ಮುಂಬೈ: ಭಾರತ ಟೆಸ್ಟ್ ತಂಡದ ನಾಯಕನ ಸ್ಥಾನಕ್ಕೆ ವಿರಾಟ್ ಕೊಹ್ಲಿ ವಿದಾಯ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸೋಲಿನ ಬಳಿಕ ಕಳೆದ ಶನಿವಾರ ವಿರಾಟ್ ಕೊಹ್ಲಿ ದಿಢೀರನೆ ಈ ಘೋಷಣೆ ಮಾಡಿದರು. ಈ ಮೂಲಕ ಎಲ್ಲಾ ಮಾದರಿಯ ತಂಡದ ನಾಯಕತ್ವದಿಂದ ವಿರಾಟ್ ದೂರವಾಗಿದ್ದಾರೆ.
ವಿರಾಟ್ ತಮ್ಮ ನಿರ್ಧಾರವನ್ನು ಸಾರ್ವಜನಿಕವಾಗಿ ಘೋಷಣೆ ಮಾಡುವ ಮೊದಲು ಬಿಸಿಸಿಐಗೆ ತಮ್ಮ ತೀರ್ಮಾನ ತಿಳಿಸಿದ್ದರು. ವಿರಾಟ್ ಗೆ ತಮ್ಮ ನಾಯಕತ್ವದ ವಿದಾಯ ಪಂದ್ಯವನ್ನು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆಯೋಜನೆ ಮಾಡಲು ಬಿಸಿಸಿಐ ಒಲವು ತೋರಿತ್ತು ಎಂದು ವರದಿಯಾಗಿದೆ.
ಭಾರತ ತಂಡವು ಫೆ.25ರಿಂದ ಶ್ರೀಲಂಕಾ ವಿರುದ್ಧ ಬೆಂಗಳೂರಿನಲ್ಲಿ ಟೆಸ್ಟ್ ಪಂದ್ಯವಾಡಲಿದೆ. ಈ ಪಂದ್ಯವನ್ನು ವಿರಾಟ್ ನಾಯಕತ್ವದ ವಿದಾಯ ಪಂದ್ಯವಾಗಿ ಅದ್ದೂರಿಯಾಗಿ ಆಯೋಜಿಸಲು ಬಿಸಿಸಿಐ ಮುಂದಾಗಿತ್ತು. ಬೆಂಗಳೂರು ಪಂದ್ಯ ವಿರಾಟ್ ರ 100ನೇ ಟೆಸ್ಟ್ ಪಂದ್ಯವೂ ಆಗಿರಲಿದೆ. ಆದರೆ ಬಿಸಿಸಿಐನ ಆಫರ್ ಗೆ ವಿರಾಟ್ ತಿರಸ್ಕರಿಸಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಆ್ಯಶಸ್ ಗೆಲುವಿನ ಸಂತಸದಲ್ಲೂ ಒಂದು ನಡೆಯಿಂದ ಹೃದಯ ಗೆದ್ದ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್
“ಒಂದು ಪಂದ್ಯವು ಯಾವುದೇ ವ್ಯತ್ಯಾಸವನ್ನು ಮಾಡುವುದಿಲ್ಲ,” ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಭಾರತದ ಟೆಸ್ಟ್ ನಾಯಕರಾಗಿ ವಿರಾಟ್ ಅಧಿಕಾರಾವಧಿಯು ಸರಣಿ ಸೋಲಿನೊಂದಿಗೆ ಕೊನೆಗೊಂಡಿದೆ. ಬ್ಯಾಟಿಂಗ್ ನತ್ತ ಗಮನಹರಿಸಲು ನಾಯಕನಾಗಿ ಬರುವ ಒತ್ತಡಗಳು ಮತ್ತು ಜವಾಬ್ದಾರಿಗಳನ್ನು ತ್ಯಜಿಸಲು ಅವರು ಬಯಸಿದ್ದರು ಎಂದು ವರದಿ ಹೇಳಿದೆ.