ಮುಂಬಯಿ: ಇಲ್ಲಿನ “ವಾಂಖೇಡೆ ಸ್ಟೇಡಿಯಂ’ನಲ್ಲಿ ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯ ಭಾನುವಾರ ನಡೆಯುತ್ತಿರುವ ಮೊದಲ ಮುಖಾಮುಖೀಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಹೊಸ ದಾಖಲೆಗೆ ಭಾಜನರಾಗಿದ್ದಾರೆ.
200ನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಆಡಿದ ಕೊಹ್ಲಿ 31 ನೇ ಶತಕ ಸಿಡಿಸಿ ರಿಕಿ ಪಾಂಟಿಂಗ್ ದಾಖಲೆ ಮುರಿದರು. ಕೊಹ್ಲಿ 200 ಪಂದ್ಯವಾಡಿದ ವಿಶ್ವದ 72ನೇ, ಭಾರತದ 14ನೇ ಕ್ರಿಕೆಟಿಗನಾಗಿ ಮೂಡಿಬಂದಿದ್ದಾರೆ.
200 ಪಂದ್ಯಗಳಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 280 ರನ್ ಗಳಿಸಿ ಪ್ರವಾಸಿ ಕಿವೀಸ್‌ಗೆ ಗೆಲ್ಲಲು 281 ರನ್‌ಗಳ ಸವಾಲು ಮುಂದಿಟ್ಟಿದೆ.
ಕೊಹ್ಲಿ ಪಡೆ 16 ರನ್ ಆಗುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ಧವನ್ 9 ರನ್‌ಗಳಿಸಿ ಔಟಾದರು. ರೋಹಿತ್ ಶರ್ಮಾ 20 ರನ್‌ಗಳಿಸಿ ನಿರ್ಗಮಿಸಿದರು. ಕೇಧಾರ್ ಜಾದವ್ 12, ದಿನೇಶ್ ಕಾರ್ತಿಕ್ 37, ಧೋನಿ 25, ಹಾರ್ದಿಕ್ ಪಾಂಡ್ಯಾ 16 ರನ್‌ಗಳಿಸಿ ಕೊಹ್ಲಿಗೆ ಸಾಥ್ ನೀಡಿದರು.
ಅಮೋಘ ಆಟವಾಡಿದ ಕೊಹ್ಲಿ 121ರನ್‌ಗಳಿಗೆ ಔಟಾದರು. ಕೊನೆಯಲ್ಲಿ ಉತ್ತಮ ಆಟವಾಡಿದ ಭುವನೇಶ್ವರ್ ಕುಮಾರ್ 26 ರನ್‌ಗಳಿಸಿ ಔಟಾದರು.