Advertisement
ಧೋನಿಗೆ ಗೌರವ ಸೂಚಿಸಿ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಈ ಹೊತ್ತಿನಲ್ಲಿ ಕೊಹ್ಲಿ ಇಂಥದೊಂದು ಟ್ವೀಟ್ ಮಾಡಲು ಕಾರಣವೇನು? ಧೋನಿ ಏನಾದರೂ ನಿವೃತ್ತಿ ಹೇಳುತ್ತಿದ್ದಾರಾ? ಎಂಬ ಪ್ರಶ್ನೆ ಹುಟ್ಟಿಕೊಂಡಿತು. ಒಂದು ಹಂತದಲ್ಲಂತೂ ಅವರು ನಿವೃತ್ತಿಯಾಗೇ ಬಿಡುತ್ತಾರೆ ಎಂಬ ಚರ್ಚೆ ಜೋರಾಗಿತ್ತು. ಆಗ ಮಧ್ಯಪ್ರವೇಶಿಸಿದ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್.ಕೆ. ಪ್ರಸಾದ್, ಧೋನಿ ನಿವೃತ್ತಿ ಸಾಧ್ಯತೆಯಿಲ್ಲ, ಇವೆಲ್ಲ ಹೇಗೆ ಶುರುವಾಯಿತು ಎಂದು ತನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
2016ರಲ್ಲಿ ಭಾರತದಲ್ಲಿ ನಡೆದ ಟಿ20 ವಿಶ್ವಕಪ್ 8ರ ಘಟ್ಟದ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಧೋನಿ-ಕೊಹ್ಲಿ ಅದ್ಭುತವಾಗಿ ಆಡಿ ಭಾರತ ತಂಡವನ್ನು ಗೆಲ್ಲಿಸಿದ್ದರು. ಆ ಪಂದ್ಯದಲ್ಲಿ ಕೊಹ್ಲಿ 82, ಧೋನಿ 18 ರನ್ ಗಳಿಸಿದ್ದರು. ಇದನ್ನು ನೆನಪಿಸಿಕೊಂಡ ಕೊಹ್ಲಿ, “ಆ ಪಂದ್ಯವನ್ನು ನಾನೆಂದಿಗೂ ಮರೆಯುವುದಿಲ್ಲ. ಅದು ವಿಶೇಷ ರಾತ್ರಿ. ಈ ಮನುಷ್ಯ (ಧೋನಿ) ನನ್ನನ್ನು ಫಿಟೆ°ಸ್ ಪರೀಕ್ಷೆಯಲ್ಲಿ ಓಡುವಂತೆ ಓಡಿಸಿದ್ದರು’ ಎಂದು ಟ್ವೀಟ್‌ನಲ್ಲಿ ಉಲ್ಲೇಖೀಸಿದ್ದರು. ಇದು ಕೇವಲ ಧೋನಿಯನ್ನು ನೆನಪಿಸಿಕೊಳ್ಳುವ ಒಂದು ಯತ್ನವಾಗಿತ್ತು. ಆದರೆ ಈ ಟ್ವೀಟ್‌ನಿಂದಾಗಿ ಸಾಮಾಜಿಕ ತಾಣದಲ್ಲಿ ಊಹಾಪೋಹಗಳ ಸುರಿಮಳೆಯಾಯಿತು. ಧೋನಿ ನಿವೃತ್ತಿಯಾಗಲಿದ್ದಾರೆ ಎಂಬ ಚರ್ಚೆ ಜೋರಾಗತೊಡಗಿತು.