Advertisement

ಕೋಡಿಕನ್ಯಾಣ ಮೀನುಗಾರಿಕೆ ಜೆಟ್ಟಿ: ಸಮಸ್ಯೆ ಈಗಲೂ ಜೀವಂತ, ಈಡೇರದ ಆಶ್ವಾಸನೆಗಳು

04:46 PM Jun 13, 2019 | sudhir |

ಕೋಟ: ನೈಸರ್ಗಿಕ ಬಂದರು ಎಂಬ ಹೆಗ್ಗಳಿಕೆ ಪಡೆದಿರುವ ಕೋಡಿಕನ್ಯಾಣ ಮೀನುಗಾರಿಕೆ ಜೆಟ್ಟಿಯಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ನೂರಾರು ಬೋಟ್‌ಗಳನ್ನು ಲಂಗರು ಹಾಕಲಾಗುತ್ತದೆ. ಈ ಜೆಟ್ಟಿಯನ್ನು ಅಭಿವೃದ್ಧಿಗೊಳಿಸಿ ಸರ್ವಕಾಲಿಕ ಬಂದರಾಗಿ ಪರಿವರ್ತನೆಗೊಳ್ಳಬೇಕು ಎನ್ನುವುದು ಇಲ್ಲಿನ ಮೀನುಗಾರರ ಹಲವು ದಶಕಗಳ ಕನಸಾಗಿದೆ. ಆದರೆ ಇಲ್ಲಿನ ಸಮಸ್ಯೆಗಳು ಜೀವಂತವಾಗಿರುವುದರಿಂದ ಜೆಟ್ಟಿಯ ಕಾರ್ಯನಿರ್ವಹಣೆಗೇ ಸಮಸ್ಯೆಯಾಗುತ್ತಿದೆ.

Advertisement

ಹೂಳೆತ್ತುವ ಕಾಮಗಾರಿ ಅರ್ಧಕ್ಕೆ ಸ್ಥಗಿತ
ಇಲ್ಲಿನ ಅಳಿವೆಯಲ್ಲಿ ಹೂಳಿನ ಸಮಸ್ಯೆಯಿಂದ ಬೋಟ್‌ಗಳ ಸಂಚಾರಕ್ಕೆ ಹಿನ್ನಡೆಯಾಗಿತ್ತು. ಹೀಗಾಗಿ 2017ರಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಜಂಟಿಯಾಗಿ ಸುಮಾರು 6 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿ ಹೂಳೆತ್ತುವ ಕಾಮಗಾರಿ ಚಾಲನೆ ನೀಡಿತ್ತು. ಆದರೆ ಹಲವು ಕಾರಣಗಳನ್ನು ನೀಡಿ ಗುತ್ತಿಗೆ ವಹಿಸಿಕೊಂಡ ಕಂಪೆನಿ ಕಾಮಗಾರಿಯನ್ನು ವರ್ಷಗಟ್ಟಲೆ ಸ್ಥಗಿತಗೊಳಿಸಿತ್ತು. ಜತೆಗೆ ಸಿ.ಆರ್‌.ಝಡ್‌ ಸಮಸ್ಯೆ ಕೂಡ ಕಾಮಗಾರಿಗೆ ಹಿನ್ನಡೆಯಾಗಿತ್ತು. ಹೂಳೆತ್ತುವ ಕಾಮಗಾರಿ ಇದುವರೆಗೆ ಪೂರ್ಣಗೊಂಡಿಲ್ಲ.

ಇದರಿಂದ ಬೋಟ್‌ಗಳು ಜೆಟ್ಟಿ ತಲುಪಲು ಸಾಧ್ಯವಾಗುತ್ತಿಲ್ಲ ಮತ್ತು ಈ ಹಿಂದೆ ಕೋಟ್ಯಾಂತರ ವೆಚ್ಚದಲ್ಲಿ ನಿರ್ಮಿಸಿದ ಜೆಟ್ಟಿ, ಬದಿಕಟ್ಟುವ ಕಾಮಗಾರಿ ಎಲ್ಲವೂ ವ್ಯರ್ಥವಾಗಿದೆ.

ಅನುಷ್ಠಾನವಾಗದ ಟೀ-ಜೆಟ್ಟಿ ಕಾಮಗಾರಿ
ಟೀ-ಜೆಟ್ಟಿ ನಿರ್ಮಿಸುವ ಸಲುವಾಗಿ ಈ ಹಿಂದೆ 2 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು ಹಾಗೂ ಮಳೆಗಾಲಕ್ಕೆ ಮೊದಲು ಕಾಮಗಾರಿ ಪೂರ್ಣಗೊಳ್ಳಲಿದೆ ಎನ್ನಲಾಗಿತ್ತು. ಆದರೆ ಕಾಮಗಾರಿ ಇನ್ನೂ ಟೆಂಡರ್‌ ಹಂತದಲ್ಲಿದೆ.

ಈಡೇರದ ಆಶ್ವಾಸನೆಗಳು
ಈ ಹಿಂದೆ ಬಂದರು,ಮೀನುಗಾರಿಕೆ ಸಚಿವರು, ಸಂಸದರು, ಶಾಸಕರು ಸೇರಿದಂತೆ ಹಲವು ಜನಪ್ರತಿನಿಧಿಗಳು ಇಲ್ಲಿಗೆ ಭೇಟಿ ನೀಡಿ ಮೀನುಗಾರರ ಜತೆ ಸಭೆ ನಡೆಸಿ ಜೆಟ್ಟಿಯನ್ನು ಅಭಿವೃದ್ಧಿಪಡಿಸುವ ಆಶ್ವಾಸನೆಯನ್ನು ನೀಡಿದ್ದರು. ಆದರೆ ಇವುಗಳಲ್ಲಿ ಹಲವು ಆಶ್ವಾಸನೆಗಳು ಇಂದಿಗೂ ಈಡೇರಿಲ್ಲ.

Advertisement

ಮಲ್ಪೆ ಬಂದರಿನ ಒತ್ತಡ ಕುಗ್ಗಿಸಲು ಸಹಾ ಯಕ
ಬೋಟ್‌ಗಳ ಸಂಖ್ಯೆ ಹೆಚ್ಚಿರುವುದರಿಂದ ಮಲ್ಪೆ ಬಂದರಿನಲ್ಲಿ ಪ್ರತಿ ವರ್ಷ ಬೋಟ್‌ ನಿಲುಗಡೆಗೆ ಸ್ಥಳಾವಕಾಶದ ಕೊರತೆ ಎದುರಾಗುತ್ತದೆ. ಹೀಗಾಗಿ ಕೋಡಿಕನ್ಯಾಣದ ಜೆಟ್ಟಿ ಅಭಿವೃದ್ಧಿಗೊಂಡರೆ ಈ ಭಾಗದ 500ಕ್ಕೂ ಹೆಚ್ಚು ಬೋಟ್‌ಗಳನ್ನು ಇಲ್ಲಿ ಲಂಗರು ಹಾಕಬಹುದು ಹಾಗೂ ಇದರಿಂದ ಮಲ್ಪೆಯ ಒತ್ತಡ ಕಡಿಮೆಯಾಗುತ್ತದೆ.

ಬೇಡಿಕೆ ಸಲ್ಲಿಸಿ ಸಾಕಾಗಿದೆ
ಕೋಡಿ ಕನ್ಯಾಣ ಮೀನುಗಾರಿಕೆ ಜೆಟ್ಟಿಯ ಕುರಿತು ಹಲವಾರು ವರ್ಷದಿಂದ ಮೀನುಗಾರರು ಹೋರಾಟ ನಡೆಸುತ್ತಿದ್ದೇವೆ. ಆದರೆ ಸಮಸ್ಯೆ ಇಂದಿಗೂ ಜೀವಂತವಾಗಿದೆ. ಮಂಜೂರಾದ ಹಣದಲ್ಲಿ ಹೂಳೆತ್ತುವ ಕಾಮಗಾರಿಯನ್ನು ಸಮರ್ಪಕವಾಗಿ ಮಾಡಿ, ಜೆಟ್ಟಿ ಅಭಿವೃದ್ಧಿಪಡಿಸಿದರೆ ಅನುಕೂಲವಾಗುತ್ತಿತ್ತು. ಆದರೆ ಹೂಳೆತ್ತುವ ಕಾಮಗಾರಿ ಅರ್ಧಕ್ಕೆ ನಿಂತಿದೆ. ಟೀ-ಜೆಟ್ಟಿಗೆ ಬಿಡುಗಡೆಯಾದ ಹಣ ಅನುಷ್ಠಾನವಾಗಿಲ್ಲ. ಹೀಗಾಗಿ ಮೀನುಗಾರರಿಗೆ ಹೋರಾಟ ನಡೆಸುವ ಮನಸ್ಸು ಇಲ್ಲವಾಗಿದೆ.
-ಚಂದ್ರ ಕಾಂಚನ್‌ ಕೋಡಿ, ಅಧ್ಯಕ್ಷರು ಕೋಡಿ ಮೀನುಗಾರರ ಸಂಘ

ಸಿ.ಆರ್‌.ಝಡ್‌. ಅನುಮತಿಗೆ ಕಾಯುತ್ತಿದ್ದೇವೆ
ಸಿ.ಆರ್‌.ಝಡ್‌. ಸಮಸ್ಯೆಯಿಂದಾಗಿ ಜಟ್ಟಿ ಹೂಳೆತ್ತುವ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಇದೀಗ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಲಾಗಿದ್ದು,ಅನುಮತಿ ಸಿಗುವ ನಿರೀಕ್ಷೆ ಇದೆ. ಟೀ-ಜೆಟ್ಟಿ ಕಾಮಗಾರಿ ಟೆಂಡರ್‌ ಹಂತದಲ್ಲಿದೆ. ಈ ವರ್ಷ ಮಳೆಗಾಲ ಮುಗಿದ ತತ್‌ಕ್ಷಣ ಹೂಳೆತ್ತುವ ಕಾಮಗಾರಿ ಜತೆಗೆ ಟೀ-ಜೆಟ್ಟಿಗೆ ಚಾಲನೆ ನೀಡಲಿದ್ದೇವೆ.
-ಮಂಚೇಗೌಡ, ಸಹಾಯಕ ಅಭಿಯಂತರು ಬಂದರು ಇಲಾಖೆ

– ರಾಜೇಶ ಗಾಣಿಗ ಅಚಾÉಡಿ

Advertisement

Udayavani is now on Telegram. Click here to join our channel and stay updated with the latest news.

Next