Advertisement

ಕೋಡಿಹಳ್ಳಿ ಚಂದ್ರಶೇಖರ್ ಎರಡು ತಲೆ ಹಾವು; ರಾಜ್ಯವನ್ನು ಹಾಳು ಮಾಡುತ್ತಿದ್ದಾರೆ; ಈಶ್ವರಪ್ಪ

01:07 PM Dec 14, 2020 | Mithun PG |

ಶಿವಮೊಗ್ಗ:  ಕೋಡಿಹಳ್ಳಿ ಚಂದ್ರಶೇಖರ್ ಅಂತಹ ವ್ಯಕ್ತಿಗಳ ಬಗ್ಗೆ ಎಲ್ಲರೂ ಜಾಗೃತರಾಗಿರಬೇಕು. ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎನ್ನುವ ಉದ್ದೇಶದಿಂದ ಈ ಕೆಲಸ ಮಾಡಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ರಂತಹ ಎರಡು ತಲೆ ಹಾವುಗಳು ರಾಜ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.

Advertisement

ಕೆಎಸ್ ಆರ್ ಟಿಸಿ ಸಿಬ್ಬಂದಿ ಬಂದ್ ವಾಪಸ್ ತೆಗೆದುಕೊಂಡಿದ್ದಾಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಆದರೆ ಒಂದು ಲಕ್ಷಕ್ಕೂ ಹೆಚ್ಚು KSRTC ನೌಕರರನ್ನು ದಾರಿತಪ್ಪಿಸುವ ಕೆಲಸವನ್ನು ಕೋಡಿಹಳ್ಳಿ ಚಂದ್ರಶೇಖರ್ ಮಾಡಿದ್ದರು. ಅವರ ಹಿಂದೆ ಇನ್ಯಾರು ಇದ್ದು ಆಟವಾಡಿದ್ದಾರೆಯೋ ಗೊತ್ತಿಲ್ಲ. ಹುಳಿ ಹಿಂಡುವ ಕೋಡಿಹಳ್ಳಿ ಅಂತವರು ರಾಜ್ಯ ಹಾಗೂ ದೇಶವನ್ನು ಉದ್ದಾರ ಮಾಡುತ್ತಾರೆಯೇ ? ಅವರಿಗೂ ಕೆಎಸ್ ಆರ್ ಟಿಸಿ ನೌಕರರಿಗೂ ಏನು ಸಂಬಂಧವೋ ಗೊತ್ತಿಲ್ಲ.

ಕೋಡಿಹಳ್ಳಿ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ನಾವು ಗಮನಿಸುತ್ತೇವೆ. ನೌಕರರು ಪ್ರತಿಭಟನೆ ನಡೆಸಿದ್ದು ತಪ್ಪು  ಎಂದು ಹೇಳುವುದಿಲ್ಲ, ಅದು ಅವರ ಹಕ್ಕು. ಅವರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸರ್ಕಾರ ಸ್ಪಂದಿಸಿತ್ತು. ಆದರೆ ಕೋಡಿಹಳ್ಳಿ, ನೌಕರರು ಹಾಗೂ ರೈತರಿಗೆ ದ್ರೋಹ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಎಸ್ ಆರ್ ಟಿಸಿ ಮಾತ್ರವಲ್ಲ ರಾಜ್ಯದಲ್ಲಿ 50ಕ್ಕೂ ಹೆಚ್ಚು ನಿಗಮಗಳಿವೆ. ಈ ನಿಗಮಗಳಲ್ಲಿ ಐದು ಲಕ್ಷಕ್ಕೂ ಹೆಚ್ಚು ನೌಕರರಿಗೆ  ಹೊರಗುತ್ತಿಗೆ ಆಧಾರದ ಮೇಲೆ ಎಂದು ನಮೂದಿಸಿಯೇ ನೇಮಕಾತಿ ಮಾಡಲಾಗುತ್ತದೆ. ಈ ಎಲ್ಲಾ ನಿಗಮಗಳ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿದರೆ ಸಂಬಳ ನೀಡಲು ಸಾಲುವುದಿಲ್ಲ ಎಂದರು.

ಗ್ರಾಮಪಂಚಾಯತ್ ಚುನಾವಣೆಯಲ್ಲಿ ಹರಾಜು ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯುತ್ತಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದ್ದು, ಈ ರೀತಿ ಹರಾಜು ಮೂಲಕ ಅಭ್ಯರ್ಥಿಗಳ ಆಯ್ಕೆ‌ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ.

Advertisement

ರಾಜ್ಯದ ಎಲ್ಲೆಡೆ ಶಾಂತಿಯುತವಾಗಿ ಚುನಾವಣೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ‌ಮೋದಿ‌ ಗ್ರಾಮಗಳ ಅಭಿವೃದ್ಧಿಗೆ ನಿರೀಕ್ಷೆಗೂ ಮೀರಿ ಅನುದಾನ ನೀಡುತ್ತಿದ್ದಾರೆ. ಕಳೆದ ಬಾರಿ ಪ್ರವಾಹಬಂದಾಗ 1500 ಕೋಟಿ ರಸ್ತೆಗಳ ಅಭಿವೃದ್ಧಿಗೆ ನೀಡಿದ್ದೇವೆ. 6200 ಗ್ರಾಮಪಂಚಾಯಿತಿಗಳಿಗೆ ಸೋಲಾರ್ ಲೈಟ್ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದಾಗಿ ಗ್ರಾಮಪಂಚಾಯಿತಿಯಲ್ಲಿ ನಿರಂತರವಾಗಿ ವಿದ್ಯುತ್ ಇರಲಿದ್ದು, ಗ್ರಾಮೀಣ ಜನರಿಗೆ ಇದರಿಂದ ಅನುಕೂಲವಾಗಲಿದೆ. ಈ ಬಾರಿ ಚುನಾವಣೆಯಲ್ಲಿ ಅತಿ ಹೆಚ್ಚು ಗ್ರಾಮಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ವಿಶೇಷ ಕಾರ್ಯಕಾರಿ ಸಮಿತಿ ಸಭೆ ಹಲವು ವರ್ಷಗಳ ಬಳಿಕ ಶಿವಮೊಗ್ಗದಲ್ಲಿ ಜನವರಿ 2 ಮತ್ತು 3 ರಂದು ನಡೆಯುತ್ತಿದೆ. ಈ ಸಭೆಯಲ್ಲಿ ಕೇವಲ 150 ಮುಖಂಡರು ಮಾತ್ರ ಪಾಲ್ಗೊಳ್ಳುತ್ತಾರೆ. ಇಲ್ಲಿ ರಾಜಕೀಯ ವಿಷಯಗಳ ಬಗ್ಗೆ ಪ್ರಮುಖ ತೀರ್ಮಾನ ಕೈಗೊಳ್ಳಲಾಗುತ್ತದೆ. ರಾಜ್ಯದ ರಾಜಕಾರಣದಲ್ಲಿ ಈ‌ ಸಭೆ ಹೊಸ ತಿರುವು ನೀಡಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next