Advertisement

ಕೊಹ್ಲಿ , ಕುಂಬ್ಳೆ ಜತೆ ಜತೆಯಲಿ…

04:39 PM Jun 03, 2017 | Harsha Rao |

ಬರ್ಮಿಂಗಂ: ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಅನಿಲ್‌ ಕುಂಬ್ಳೆ-ವಿರಾಟ್‌ ಕೊಹ್ಲಿ ನಡುವೆ ಸಂಭವಿಸಿದೆ ಎನ್ನಲಾದ ವಿರಸದ್ದೇ ಪ್ರಮುಖ ಸುದ್ದಿ. ಕುಂಬ್ಳೆ ಅಂಗಳಕ್ಕೆ ಇಳಿಯುತ್ತಿದ್ದಂತೆಯೇ ಕೊಹ್ಲಿ ಅಭ್ಯಾಸ ಬಿಟ್ಟು ಹೊರನಡೆದರೆಂಬುದು ದೊಡ್ಡ ಸುದ್ದಿಯಾಗಿತ್ತು. ಆದರೆ ಇದರ ಸತ್ಯಾಸತ್ಯತೆ ಬಗ್ಗೆ ಯಾರಿಗೂ ತಿಳಿದಿಲ್ಲ ಎಂಬುದು ಅಷ್ಟೇ ಸತ್ಯ!

Advertisement

ಶುಕ್ರವಾರದ ಬೆಳವಣಿಗೆ ಪ್ರಕಾರ, ಅಭ್ಯಾಸದ ವೇಳೆ ಕುಂಬ್ಳೆ-ಕೊಹ್ಲಿ ಒಟ್ಟಿಗೇ ಇದ್ದ ದೃಶ್ಯಗಳು ಗಮನ ಸೆಳೆದಿವೆ. ಬರ್ಮಿಂಗಂನಲ್ಲಿ ಮಳೆಯಾದ ಕಾರಣ ಭಾರತದ ಅಭ್ಯಾಸಕ್ಕೆ ಅಡಚಣೆಯಾಗಿತ್ತು. ಹೀಗಾಗಿ ಟೀಮ್‌ ಇಂಡಿಯಾ ಸದಸ್ಯರೆಲ್ಲ ಒಳಾಂಗಣದಲ್ಲಿ ಅಭ್ಯಾಸ ನಡೆಸಿದರು. ಇಲ್ಲಿ ಒಟ್ಟು 4 ನೆಟ್ಸ್‌ ಹಾಕಲಾಗಿತ್ತು. ಇದರಲ್ಲಿ ಮೊದಲ ನೆಟ್ಸ್‌ ಮಾಧ್ಯಮಗಳ ಗಮನ ಸೆಳೆದಿದೆ. ಇಲ್ಲಿ ನಾಯಕ ಕೊಹ್ಲಿ ಮತ್ತು ಕೋಚ್‌ ಕುಂಬ್ಳೆ ಗಹನವಾದ ಚರ್ಚೆಯಲ್ಲಿ ತೊಡಗಿದ್ದರು.

ಕೊಹ್ಲಿ ಚೆಂಡೊಂದನ್ನು ಹಿಡಿದು ಕುಂಬ್ಳೆ ಜತೆ ಏನನ್ನೋ ವಿಚಾರಿಸುತ್ತಿದ್ದರು. ಕುಂಬ್ಳೆ ಸುಮಾರು 20 ನಿಮಿಷಗಳ ಕಾಲ ಮೊದಲ ನೆಟ್ಸ್‌ನಲ್ಲಿದ್ದರು. ಬಳಿಕ 2ನೇ ನೆಟ್‌ ಪ್ರ್ಯಾಕ್ಟೀಸ್‌ ವೀಕ್ಷಿಸಲು ತೆರಳಿದರು. ಅಲ್ಲಿ ಯುವರಾಜ್‌ ಸಿಂಗ್‌ ಮತ್ತು ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಂಗಾರ್‌ ಜತೆ ಥ್ರೋ ಅಭ್ಯಾಸ ನಡೆಸುತ್ತಿದ್ದರು. ಜ್ವರದಿಂದ ಗುಣಮುಖರಾಗಿರುವ ಯುವರಾಜ್‌ ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ಆಡುವ ಎಲ್ಲ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. 

ಇನ್ನೊಂದು ನೆಟ್ಸ್‌ನಲ್ಲಿ ರೋಹಿತ್‌ ಶರ್ಮ ಮತ್ತು ಮಹೇಂದ್ರ ಸಿಂಗ್‌ ಧೋನಿ ಅವರ ಬೌಲಿಂಗ್‌ ಅಭ್ಯಾಸ ಸಾಗುತ್ತಿತ್ತು. 

ಭಾರತ-ಪಾಕ್‌ ಪಂದ್ಯಕ್ಕೆ ಮಳೆ ಭೀತಿ
ಇದೇ ವೇಳೆ ಕ್ರಿಕೆಟ್‌ ಅಭಿಮಾನಿಗಳ ಪಾಲಿಗೆ ಕಹಿ ಸುದ್ದಿಯೊಂದು ಕಾದಿರುವಂತಿದೆ. ಅದೆಂದರೆ, ಭಾರತ-ಪಾಕಿಸ್ಥಾನ ನಡುವಿನ ರವಿವಾರದ ಪಂದ್ಯಕ್ಕೆ ಮಳೆ ಭೀತಿ ಎದುರಾಗಿರುವುದು!

Advertisement

ಈ ಬಹು ನಿರೀಕ್ಷಿತ ಪಂದ್ಯದ ತಾಣವಾಗಿರುವ ಬರ್ಮಿಂಗಂನಲ್ಲಿ ಆಗಾಗ ಮಳೆಯಾಗುತ್ತಿದೆ. ಇದರಿಂದ ಆಸ್ಟ್ರೇಲಿಯ -ನ್ಯೂಜಿಲ್ಯಾಂಡ್‌ ನಡುವಿನ ಶುಕ್ರವಾರದ ಪಂದ್ಯಕ್ಕೂ ಅಡಚಣೆ ಉಂಟಾಗಿತ್ತು. ಮಳೆ ರವಿವಾರವೂ ಸುರಿಯುವ ಸಂಭವವಿದೆ. ಇದರಿಂದ ಭಾರತ-ಪಾಕ್‌ ಪಂದ್ಯಕ್ಕೆ ಅಡಚಣೆಯಾಗುವ ಸಾಧ್ಯತೆ ಇಲ್ಲದಿಲ್ಲ.

ನೆಟ್‌ನಲ್ಲಿ  ಧೋನಿ ಬೌಲಿಂಗ್‌ ಅಭ್ಯಾಸ !
ಬರ್ಮಿಂಗಂ
: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಈಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪಾಕಿಸ್ಥಾನ ವಿರುದ್ಧದ ಚಾಂಪಿಯನ್ಸ್‌ ಟ್ರೋಫಿ ಪಂದ್ಯಕ್ಕೆ ಭಾರತ ತಂಡ ಅಭ್ಯಾಸ ನಡೆಸುತ್ತಿದ್ದಾಗ ಧೋನಿ ನೆಟ್‌ನಲ್ಲಿ ಬೌಲಿಂಗ್‌ ಅಭ್ಯಾಸ ನಡೆಸುತ್ತಿದ್ದ ದೃಶ್ಯ ಕಂಡುಬಂದಿದೆ. ಇದರ ವೀಡಿಯೋವನ್ನು ಬಿಸಿಸಿಐ ಬಿಡುಗಡೆ ಮಾಡಿದೆ. 

ಧೋನಿ ಬೌಲಿಂಗನ್ನು ವಿರಾಟ್‌ ಕೊಹ್ಲಿ ನಾನ್‌ ಸ್ಟ್ರೈಕರ್‌ನಲ್ಲಿ ನಿಂತು ವೀಕ್ಷಿಸುತ್ತಿರುವುದನ್ನು ಇದರಲ್ಲಿ ಕಾಣಬಹುದಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ವಿಕೆಟ್‌ ಕೀಪರ್‌ ಕಮ್‌ ಬ್ಯಾಟ್ಸ್‌ಮನ್‌ ಆಗಿರುವ ಧೋನಿ ಈ ಹಿಂದೆ ಟೆಸ್ಟ್‌ ಪಂದ್ಯವೊಂದರಲ್ಲಿ ಬೌಲಿಂಗ್‌ ಮಾಡಿದ್ದರು. ತನ್ನ ಮೊದಲ ಓವರ್‌ನಲ್ಲೇ ಇಂಗ್ಲೆಂಡ್‌ನ‌ ಕೆವಿನ್‌ ಪೀಟರ್‌ಸನ್‌ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದ್ದರು ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next