Advertisement

ಕೊಹ್ಲಿ: ಸಚಿನ್‌ಗೆ ಅರ್ಹ ಉತ್ತರಾಧಿಕಾರಿ

11:12 PM Aug 23, 2019 | mahesh |

ವಿಶ್ವ ಕ್ರಿಕೆಟ್‌ನ ದೇವರೆಂದೇ ಒಂದುಕಾಲದಲ್ಲಿ ಅಭಿಮಾನಿಗಳಿಂದ ಆರಾಧಿಸಲ್ಪಟ್ಟಿದ್ದ ಸಚಿನ್‌ ತೆಂಡುಲ್ಕರ್‌ರ ಒಂದೊಂದೇ ದಾಖಲೆಗಳು ಹಿಂದಕ್ಕೆ ಬೀಳುತ್ತಿವೆ. ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಉಪನಾಯಕ ರೋಹಿತ್‌ ಶರ್ಮ ಸೇರಿಕೊಂಡು ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸುತ್ತ, ಊಹೆಗೂ ನಿಲುಕದ ವೇಗದಲ್ಲಿ ಸಾಗುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಕೊಹ್ಲಿಯ ಆರ್ಭಟ ಹೀಗೆಯೇ ಸಾಗಿದರೆ, ಇನ್ನು ಕೆಲವೇ ವರ್ಷಗಳಲ್ಲಿ ತೆಂಡುಲ್ಕರ್‌ ಅವರ ಎಲ್ಲ ದಾಖಲೆಗಳು ಪತನವಾಗುವುದು ಮಾತ್ರವಲ್ಲ, ಅವೆಲ್ಲ ತೀರಾ ಸಣ್ಣ ಪುಟ್ಟ ದಾಖಲೆಗಳು ಎಂದು ಭಾಸವಾಗುವ ದಿನಗಳೂ ಬರಬಹುದು!

Advertisement

ಹೀಗೆ ಹೇಳಲಿಕ್ಕೆ ಕಾರಣವಿದೆ. ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿ ಆ.14ರಂದು ನಡೆದ 3ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ 43ನೇ ಶತಕ ಬಾರಿಸಿದರು. ಅವರು ಈ ಸಾಧನೆ ಮಾಡಲು ಬಳಸಿಕೊಂಡಿರುವುದು ಕೇವಲ 230 ಇನಿಂಗ್ಸ್‌. ಇದೇ ಮೈಲುಗಲ್ಲಿಗೆ ಸಚಿನ್‌ ತೆಂಡುಲ್ಕರ್‌ ಬಳಸಿಕೊಂಡಿರುವುದು 415 ಇನಿಂಗ್ಸ್‌. ಅಂದರೆ ಸಚಿನ್‌ಗಿಂತ 185 ಕಡಿಮೆ ಇನಿಂಗ್ಸ್‌ಗಳನ್ನು ಕೊಹ್ಲಿ ತಮ್ಮ ಸಾಧನೆಗೆ ಬಳಸಿಕೊಂಡಿದ್ದಾರೆ. ಏಕದಿನದಲ್ಲಿ ಗರಿಷ್ಠ 49 ಶತಕ ಬಾರಿಸಿ ವಿಶ್ವದಾಖಲೆ ನಿರ್ಮಿಸಿರುವ ತೆಂಡುಲ್ಕರ್‌ರನ್ನು ಮೀರಲು ಕೊಹ್ಲಿಗೆ ಬೇಕಿರುವುದು ಇನ್ನು ಕೇವಲ 7 ಶತಕ! ನೀವೇ ಯೋಚಿಸಿ ವೃತ್ತಿಜೀವನದ ಅಂತಿಮ ಹಂತದಲ್ಲಿ ಸಚಿನ್‌ 43 ಶತಕ ಬಾರಿಸಿದ್ದರೆ, ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಪ್ರವೇಶಿಸಿ 11 ವರ್ಷದಲ್ಲೇ 43 ಶತಕ ಚಚ್ಚಿದ್ದಾರೆ. ಸ್ವಾರಸ್ಯವೆಂದರೆ ಸಚಿನ್‌ 43ನೇ ಶತಕ ಬಾರಿಸಿದ ವರ್ಷವಾದ 2008ರಲ್ಲೇ ಕೊಹ್ಲಿ ಏಕದಿನದಲ್ಲಿ ಮೊದಲ ಪಂದ್ಯವಾಡಿದ್ದು. ಅಲ್ಲಿಂದ ಇಲ್ಲಿಯವರೆಗೆ ಅಜಗಜಾಂತರ ಬದಲಾವಣೆಯಾಗಿದೆ.

ಸಚಿನ್‌ ಏಕದಿನದಲ್ಲಿ 43ನೇ ಶತಕ ಬಾರಿಸಿದ್ದು 35ನೇ ವರ್ಷದಲ್ಲಿ. ಅಂದರೆ ಅದಾಗಲೇ ಅವರು ಕ್ರಿಕೆಟ್‌ ಪ್ರವೇಶಿಸಿ 19 ವರ್ಷಗಳಾಗಿದ್ದವು. ಮುಂದಿನ ಐದು ವರ್ಷಗಳ ನಂತರ ನಿವೃತ್ತಿಯಾದರು. ಕೊಹ್ಲಿಗೆ ಈಗ 30 ವರ್ಷ. ಕನಿಷ್ಠ ಇನ್ನು 6ರಿಂದ 8 ವರ್ಷಗಳ ಕ್ರಿಕೆಟ್‌ ಅವರಿಗೆ ಬಾಕಿಯಿದೆ. ಈ ಎಂಟುವರ್ಷಗಳ ಅವಧಿಯಲ್ಲಿ ಕನಿಷ್ಠ ವರ್ಷಕ್ಕೊಂದು ಶತಕವೆಂಬಂತೆ ಬಾರಿಸಿದರೂ, ತೆಂಡುಲ್ಕರ್‌ ದಾಖಲೆ ಬಿದ್ದುಹೋಗುತ್ತದೆ. ಒಂದು ವೇಳೆ ಈಗಿನ ಅರ್ಧವೇಗ ಕಾಪಾಡಿಕೊಂಡರೆ ಇನ್ನು 3 ವರ್ಷದಲ್ಲಿ 50ನೇ ಶತಕ ಬಾರಿಸುತ್ತಾರೆ. ಈಗಿನ ವೇಗವನ್ನೇ ಯಥಾವತ್‌ ಕಾಪಾಡಿಕೊಂಡರೆ, ಇನ್ನೊಂದು ವರ್ಷದಲ್ಲಿ ಕೊಹ್ಲಿ 50 ಶತಕಗಳ ಗಡಿಮುಟ್ಟಿರುತ್ತಾರೆ. ಮುಂದೆ ಅವರಿಗೆ ಉಳಿಯುವ 7 ವರ್ಷದ ಅವಧಿಯಲ್ಲಿ ಅವರ ಶತಕಗಳ ಸಂಖ್ಯೆ ಏನಿಲ್ಲವೆಂದರೂ 60ಕ್ಕೂ ಮುಟ್ಟುವುದು ಖಾತ್ರಿ. ಈಗ ಹೇಳುತ್ತಿರುವುದು ಕೇವಲ ಏಕದಿನದ ಸಾಧನೆ ಬಗ್ಗೆ. ಟೆಸ್ಟ್‌ ಅನ್ನೂ ಪರಿಗಣಿಸಿದರೆ ಅವರ ಶತಕಗಳ ಸಂಖ್ಯೆ ಈಗಲೇ 69ಕ್ಕೇರಿದೆ. ಸಮಕಾಲೀನ ಕ್ರಿಕೆಟ್‌ನಲ್ಲಿ ಯಾರೂ ಕೊಹ್ಲಿ ಸಮೀಪದಲ್ಲೂ ಇಲ್ಲ. ಎಲ್ಲರೂ ಬಹುದೂರದಲ್ಲಿ ನಿಂತು ಕೊಹ್ಲಿಯ ವೇಗವನ್ನು ನೋಡಿ ಕಕ್ಕಾಬಿಕ್ಕಿಯಾಗಿದ್ದಾರೆ. ಭಾರತ ರೋಹಿಕ್‌ ಶರ್ಮ, ಆಸ್ಟ್ರೇಲಿಯದ ಸ್ಟೀವ್‌ ಸ್ಮಿತ್‌, ಡೇವಿಡ್‌ ವಾರ್ನರ್‌, ಇಂಗ್ಲೆಂಡ್‌ನ‌ ಜೋ ರೂಟ್‌, ನ್ಯೂಜಿಲೆಂಡ್‌ನ‌ ಕೇನ್‌ ವಿಲಿಯಮ್ಸನ್‌….ಈ ಯಾವ ಬ್ಯಾಟ್ಸ್‌ಮನ್‌ಗಳೂ ಕೊಹ್ಲಿಗೆ ಸಮೀಪವೂ ಇಲ್ಲ. ಇನ್ನು ಸಾರ್ವಕಾಲಿಕ ಆಟಗಾರರನ್ನೇ ಪರಿಗಣಿಸಿದರೆ ಸಚಿನ್‌ ತೆಂಡುಲ್ಕರ್‌ ಮಾತ್ರ ಕೊಹ್ಲಿಗಿಂತ ಮುಂದಿದ್ದಾರೆ. ಉಳಿದವರೆಲ್ಲ ಇವರಿಬ್ಬರಿಗಿಂತ ಬಹಳ ದೂರದಲ್ಲಿದ್ದಾರೆ.

ಕೇವಲ 100 ಶತಕ!
ಒಂದುಕಾಲದಲ್ಲಿ ಸಚಿನ್‌ ತೆಂಡುಲ್ಕರ್‌ 100ನೇ ಶತಕ ಗಳಿಸಿದಾಗ, ಈ ಮೈಲುಗಲ್ಲನ್ನು ವಿಶ್ವಕ್ರಿಕೆಟ್‌ನಲ್ಲಿ ಯಾರೂ ಮುರಿಯಲಾರರು, ಅದು ಅಭೇದ್ಯ ಎಂದು ಎಲ್ಲರೂ ತೀರ್ಮಾನಿಸಿದ್ದರು. ಕೊಹ್ಲಿಯ ಪ್ರವೇಶವಾಗುವವರೆಗೆ ಆ ಅನಿಸಿಕೆ ತುಸುವೂ ಅಲ್ಲಾಡದೇ ಹಾಗೆಯೇ ಉಳಿದಿತ್ತು. ಯಾವಾಗ ಕೊಹ್ಲಿ, ಒಂದರ ಹಿಂದೊಂದು ದಾಖಲೆಗಳನ್ನು ಪುಡಿಗುಟ್ಟುತ್ತ ಶತಕಗಳ ಮೇಲೆ ಶತಕ ಚಚ್ಚುತ್ತ ಮೇಲೇರುತ್ತಲೇ ಹೋದರೋ, ಈಗ ಅದೇ ಜನ ತೆಂಡುಲ್ಕರ್‌ ಅವರ 100 ಶತಕವನ್ನು ಬರೀ 100 ಶತಕ ಎಂದು ಹೇಳುವ ಮಟ್ಟಕ್ಕೆ ತಲುಪಿದ್ದಾರೆ. ಹಿಂದೆ ತೆಂಡುಲ್ಕರ್‌ ಶತಕ ಬಾರಿಸುತ್ತಿದ್ದಾಗಲೂ ಅಬ್ಟಾ ಎನ್ನುತ್ತಿದ್ದರು. ಈಗ ಕೊಹ್ಲಿಯ ಶತಕಗಳನ್ನು ನೋಡಿದಾಗ ಅದೇ ಜನರಿಗೆ ಅಂದಿನ ತಮ್ಮ ಅಭಿಪ್ರಾಯ ತಪ್ಪಿರಬಹುದು ಎಂಬ ಸಂಶಯ ಬಂದರೆ ಅಚ್ಚರಿಯಿಲ್ಲ. ಕ್ರಿಕೆಟ್‌ ಪಂಡಿತರ ಈಗಿನ ಲೆಕ್ಕಾಚಾರದ ಪ್ರಕಾರ ಕೊಹ್ಲಿ ಕನಿಷ್ಠ 150 ಶತಕ ಬಾರಿಸುತ್ತಾರೆ! ಟೆಸ್ಟ್‌, ಏಕದಿನ, ಟಿ20 ಸೇರಿದರೆ ಕೊಹ್ಲಿಗೆ ಇದೊಂದು ವಿಷಯವೇ ಆಗಲಾರದು. ಆದರೆ ಕೊಹ್ಲಿ ತಮ್ಮ ವೇಗವನ್ನು ಕಡಿಮೆ ಮಾಡಿಕೊಳ್ಳಬಾರದು ಅಷ್ಟೇ.

ಟಿ20ಯಲ್ಲಿ ಮಾತ್ರ ಸ್ವಲ್ಪ ಹಿಂದೆ
ಟೆಸ್ಟ್‌, ಏಕದಿನದಲ್ಲಿ ರನ್‌ ಮಳೆ ಹರಿಸುತ್ತಿರುವ ಕೊಹ್ಲಿ ಟಿ20ಯಲ್ಲಿ ಮಾತ್ರ ಸ್ವಲ್ಪ ಹಿಂದೆ ಬಿದ್ದಿದ್ದಾರೆ. ಈ ಮಾದರಿಯಲ್ಲಿ ಇದುವರೆಗೆ ಅವರು ಒಮ್ಮೆಯೂ ಶತಕ ಬಾರಿಸಿಲ್ಲ ಎನ್ನುವುದು ಚರ್ಚಾರ್ಹ ವಿಚಾರ. ಇದಕ್ಕೆ ಕಾರಣವೂ ಇದೆ. ಕಳೆದ ಕೆಲವು ವರ್ಷಗಳಿಂದ ಅವರು ಟಿ20ಯಲ್ಲಿ ಸತತವಾಗಿ ಆಡುತ್ತಿಲ್ಲ. ಬಹುತೇಕ ಸಂದರ್ಭದಲ್ಲಿ ಅವರು ವಿಶ್ರಾಂತಿ ತೆಗೆದುಕೊಂಡಿದ್ದಾರೆ. ಹಾಗಾಗಿ ರನ್‌ಗಳ ಸಂಖ್ಯೆ ಕಡಿಮೆಯಾಗಿದೆ. 3 ವರ್ಷದ ಹಿಂದೆ ಅವರೇ ಟಿ20ಯಲ್ಲಿ ವಿಶ್ವ ನಂ.1 ಬ್ಯಾಟ್ಸ್‌ಮನ್‌ ಆಗಿದ್ದರು ಎನ್ನುವುದನ್ನು ಇಲ್ಲಿ ಗಮನಿಸಬೇಕು. ಆಗ ಅವರ ಟಿ20 ಅಬ್ಬರ ಹೇಗಿತ್ತೆಂದರೆ, ಅವರನ್ನು ಸರಿಗಟ್ಟುವ ಸಮಕಾಲೀನ ಬ್ಯಾಟ್ಸ್‌ಮನ್ನೇ ಇರಲಿಲ್ಲ. ಸದ್ಯ ರೋಹಿತ್‌ ಶರ್ಮ; ಕೊಹ್ಲಿ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ.

Advertisement

ಈ ವೇಗಕ್ಕೆ ಕಾರಣವೇನು?
ಕೊಹ್ಲಿ ಇಷ್ಟು ಸಲೀಸಾಗಿ ರನ್‌ ಹೇಗೆ ಬಾರಿಸುತ್ತಾರೆ ಎನ್ನುವುದು ಕುತೂಹಲದ ಪ್ರಶ್ನೆ. ಎಂತೆಂತಹ ಕಠಿಣ ಸನ್ನಿವೇಶಗಳಲ್ಲಿ ಅವರು ಸರಾಗವಾಗಿ ರನ್‌ಗಳನ್ನು ಚಚ್ಚುವುದು ನೋಡಿ ಹಲವರು ತಬ್ಬಿಬ್ಟಾಗಿದ್ದಾರೆ. ಕೆಲವು ಬ್ಯಾಟ್ಸ್‌ಮನ್‌ಗಳಂತೂ; ಬ್ಯಾಟಿಂಗ್‌ ಇಷ್ಟು ಸುಲಭವೇ ಎಂದು ಅಚ್ಚರಿಯಾಗುತ್ತದೆ ಎಂದಿದ್ದಾರೆ. ಕೊಹ್ಲಿಗೆ ಹ್ಯಾಗೆ ಇಂತಹ ನಿರಂತರತೆ ಸಾಧ್ಯ? ಇದಕ್ಕೆ ಕಾರಣ ಅವರ ಶಿಸ್ತುಬದ್ಧ ಜೀವನಶೈಲಿ. ಅವರು ತಮ್ಮ ದೈಹಿಕ ಸದೃಢತೆಯನ್ನು ಸತತವಾಗಿ ಕಾಪಾಡಿಕೊಂಡಿದ್ದಾರೆ. ಅಗತ್ಯಬಿದ್ದಾಗ ವಿಶ್ರಾಂತಿ ತೆಗೆದುಕೊಂಡಿದ್ದಾರೆ. ಎಂತಹ ಅದ್ಭುತ ಬೌಲರ್‌ಗಳನ್ನು ತಮ್ಮ ಅನನ್ಯ ತಾಂತ್ರಿಕ ನೈಪುಣ್ಯದ ಮೂಲಕ ಎದುರಿಸುತ್ತಾರೆ. ಗಮನಿಸಿ, ಕೊಹ್ಲಿ ಏಕದಿನದಲ್ಲಿ ಆಡುವಾಗ ಅದೇ ವೇಗವನ್ನು ಪಾಲಿಸುತ್ತಾರೆ. ಟೆಸ್ಟ್‌ಗೆ ಬದಲಾದಾಗ ಆ ವೇಗಕ್ಕೆ ಹೊಂದಿಕೊಳ್ಳುತ್ತಾರೆ. ಟಿ20ಗೆ ಅವರ ವೇಗ ದುಪ್ಪಟ್ಟಾಗುತ್ತದೆ. ಬಹುಶಃ ಇಂತಹ ಬ್ಯಾಟಿಂಗ್‌ ಸಾಮರ್ಥ್ಯ ಸಚಿನ್‌ ತೆಂಡುಲ್ಕರ್‌ರನ್ನು ಹೊರತುಪಡಿಸಿದರೆ ವಿಶ್ವದ ಬೇರೆ ಯಾವುದೇ ಕ್ರಿಕೆಟಿಗರಿಗೆ ಇಲ್ಲ ಎಂದು ನಿರ್ದಾಕ್ಷಿಣ್ಯವಾಗಿ ಹೇಳಬಹುದು. ಆದ್ದರಿಂದಲೇ ಕೊಹ್ಲಿ; ತೆಂಡುಲ್ಕರ್‌ ಅವರ ಉತ್ತರಾಧಿಕಾರಿಯಾಗಿ ಅವರನ್ನು ಮೀರಿ ಮುನ್ನಡೆಯಲು ಸಜ್ಜಾಗಿದ್ದಾರೆ.

ಕೊಹ್ಲಿ ವಿಶಿಷ್ಟ ದಾಖಲೆಗಳು
10,000
ನಾಯಕನಾಗಿ 10,000 ರನ್‌ಗಳನ್ನು ಅತಿವೇಗವಾಗಿ ಗಳಿಸಿದ ಬ್ಯಾಟ್ಸ್‌ಮನ್‌. ಕೊಹ್ಲಿ ಈ ಸಾಧನೆಗೆ ಬಳಸಿಕೊಂಡ ಇನಿಂಗ್ಸ್‌ಗಳ ಸಂಖ್ಯೆ ಕೇವಲ 176. ರಿಕಿ ಪಾಂಟಿಂಗ್‌ ಇದೇ ಸಾಧನೆಗೆ 225 ಇನಿಂಗ್ಸ್‌ ಬಳಸಿಕೊಂಡಿದ್ದರು.

20,000

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೇವಲ ಹತ್ತೇವರ್ಷದಲ್ಲಿ 20,000 ರನ್‌ ಗಳಿಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್‌. ಕೊಹ್ಲಿಯ ಒಟ್ಟು ರನ್‌ ಗಳಿಕೆಯೀಗ 20,502 ರನ್‌.

1000
ಒಂದು ವರ್ಷದಲ್ಲಿ ಅತಿವೇಗವಾಗಿ ಏಕದಿನದಲ್ಲಿ 1000 ರನ್‌ ಗಳಿಸಿದ ವಿಶ್ವದಾಖಲೆ. ಇದಕ್ಕಾಗಿ ಕೊಹ್ಲಿ ಬಳಸಿಕೊಂಡಿದ್ದು ಬರೀ 11 ಇನಿಂಗ್ಸ್‌. ಇದಕ್ಕೂ ಮುನ್ನ ಹಾಶಿಮ್‌ ಆಮ್ಲ 15 ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು.

38
ವಿದೇಶಿ ನೆಲದಲ್ಲಿ ಕೊಹ್ಲಿ 38 ಶತಕ ಗಳಿಸಿದ್ದಾರೆ. ಇದು ವಿಶ್ವದಲ್ಲೇ 2ನೇ ಶ್ರೇಷ್ಠ ಸಾಧನೆ. ಸಚಿನ್‌ ತೆಂಡುಲ್ಕರ್‌ 58 ಶತಕ ಗಳಿಸಿರುವುದು ವಿಶ್ವದಾಖಲೆ.

300
ಬೇರೆ ಬೇರೆ ದ್ವಿಪಕ್ಷೀಯ ಸರಣಿಗಳಲ್ಲಿ 6 ಬಾರಿ 300ಕ್ಕೂ ಅಧಿಕ ರನ್‌ ಗಳಿಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್‌.

23
ರನ್‌ ಬೆನ್ನತ್ತುವ ವೇಳೆ ಕೊಹ್ಲಿ 23 ಬಾರಿ ಶತಕ ಬಾರಿಸಿದ್ದಾರೆ. ಇನ್ನಾವುದೇ ಬ್ಯಾಟ್ಸ್‌ಮನ್‌ ಇಂತಹ ಸಾಧನೆ ಮಾಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next