳಲ್ಲಿ ತೀರಾ ಅಪಾಯಕಾರಿಯಾಗುತ್ತಿದ್ದರು. ಅಲಾನ್‌ ಡೊನಾಲ್ಡ್‌, ವಾಸೀಂ ಅಕ್ರಂ, ಗ್ಲೆನ್‌ ಮೆಗ್ರಾತ್‌ ಮಾದರಿಯ ಘಾತಕ ವೇಗಿಗಳನ್ನು ಎದುರಿಸುವ ಸವಾಲಿಗೆ ಮೈಯೊಡ್ಡಿದ ಸಚಿನ್‌ ತೆಂಡೂಲ್ಕರ್‌ ಭಿನ್ನವಾಗಿ ನಿಲ್ಲುತ್ತಾರೆ. ಬಹುಶಃ ಇದೇ ಕಾರಣಕ್ಕೆ ಈ 200 ಪಂದ್ಯಗಳ ಅವಧಿಯಲ್ಲಿ ಸಚಿನ್‌ 29 ಬಾರಿ ಪಂದ್ಯ ಪುರುಷೋತ್ತಮರಾಗಿದ್ದರೆ ವಿರಾಟ್‌ ಕೊಹ್ಲಿ ಪ್ರಶಸ್ತಿಗಳು 25ಕ್ಕೆ ನಿಲ್ಲುತ್ತವೆ. 

ಕೊಹ್ಲಿಗಿದೆ ಹಲವು ಅನುಕೂಲತೆ….
90ರ ದಶಕದ ಏಕಾಂಗಿ ವೀರನಾಗಿ ಪಂದ್ಯ ಗೆಲ್ಲಿಸಿಕೊಡುತ್ತಿದ್ದ ಸಚಿನ್‌ ಎದುರು ಕೊಹ್ಲಿ ಹಲವು ಅನುಕೂಲಗಳನ್ನು ಪಡೆದಿದ್ದಾರೆ. 2015ರ ವಿಶ್ವಕಪ್‌ ನಂತರ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮ ಒಟ್ಟಾಗಿ ಆಡಿರುವ 34 ಪಂದ್ಯಗಳಲ್ಲಿ ಭಾರತ 19ರಲ್ಲಿ ಜಯ ಸಂಪಾದಿಸಿದೆ. ಇವುಗಳಲ್ಲಿ 16ರಲ್ಲಿ ಈ ಇಬ್ಬರು ಆಟಗಾರರಲ್ಲಿ ಒಬ್ಬರು ಕನಿಷ್ಟ 50 ಪ್ಲಸ್‌ ರನ್‌ ಶೋ ನೀಡಿದ್ದಾರೆ. 200 ಪಂದ್ಯಗಳ ನಂತರವಷ್ಟೇ ಸಚಿನ್‌ಗೆ ಧೋನಿ, ಯುವರಾಜ್‌ ಸಿಂಗ್‌, ಸುರೇಶ್‌ ರೈನಾ ತರದವರ ಬೆಂಬಲ ಸಿಕ್ಕಿದ್ದು.

Advertisement

 ನಿಜ, ಪ್ರತಿ 6.45 ಪಂದ್ಯಗಳಿಗೊಂದರಂತೆ ಶತಕದ ಆಟ ಆಡುತ್ತಿರುವ ವಿರಾಟ್‌ಗೆ ಇನ್ನೂ    200 ಪಂದ್ಯಗಳನ್ನು ಆಡುವ ಅವಕಾಶವಿದೆ.ಅಂತಹ ಸಂದರ್ಭದಲ್ಲಿ ಸಚಿನ್‌ರ 49 ಶತಕ ಬಿಡಿ, 18,426 ರನ್‌ಗಳ ಪರ್ವತವನ್ನು ಕೂಡ ಸುಲಭವಾಗಿ ಹತ್ತಬಹುದು. ಸಚಿನ್‌ ಮೊದಲ ಇನಿಂಗ್ಸ್‌ನಲ್ಲಿ ಆಡಿದಷ್ಟು ಲೀಲಾಜಾಲವಾಗಿ ರನ್‌ ಮೊತ್ತವನ್ನು ಹಿಂಬಾಲಿಸುವ ವೇಳೆ ಬ್ಯಾಟ್‌ ಬೀಸುವುದಿಲ್ಲ ಎಂಬ ಮಾತಿದೆ. ವಿರಾಟ್‌  ಇದಕ್ಕೆ ತದ್ವಿರುದ್ಧ. ಎಷ್ಟೋ ಬಾರಿ ಈ ಮನುಷ್ಯನ ಈ ಕೆಚ್ಚುಗಾರಿಕೆಯಿಂದಲೇ ಹೆಚ್ಚು ಗೌರವಕ್ಕೆ ಪಾತ್ರರಾಗುವುದು. 2008ರಿಂದ 2015ರವರೆಗೆ ಮೊದಲ ಇನ್ನಿಂಗ್ಸ್‌ನಲ್ಲಿ ಆಡಿದ ಕೊಹ್ಲಿ ಕೇವಲ 39.03ರ ಸರಾಸರಿಯಲ್ಲಿ 2,537 ರನ್‌ ಗಳಿಸಿದ್ದಾರೆ. 2016-17 ಮಾತ್ರ ಭಿನ್ನ. 14 ಇನಿಂಗ್ಸ್‌ನಲ್ಲಿ 895 ರನ್‌, 74.58ರ ಅಪೂರ್ವ ಸರಾಸರಿ. ಸಚಿನ್‌ ನಾಯಕತ್ವದ ವಿಚಾರದಲ್ಲಿ ದಯನೀಯವಾಗಿ ಸೋಲು ಕಂಡಿದ್ದರೆ ಕೊಹ್ಲಿ ಆಟ ಜವಾಬ್ದಾರಿಗಳಿಂದ ಇನ್ನಷ್ಟು ಪ್ರಖರವಾಗಿದೆ. 

ಮಾ.ವೆಂ.ಸ.ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next