Advertisement
ಗಂಗೂಲಿ ಕಾಲದಿಂದಲೇ ಬದಲಾವಣೆ ಆರಂಭಕಪಿಲ್ದೇವ್ ನಾಯಕತ್ವದ ನಂತರ ಭಾರತ ತಂಡ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್…ತಂಡಗಳಿಗೆ ಸೆಡ್ಡು ಹೊಡೆಯಲು ಆರಂಭಿಸಿದ್ದು, ಸೌರವ್ ಗಂಗೂಲಿ ನಾಯಕತ್ವದ ಕಾಲದಲ್ಲಿ. ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ವಿ.ವಿ.ಎಸ್.ಲಕ್ಷ್ಮಣ್, ವೀರೇಂದ್ರ ಸೆಹ್ವಾಗ್… ಅವರ ಆಟ ತಂಡದ ಗೆಲುವಿಗೆ ನೆರವಾಗುತ್ತಿತ್ತು. ಅದರಲ್ಲಿಯೂ ಸ್ವದೇಶದಲ್ಲಿ ಗೆಲುವನ್ನು ಅಷ್ಟು ಸುಲಭದಲ್ಲಿ ವಿದೇಶಿ ತಂಡಗಳಿಗೆ ಬಿಟ್ಟುಕೊಡುತ್ತಿರಲಿಲ್ಲ. ವಿದೇಶದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ಹೊರಬರುತ್ತಿರಲಿಲ್ಲ ನಿಜ, ಆದರೆ ಕಳಪೆ ಆಗಿರಲಿಲ್ಲ. ಹೀಗಾಗಿಯೇ 2003ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾರತ ಫೈನಲ್‌ಗೆ ಲಗ್ಗೆ ಹಾಕುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಸೌರವ್ ಗಂಗೂಲಿ ನಾಯಕತ್ವದ ಕಾಲದಲ್ಲಿಯೇ ಬದಲಾವಣೆಯ ಆರಂಭ ಎನ್ನಬಹುದು.
ಗಂಗೂಲಿ ನಾಯಕತ್ವವನ್ನು ಬಿಟ್ಟ ನಂತರ ಸ್ವಲ್ಪ ಕಾಲ ರಾಹುಲ್ ದ್ರಾವಿಡ್ ಆ ಜವಾಬ್ದಾರಿ ವಹಿಸಿಕೊಂಡಿದ್ದರು. ಈ ಹಂತದಲ್ಲಿ ಭಾರತ ತಂಡದ ಪ್ರದರ್ಶನ ಕಳಪೆ ಎಂದೇ ವಿಶ್ಲೇಷಿಸಲಾಗುತ್ತಿದೆ. 2007 ವಿಶ್ವಕಪ್‌ನಲ್ಲಿ ಲೀಗ್ ಹಂತದಲ್ಲಿಯೇ ಹೀನಾಯವಾಗಿ ಸೋತು ಹೊರಬಿದ್ದ ನಂತರ ಬಿಸಿಸಿಐ ಎಚ್ಚೆತ್ತುಕೊಂಡಿತು. ಈ ಸಂದರ್ಭದಲ್ಲಿ ತಂಡದಲ್ಲಿ ಮಿಂಚುತ್ತಿದ್ದ ಯುವ ಆಟಗಾರ ಧೋನಿಗೆ ನಾಯಕತ್ವದ ಜವಾಬ್ದಾರಿ ನೀಡಲಾಯಿತು. ಚಿಕ್ಕ ವಯಸ್ಸಿನಲ್ಲಿ ತನಗೆ ಸಿಕ್ಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಧೋನಿ ಯಶಸ್ವಿಯಾದರು. ಎಂತಹ ಒತ್ತಡದ ಸಂದರ್ಭ ಎದುರಾದರೂ ತಾಳ್ಮೆ ಕಳೆದುಕೊಳ್ಳುತ್ತಿರಲ್ಲಿಲ. ಅದೃಷ್ಟದ ಜತೆಗೆ ಚಾಣಾಕ್ಷ ತನವೂ ವರ್ಕ್ ಔಟ್ ಆಗುತ್ತಿತ್ತು. ಮಧ್ಯಮ ಕ್ರಮಾಂಕದಲ್ಲಿ ತಾನೇ ಸ್ವತಃ ಫಿನಿಷರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್… ಇವರ ಬ್ಯಾಟಿಂಗ್ ಶಕ್ತಿ ತಂಡಕ್ಕೆ ಆಧಾರವಾಗಿತ್ತು. ಹೀಗಾಗಿ 2007ರಲ್ಲಿ ಟಿ20, 2011ರಲ್ಲಿ ಏಕದಿನ ವಿಶ್ವಕಪ್ ತಂದಿದ್ದಾರೆ. ಆದರೆ ಈ ಹಂತದಲ್ಲಿಯೂ ಭಾರತ ವಿದೇಶದಲ್ಲಿ ಸರಣಿ ಗೆಲುವಿನ ಸಾಹಸ ಅಷ್ಟಕಷ್ಟೇ ಆಗಿತ್ತು. ಏಷ್ಯಾ ಕಂಡದಲ್ಲಿ ಮಾತ್ರ ಅಬ್ಬರಿಸುತ್ತಿತ್ತು. ಹೀಗಾಗಿ ಭಾರತ ತಂಡಕ್ಕೆ ಏಷ್ಯಾದಲ್ಲಿ ಮಾತ್ರ ಹುಲಿ, ಬೇರೆ ಖಂಡಗಳಲ್ಲಿ ಇಲಿ ಎಂದೇ ಟೀಕೆಗಳು ವ್ಯಕ್ತವಾಗುತ್ತಿದ್ದವು.
Related Articles
ಸದ್ಯ ದೇಶ, ವಿದೇಶದಲ್ಲಿಯೂ ವಿಕಾಟ್ ಕೊಹ್ಲಿ ಪಡೆಯದೇ ಅಬ್ಬರ. ವಿದೇಶಿ ನೆಲದಲ್ಲಿ ಸರಣಿ ಗೆಲ್ಲುತ್ತಾ ಇತಿಹಾಸ ನಿರ್ಮಿಸುತ್ತಿದ್ದಾರೆ. ಈಗಾಗಲೇ ಅಂತ್ಯವಾಗಿರುವ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯನ್ನು 5-1 ರಿಂದ ಗೆದ್ದು ಇತಿಹಾಸ ನಿರ್ಮಿಸಿದೆ. ಬಲಿಷ್ಠ ತಂಡವಾಗಿದ್ದ ಆಫ್ರಿಕಾಗೆ ಅದರದೇ ನೆಲದಲ್ಲಿ ಬಿಸಿ ಮುಟ್ಟಿಸಿದೆ. ಸದ್ಯ ಭಾರತ ತಂಡದ ಓಟಕ್ಕೆ ಹಗ್ಗ
ಹಾಕುವರು ಇಲ್ಲವಾಗಿದೆ. ಈ ಮೂಲಕ ಏಕದಿನದಲ್ಲಿ ನಂ.1 ಸ್ಥಾನದಲ್ಲಿದ್ದ ಆಫ್ರಿಕಾ ತಂಡವನ್ನು ಹಿಂದಿಕ್ಕಿ ಭಾರತ ಆ ಸ್ಥಾನಕ್ಕೇರಿದೆ. ಟೆಸ್ಟ್‌ನಲ್ಲಿ ಕೂಡ ಭಾರತ ನಂ.1 ಸ್ಥಾನದಲ್ಲಿಯೇ ಭದ್ರವಾಗಿದೆ.
Advertisement
2019 ವಿಶ್ವಕಪ್‌ಗೆ ಸಜ್ಜುಸದ್ಯ ಭಾರತ ತಂಡದ ಗುರಿ 2019ರ ಏಕದಿನ ವಿಶ್ವಕಪ್. ಈ ನಿಟ್ಟಿನಲ್ಲಿ ತಂಡವನ್ನು ಸಜ್ಜುಗೊಳಿಸಲಾಗುತ್ತಿದೆ. ಕೊಹ್ಲಿ ನೇತೃತ್ವದಲ್ಲಿಯೇ ಭಾರತ ವಿಶ್ವಕಪ್ ಸವಾಲನ್ನು ಎದುರಿಸಲಿದೆ. ಪ್ರಚಂಡ ಫಾರ್ಮ್ನಲ್ಲಿರುವ ಭಾರತ ಇದೇ ರೀತಿ ಪ್ರದರ್ಶವನ್ನು ಕಾಯ್ದುಕೊಂಡರೆ ಭಾರತಕ್ಕೆ ಮತ್ತೂಂದು ವಿಶ್ವಕಪ್ ಗೆಲುವಿನ ಹಾದಿ ಕಠಿಣವಲ್ಲ. ವಿಶ್ವದ ಯಾವುದೇ ತಂಡಕ್ಕೆ ಹೋಲಿಸಿದರೂ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲಿಯೂ ಭಾರತವೇ ವಿಶ್ವ ಶ್ರೇಷ್ಠ ತಂಡ. ಕಾಗದದ ಮೇಲಿನ ಹುಲಿ, ಸ್ವದೇಶದಲ್ಲಿ ಮಾತ್ರ ಪವರ್, ವಿದೇಶದಲ್ಲಿ ಜೀರೋ…ಹೀಗೆ ನಾನಾ ರೀತಿಯಲ್ಲಿ ಭಾರತ ಕ್ರಿಕೆಟ್ ತಂಡವನ್ನು ಟೀಕಿಸಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ 5-1 ರಿಂದ ಏಕದಿನ ಸರಣಿ ಗೆದ್ದು ವಿದೇಶದಲ್ಲಿಯೂ ನಾವೇ ಹುಲಿ ಅನ್ನುವುದನ್ನು ಕೊಹ್ಲಿ ಪಡೆ ತೋರಿಸಿದ್ದಾರೆ. ಹೀಗಾಗಿ ಸದ್ಯ ಟೀಕಾಕಾರರು ಬಾಯಿಮುಚ್ಚಿದ್ದಾರೆ. ಕೊಹ್ಲಿಯ ಸ್ಥಿರ ಬ್ಯಾಟಿಂಗ್ ನೆರವು ವಿದೇಶಿ ಪಿಚ್‌ನಲ್ಲಿ ಭಾರತ ಹುಲಿಯಾಗಿ ಗರ್ಜಿಸುತ್ತಿದೆ ಅಂದರೆ ಅದಕ್ಕೆ ಮುಖ್ಯ ಕಾರಣ ವಿರಾಟ್ ಕೊಹ್ಲಿಯ ಸ್ಥಿರ ಬ್ಯಾಟಿಂಗ್ ಪ್ರದರ್ಶನ. ಪ್ರತಿ ಪಂದ್ಯದಲ್ಲಿಯೂ ಎದುರಾಳಿಯ ಬೌಲರ್‌ಗಳ ಬೆವರಿಳಿಸುತ್ತಾರೆ. ಕೊಹ್ಲಿ ಬ್ಯಾಟಿಂಗ್‌ನಲ್ಲಿ ಯಾವುದೇ ವೀಕ್ ಪಾಯಿಂಟ್ ಇಲ್ಲ. ಹೀಗಾಗಿ ಬೌಲರ್‌ಗಳು ಹೈರಾಣಾಗುತ್ತಾರೆ. 208 ಏಕದಿನ ಪಂದ್ಯಗಳಲ್ಲಿ 9588 ರನ್ ದಾಖಲಿಸಿದ್ದಾರೆ. ಅದರಲ್ಲಿ 35 ಶತಕ ಸೇರಿದೆ ಅಂದರೆ ಕೊಹ್ಲಿಯ ಬ್ಯಾಟಿಂಗ್ ವೈಭವ ತಿಳಿಯುತ್ತದೆ. ಜತೆಗೆ ಭಾರತ ತಂಡಕ್ಕೆ ಬ್ಯಾಟಿಂಗ್‌ನಲ್ಲಿ ರೋಹಿತ್ ಶರ್ಮ, ಶಿಖರ್ ಧವನ್, ಧೋನಿ ನೇರವಾಗುತ್ತಿದ್ದಾರೆ. ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬುಮ್ರಾ, ಸ್ಪಿನ್ನರ್‌ಗಳಾದ ಆರ್.ಅಶ್ವಿನ್, ಯಜುವೇಂದ್ರ ಚಹಲ್, ಕುಲದೀಪ್ ಯಾದವ್ ಜಾದೂ ನಡೆಸುತ್ತಿದ್ದಾರೆ.