ದುಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ಸದ್ಯ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಮಾಡುತ್ತಿರುವ ಕೊಹ್ಲಿ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ಸ್ಮಿತ್ ಹಿಂದಿಕ್ಕಿ ನಂ.1 ಟೆಸ್ಟ್ ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಿದ್ದಾರೆ.
ಗುರುವಾರ ಐಸಿಸಿ ಬಿಡುಗಡೆಗೊಳಿಸಿದ ರ‍್ಯಾಕಿಂಗ್ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಯಕ 937 ಅಂಕಗಳೊಂದಿಗೆ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ. ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್‌ರ 961 ಅಂಕಗಳು ಸಾರ್ವಕಾಲಿಕ ಸಾಧನೆಯಾಗಿದೆ. ಕೊಹ್ಲಿ ಈ ಪಟ್ಟಿಯಲ್ಲಿ 11ನೇ ಸ್ಥಾನ ಪಡೆದಿದ್ದಾರೆ.
ಇಂಗ್ಲೆಂಡ್ ಸರಣಿಯ ಮೊದಲ ಪಂದ್ಯದಲ್ಲಿ ಶತಕ ಬಾರಿಸಿ ಅಗ್ರಸ್ಥಾನಕ್ಕೆರಿದ್ದ ಕೊಹ್ಲಿ, ಲಾರ್ಡ್ಸ ಪಂದ್ಯದ ಕಳಪೆ ಪ್ರದರ್ಶನದ ನಂತರ ಸ್ಮಿತ್‌ಗೆ ಮೊದಲ ಸ್ಥಾನ ಬಿಟ್ಟುಕೊಟ್ಟಿದ್ದರು. ಆದರೆ ಟ್ರೆಂಟ್ ಬ್ರಿಡ್ಜ್ ಪಂದ್ಯದಲ್ಲಿ ಆಕರ್ಷಕ 97 ಮತ್ತು 103 ರನ್ ಹೊಡೆಯುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡಾ ಪಡೆದಿದ್ದರು.
ಟೆಸ್ಟ್ ರ‍್ಯಾಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿದ್ದ ಇಂಗ್ಲೆಂಡ್ ನಾಯಕ ಜೋ ರೂಟ್ 2 ಸ್ಥಾನ ಕಳೆದುಕೊಂಡು 5ನೇ ಸ್ಥಾನಕ್ಕಿಳಿದಿದ್ದಾರೆ. ಟಾಪ್ 10ನಲ್ಲಿರುವ ಇತರೆ ಭಾರತೀಯ ಆಟಗಾರನೆಂದರೆ ಚೇತೇಶ್ವರ ಪೂಜಾರ ( 6ನೇ ರ‍್ಯಾಂಕ್ )
ಬೌಲಿಂಗ್‌ನಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್‌ಸನ್ ಮೊದಲ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಭಾರತದ ರವೀಂದ್ರ ಜಡೇಜ ಮೂರನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಆರ್.ಅಶ್ವಿನ್ ಎರಡು ಸ್ಥಾನ ಕಳೆದುಕೊಂಡು 7 ನೇ ಕ್ಕೆ ತೃಪ್ತಿ ಪಟ್ಟು ಕೊಂಡಿದ್ದಾರೆ