ಕೂಡ್ಲಿಗಿ: ತಾಲೂಕಿನ ಗಂಡಬೊಮ್ಮನಹಳ್ಳಿಯಲ್ಲಿ ಗೋಶಾಲೆ ಆರಂಭವಾಗಿ 4 ತಿಂಗಳಾಗಿದ್ದು, 3 ತಿಂಗಳು ಉತ್ತಮ ಗುಣಮಟ್ಟ ಮೇವು ಜಾನುವಾರುಗಳಿಗೆ ವಿತರಣೆ ಮಾಡಲಾಗಿತ್ತು. ಆದರೆ, ಕಳೆದ 2 ವಾರಗಳಿಂದ ಕಳಪೆ ಗುಣಮಟ್ಟದ, ಕೊಳೆತ ಭತ್ತದ ಮೇವು ವಿತರಿಸುವುದರಿಂದ ಮೇವು ತಿನ್ನದೇ ಜಾನುವಾರುಗಳು ಪರದಾಡುತ್ತಿವೆ.
ಸದ್ಯ ಗೋಶಾಲೆಯಲ್ಲಿ 3 ಸಾವಿರ ಜಾನುವಾರುಗಳಿದ್ದು, 35 ಟನ್ ಮೇವು ಸಂಗ್ರಹವಾಗಿದೆ. ಆದರೆ ಗುಣಮಟ್ಟದ ಮೇವು ವಿತರಣೆಗೆ ಸ್ಥಳೀಯ ಆಡಳಿತ ಮುಂದಾಗಬೇಕಿದೆ. ಒಂದು ಸಾವಿರಕ್ಕೂ ಹೆಚ್ಚು ಜಾನುವಾರುಗಳಿಗೆ ಸಮರ್ಪಕ ನೆರಳಿನ ವ್ಯವಸ್ಥೆ ಕಲ್ಪಿಸದಿರುವ ಕಾರಣ ದಿನ ಪೂರ್ಣ ಬಿಸಿಲಿನ ಶಾಖಕ್ಕೆ ಬಳಲುತ್ತಿರುವುದು ಮಾತ್ರ ದುರ್ದೈವ.
ಇಲ್ಲಿಯವರೆಗೂ ಒಟ್ಟು 1739 ಟನ್ ಬಂದಿದ್ದು, ಇದರಲ್ಲಿ 1705 ಟನ್ ಮೇವು ಖಾಲಿಯಾಗಿದೆ. 34 ಟನ್ ಮಾತ್ರ ಮೇವು ಸಂಗ್ರಹವಿದೆ. ಸದ್ಯ ಗೋಶಾಲೆಯಲ್ಲಿ ಸುಮಾರು 3 ಸಾವಿರ ಜಾನುವಾರುಗಳಿದ್ದು, ನಿತ್ಯ 15 ಟನ್ ಮೇವು ವಿತರಿಸಲಾಗುವುದರಿಂದ ಇನ್ನು 2 ದಿನಕ್ಕೆ ಮಾತ್ರ ಮೇವು ಉಳಿದಿದೆ. ಸಹಜವಾಗಿ ಮೇವಿನ ಕೊರತೆ ಇರುವುದರಿಂದ ಜಾನುವಾರಗಳ ರೈತರು ಆಂತಕದಲ್ಲಿದ್ದಾರೆ. ಕೂಡಲೇ ತಾಲೂಕಾಡಳಿತವು ಅಗತ್ಯ ಮೇವು ಪೂರೈಕೆ ಕ್ರಮಕೈಗೊಳ್ಳಬೇಕಿದೆ. ಗೋಶಾಲೆ ಆರಂಭದಲ್ಲಿ 3 ತಿಂಗಳ ಕಾಲ ಉತ್ತಮ ಗುಣಮಟ್ಟದ ಬತ್ತದ ಮೇವಿನ ಜತೆಗೆ ಜೋಳದ ಸೊಪ್ಪೆ ಮೇವು ನೀಡಲಾಗುತ್ತಿತ್ತು. ಹೀಗಾಗಿ ಜಾನುವಾರುಗಳ ಆರೋಗ್ಯವು ಉತ್ತಮವಾಗಿತ್ತು. ಆದರೆ, ಕಳೆದ 2 ವಾರದಿಂದ ಕೇವಲ ಭತ್ತದ ಮೇವು ಪೂರೈಸಲಾಗಿದ್ದು, ಅದು ಕೂಡ ತೀರ ಕಳಪೆ ಗುಣಮಟ್ಟದಿಂದ ಕೂಡಿದೆ.
ಅಸಮರ್ಪಕ ನೆರಳಿನ ವ್ಯವಸ್ಥೆ: ಗೋಶಾಲೆಯಲ್ಲಿ ಜಾನುವಾರುಗಳ ನೆರಳಿಗೆಂದು 4 ಶೆಡ್‌ಗಳಿದ್ದು, ಆರಂಭದಲ್ಲಿ 5 ಲಕ್ಷ ವೆಚ್ಚದಲ್ಲಿ 16 ಶೆಡ್ ನಿರ್ಮಿಸಲಾಗಿತ್ತು. ಒಟ್ಟು 20 ಶೆಡ್‌ಗಳಿದ್ದು, ಪ್ರತಿಯೊಂದು ಶೆಡ್‌ನಲ್ಲಿ 40 ರಿಂದ 50 ಜಾನುವಾರುಗಳಿಗೆ ನೆರಳಿನ ವ್ಯವಸ್ಥೆ ಕಲ್ಪಸಲಾಗಿದೆ. ಒಟ್ಟು 20 ಶೆಡ್‌ಗಳಿಂದ ಸುಮಾರು 1500ಕ್ಕೂ ಜಾನುವಾರುಗಳಿಗೆ ನೆರಳಿನ ವ್ಯವಸ್ಥೆ ಕಲ್ಪಿಸದಂತಾಗುತ್ತದೆ. ಇನ್ನೂಳಿದ 1500 ಜಾನುವಾರುಗಳು ನಿತ್ಯವು ಬಿಸಿಲಿನ ತಾಪದಿಂದ ನರಳುತ್ತಿವೆ.
ಆರಂಭದಲ್ಲಿ ನೀಡಲಾಗುತ್ತಿದ್ದ ಮೇವು ಉತ್ತಮವಾಗಿತ್ತು. ಅದೇ ರೀತಿ ಜೋಳ ಮತ್ತು ಭತ್ತ ಮೇವು ವಿತರಿಸುತ್ತಿದ್ದರು. ಆದರೆ, ವಾರದಿಂದ ಕೇವಲ ಭತ್ತದ ಮೇವು ನೀಡಲಾಗುತ್ತಿದೆ. ಕಳಪೆ ಗುಣಮಟ್ಟದ ಭತ್ತದ ಮೇವು ಆಗಿರುವುದರಿಂದ ಜಾನುವಾರುಗಳು ತಿನ್ನುತ್ತಿಲ್ಲ.
•
ಓಬಣ್ಣ,
ರಾಮಸಾಗರಹಟ್ಟಿ ರೈತ.
ಗೋಶಾಲೆ ಆರಂಭವಾದಾಗಿನಿಂದ ಗುಣಮಟ್ಟದ ಮೇವು ವಿತರಿಸಲಾಗಿದೆ. ಸದ್ಯ ಸಂಗ್ರಹವಿರುವ ಮೇವು ಟೆಂಡರ್‌ನಿಂದ ಖರೀದಿಸಿದ್ದಲ್ಲ. ಮೇವಿನ ಕೊರತೆ ಇರುವ ಕಾರಣ ಬಳ್ಳಾರಿ ಮೇವು ಬ್ಯಾಂಕ್‌ನಲ್ಲಿ ಸಂಗ್ರಹಸಿದ್ದ ಮೇವನ್ನು ತಂದಿದ್ದು, ನಾಳೆಯಿಂದ ಉತ್ತಮ ಮೇವು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.
•ಮಹಾಬಲೇಶ್ವರ,
ತಹಶೀಲ್ದಾರ್.
ಜಾನುವಾರುಗಳ ಆರೈಕೆಗೆ ವೈದ್ಯರು ಮತ್ತು ಇಬ್ಬರು ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಜಾನುವಾರುಗಳ ಆರೋಗ್ಯದ ದೃಷ್ಟಿಯಿಂದ ಗುಣಮಟ್ಟದ ಮೇವು ಪರಿಶೀಲಿಸಿ ತರಿಸಲಾಗುವುದು.
•
ಡಾ.ವಿನೋದಕುಮಾರ್,
ತಾಲೂಕು ಪಶುವೈದ್ಯಾಧಿಕಾರಿ.