Advertisement
ಆರೋಗ್ಯ ಇಲಾಖೆಯ ಸಿಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಜ್ವರ ಪೀಡಿತ ಪ್ರದೇಶಗಳಲ್ಲಿ ಮನೆ ಮನೆ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿ, ಚಿಕಿತ್ಸೆಗೆ ಮಾರ್ಗದರ್ಶನ ನೀಡುವ ಮೂಲಕ ಜ್ವರದ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದರೂ ಫಲ ನೀಡಿಲ್ಲ. ಕೋಡಿಂಬಾಳದ ಪಾಲಪ್ಪೆ, ಮುಳಿಯ, ಕೊಠಾರಿ, ಉದೇರಿ, ನೆಲ್ಲಿ ಪಡ್ಡು, ಕುಕ್ಕೆರೆಬೆಟ್ಟು ಪ್ರದೇಶಗಳ 50ಕ್ಕೂ ಹೆಚ್ಚು ಮನೆಗಳಲ್ಲಿ ಬಹುತೇಕ ಎಲ್ಲರೂ ಜ್ವರದ ಬಾಧೆಗೆ ಒಳಗಾಗಿದ್ದಾರೆ. ಕೆಲವು ರೋಗಿಗಳು ಮಂಗಳೂರು ಹಾಗೂ ಪುತ್ತೂರಿನ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಡಬ ಸಮುದಾಯ ಆಸ್ಪತ್ರೆಗೆ ಬರುತ್ತಿರುವ ರೋಗಿಗಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ದಿನಕ್ಕೆ 400ಕ್ಕೂ ಹೆಚ್ಚು ರೋಗಿಗಳು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿರುವುದು ಆತಂಕದ ಬೆಳವಣಿಗೆಯಾಗಿದೆ.
Related Articles
Advertisement
ಜ್ವರದ ತೀವ್ರತೆ ಪರಿಸರದ ಜನರನ್ನು ತೀವ್ರವಾಗಿ ಕಾಡುತ್ತಿದ್ದು, ಕಡಬ ಸಮು ದಾಯ ಆರೋಗ್ಯ ಕೇಂದ್ರಕ್ಕೆ ನಿತ್ಯ 400ಕ್ಕೂ ಮಿಕ್ಕಿ ಹೊರ ರೋಗಿಗಳು ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರಕಾರಿ ಆಸ್ಪತ್ರೆ ಮಾತ್ರವಲ್ಲದೆ ಖಾಸಗಿ ಚಿಕಿತ್ಸಾಲಯಗಳಲ್ಲೂ ಜನ ಬೆಳಗ್ಗಿನಿಂದಲೇ ಚಿಕಿತ್ಸೆಗೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಮಡ್ಯಡ್ಕ ಸರಕಾರಿ ಶಾಲೆಯಲ್ಲಿ ತಾತ್ಕಾಲಿಕ ಜ್ವರ ಪರಿವೀಕ್ಷಣ ಕೇಂದ್ರ ನಾಲ್ಕು ದಿನಗಳಿಂದ ಮಧ್ಯಾಹ್ನದ ವರೆಗೆ ಕಾರ್ಯಾಚರಿಸುತ್ತಿದೆ. ಅಲ್ಲಿ ಓರ್ವ ವೈದ್ಯ ಮತ್ತು ಶುಶ್ರೂಷಕಿ ಸೇವೆಗೆ ಲಭ್ಯರಿರುತ್ತಾರೆ. ಕಡಬ ಸಮು ದಾಯ ಆಸ್ಪತ್ರೆಯ ವ್ಯಾಪ್ತಿಗೊಳಪಟ್ಟ 25 ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕಿಯರು ತಲಾ ಇಬ್ಬರ ತಂಡ ವನ್ನು ರಚಿಸಿಕೊಂಡು ಮನೆ ಮನೆ ಭೇಟಿ ಮಾಡಿ, ಮನೆಯ ಸುತ್ತಮುತ್ತ ನೀರು ಶೇಖರಣೆ ಆಗದಂತೆ ಮತ್ತು ಸೊಳ್ಳೆಗಳಿಂದ ಆದಷ್ಟು ರಕ್ಷಣೆ ಪಡೆಯುವ ಬಗ್ಗೆ ಜಾಗೃತಿ, ಅನಾರೋಗ್ಯ ಕಂಡುಬಂದರೆ ಕೂಡಲೇ ಆರೋಗ್ಯ ಕೇಂದ್ರಕ್ಕೆ ಬರುವಂತೆ ಗ್ರಾಮಸ್ಥರಿಗೆ ಮನವರಿಕೆ ಮಾಡುತ್ತಿದ್ದಾರೆ.
ಮನೆ ಮನೆ ಭೇಟಿ
ಶಂಕಿತ ಡೆಂಗ್ಯೂ ಜ್ವರದ ತೀವ್ರತೆಯನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ, ಕೋಡಿಂಬಾಳ ಗ್ರಾಮದ ಎಲ್ಲ ಮನೆಗಳಿಗೆ ತೆರಳಿ ಪರಿಸರದಲ್ಲಿ ಸ್ವಚ್ಛತೆ ಹಾಗೂ ಸೊಳ್ಳೆ ಉತ್ಪತ್ತಿಯಾಗದಂತೆ ಮುಂಜಾಗ ರೂಕತೆ ಕುರಿತು ಜಾಗೃತಿ ಮೂಡಿಸುತ್ತಿದೆ. ಅಲ್ಲಲ್ಲಿ ಫಾಗಿಂಗ್ ನಡೆಸುತ್ತಿದೆ. ಶಂಕಿತ ಡೆಂಗ್ಯೂ ಜ್ವರದಿಂದ ಮೃತಪಟ್ಟ ಕುಕ್ಕೆರೆಬೆಟ್ಟು ನಿವಾಸಿ ವೀಣಾ ಅವರ ಮನೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಜೂ.27ರಂದು ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಕೋಡಿಂಬಾಳ ಗ್ರಾಮದ ಕಕ್ಕೆತ್ತಿಮಾರ್‌ನಲ್ಲಿರುವ ಕಡಬ ಗ್ರಾ.ಪಂ.ನ ಘನತಾಜ್ಯ ವಿಲೇವಾರಿ ಘಟಕಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.