Advertisement

ಶ್ರೇಯಾಂಕದಲ್ಲೂ ಕೊಹ್ಲಿ ದಾಖಲೆಗಳ ಸುರಿಮಳೆ

06:15 AM Feb 21, 2018 | Team Udayavani |

ದುಬಾೖ: ಭಾರತೀಯ ತಂಡದ ನಾಯಕ ವಿರಾಟ್‌ ಕೊಹ್ಲಿ ನೂತನ ಐಸಿಸಿ ಏಕದಿನ ರ್‍ಯಾಂಕಿಂಗ್‌ನ ಬ್ಯಾಟ್ಸ್‌ಮನ್‌ ವಿಭಾಗದಲ್ಲಿ ನಂಬರ್‌ ವನ್‌ ಸ್ಥಾನವನ್ನು ಮರಳಿ ಪಡೆದಿದ್ದಾರೆ. ಏಕದಿನ ಬೌಲಿಂಗ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾ ಅಗ್ರಸ್ಥಾನ ಅಲಂಕರಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು 5-1 ಅಂತರದಿಂದ ಗೆದ್ದ ಭಾರತ ತಂಡ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದೆ.

Advertisement

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆಡಿದ ಆರು ಇನ್ನಿಂಗ್ಸ್‌ಗಳಿಂದ ಕೊಹ್ಲಿ 558 ರನ್‌ ಗಳಿಸಿದ್ದಾರೆ. ದ್ವಿಪಕ್ಷೀಯ ಸರಣಿಯಲ್ಲಿ ಇದು ಆಟಗಾರನೋರ್ವನ ಗರಿಷ್ಠ ಮೊತ್ತವಾಗಿದೆ. ಈ ಸಾಧನೆಯಿಂದ ಅವರು 909 ರೇಟಿಂಗ್‌ ಅಂಕ ಗಳಿಸಿದ್ದಾರೆ. ಇದು ಭಾರತೀಯ ಕ್ರಿಕೆಟಿಗನೋರ್ವನ ಜೀವನಶ್ರೇಷ್ಠ ಸಾಧನೆಯಾಗಿದೆ. ಅವರು ಟೆಸ್ಟ್‌ ರ್‍ಯಾಂಕಿಂಗ್‌ನಲ್ಲೂ 900 ಪ್ಲಸ್‌ ಅಂಕ ಗಳಿಸಿ ಅಪರೂಪದ ಸಾಧನೆ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ 8 ವಿಕೆಟ್‌ ಕಿತ್ತ ಬುಮ್ರಾ ಒಟ್ಟು 787 ಅಂಕ ಗಳಿಸಿ ಅಗ್ರಸ್ಥಾನಕ್ಕೇರಿದರು. ಅವರು ಅಘಾ^ನಿಸ್ಥಾನದ ರಶೀದ್‌ ಖಾನ್‌ ಜತೆ ಅಗ್ರಸ್ಥಾನ ಅಲಂಕರಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ 16 ವಿಕೆಟ್‌ ಕಿತ್ತಿರುವ ಯಜುವೇಂದ್ರ ಚಾಹಲ್‌ ಅಗ್ರ ಹತ್ತರೊಳಗಿನ ಸ್ಥಾನ ಪಡೆದಿದ್ದಾರೆ. ಸದ್ಯ ಅವರು ಎಂಟನೇ ರ್‍ಯಾಂಕ್‌ನಲ್ಲಿದ್ದರೆ ಕುಲದೀಪ್‌ ಯಾದವ್‌ 15ನೇ ಸ್ಥಾನದಲ್ಲಿದ್ದಾರೆ.

ದಕ್ಷಿಣ ಆಫ್ರಿಕಾ ನೆಲದಲ್ಲಿ ಚೊಚ್ಚಲ ಏಕದಿನ ಸರಣಿ ಗೆದ್ದ ಭಾರತ ತಂಡ ರ್‍ಯಾಂಕಿಂಗ್‌ನಲ್ಲಿ ನಂಬರ್‌ ವನ್‌ ಸ್ಥಾನ ಪಡೆದಿದೆ. ಟೆಸ್ಟ್‌ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಟ್ವೆಂಟಿ20ಯಲ್ಲಿ ಮೂರನೇ ಸ್ಥಾನದಲ್ಲಿದೆ.

ಬ್ಯಾಟ್ಸ್‌ಮೆನ್‌ ರ್‍ಯಾಂಕಿಂಗ್‌ನಲ್ಲಿ ದಕ್ಷಿಣ ಆಫ್ರಿಕಾದ ಎಬಿ ಡಿ’ವಿಲಿಯರ್ ದ್ವಿತೀಯ, ಡೇವಿಡ್‌ ವಾರ್ನರ್‌ ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ರೋಹಿತ್‌ ಶರ್ಮ ಆರನೇ ಮತ್ತು ಶಿಖರ್‌ ಧವನ್‌ 10ನೇ ಸ್ಥಾನ ಪಡೆದಿದ್ದಾರೆ.

Advertisement

ವಿವ್‌ ರಿಚರ್ಡ್ಸ್‌ ವಿಶ್ವದಾಖಲೆಗೂ ಕೊಹ್ಲಿ ಕಣ್ಣು
ವಿಶ್ವ ಕ್ರಿಕೆಟ್‌ನಲ್ಲಿ ಸರಿಸಾಟಿಯಿಲ್ಲದ ಬ್ಯಾಟ್ಸ್‌ಮನ್‌ ಆಗಿ ಮುನ್ನುಗ್ಗುತ್ತಿರುವ ವಿರಾಟ್‌ ಕೊಹ್ಲಿ ಮತ್ತೂಂದು ವಿಶ್ವದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ. ಈಗ ಅವರ ದೃಷ್ಟಿಯಿರುವುದು ವಿಂಡೀಸ್‌ ದಂತಕಥೆ ವಿವಿಯನ್‌ ರಿಚರ್ಡ್ಸ್‌ ದಾಖಲೆ ಮೇಲೆ! 

ಒಂದು ದ್ವಿಪಕ್ಷೀಯ ಪ್ರವಾಸದಲ್ಲಿ ಆಟಗಾರನೊಬ್ಬ 1000 ರನ್‌ ಗಡಿದಾಟಿದ್ದು ಒಮ್ಮೆ ಮಾತ್ರ. 1976ರಲ್ಲಿ ವಿವಿ ಇಂಗ್ಲೆಂಡ್‌ನ‌ಲ್ಲಿ 1045 ರನ್‌ ಗಳಿಸಿದ್ದರು. ಅದಕ್ಕೂ ಮುನ್ನ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಡಾನ್‌ ಬ್ರಾಡ್ಮನ್‌ ಅವರು ಇಂಗ್ಲೆಂಡ್‌ ನೆಲದಲ್ಲಿ 974 ರನ್‌ ಗಳಿಸಿದ್ದರು. ಕೊಹ್ಲಿ ಉಳಿದೆರಡು ಪಂದ್ಯಗಳಲ್ಲಿ ಇನ್ನು 130 ರನ್‌ ಗಳಿಸಿದರೆ ಪ್ರಸ್ತುತ ಆಫ್ರಿಕಾ ಪ್ರವಾಸದಲ್ಲಿ 1000 ರನ್‌ ಮುಟ್ಟಲಿದ್ದಾರೆ. ಅಲ್ಲಿಗೆ ವಿವಿ ನಂತರ ಈ ಸಾಧನೆ ಮಾಡಿದ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next