Advertisement

ಕೋಡಿಬೆಂಗ್ರೆ ಮೀನುಗಾರಿಕೆ ಕಿರು ಬಂದರು: ಮೂಲಸೌಕರ್ಯಕ್ಕೆ ಬೇಡಿಕೆ

12:49 AM Jul 23, 2019 | Team Udayavani |

ಮಲ್ಪೆ: ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟ ಕೋಡಿಬೆಂಗ್ರೆ ಮೀನುಗಾರಿಕೆ ಬಂದರಿನ ಜೆಟ್ಟಿ ವಿಸ್ತರಣೆ ಕಾಮಗಾರಿಗೆ ಶಿಲಾನ್ಯಾಸ ನಡೆದು ವರ್ಷ ಕಳೆದರೂ ಕೆಲಸ ಆರಂಭಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ.

Advertisement

ನಬಾರ್ಡ್‌ ಯೋಜನೆಯಡಿ 2.70 ಕೋ. ರೂ. ವೆಚ್ಚದಲ್ಲಿ ಸುಮಾರು 90 ಮೀಟರ್‌ ಉದ್ದದ ಜೆಟ್ಟಿ ವಿಸ್ತರಣೆ ಯೋಜನೆಗೆ ಅನುದಾನ ಬಿಡುಗಡೆಯಾಗಿದ್ದು ಟೆಂಡರ್‌ ಪ್ರಕ್ರಿಯೆ ನಡೆದು ಗುದ್ದಲಿಪೂಜೆಯನ್ನು 2018ರ ಮಾರ್ಚ್‌ನಲ್ಲಿ ನಡೆಸಲಾಗಿದೆ. ಆದರೆ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ.

25 ವರ್ಷ ಹಿಂದಿನ ಜೆಟ್ಟಿ

ಈಗಿರುವ ಜೆಟ್ಟಿ ಸುಮಾರು 25 ವರ್ಷ ಹಿಂದೆ ಕಿರು ಬಂದರು ಯೋಜನೆಯಡಿ ನಿರ್ಮಾಣವಾಗಿದ್ದು ಆ ಬಳಿಕ ಇಲ್ಲಿಯವರೆಗೆ ವಿಸ್ತರಣೆ ಯಾಗಿಲ್ಲ. ಆದರೆ ಬೋಟ್‌ಗಳ ಸಂಖ್ಯೆ ಮೊದಲಿಗಿಂತ 10 ಪಟ್ಟು ಹೆಚ್ಚಾಗಿದೆ. ಇಲ್ಲಿ ಸ್ಥಳಾವಕಾಶದ ಕೊರತೆಯಿಂದ ಈ ಭಾಗದ ಬೋಟ್‌ಗಳು ಅನಿವಾರ್ಯವಾಗಿ ಇತರ ಬಂದರನ್ನು ಅವಲಂಬಿಸಬೇಕಾಗಿದೆ. ಜೆಟ್ಟಿ ವಿಸ್ತರ ಣೆಗೆ ಸಾಕಷ್ಟು ಸ್ಥಳಾವಕಾಶವಿದ್ದು, ನೈಸರ್ಗಿಕ ಸ್ಥಿತಿ ಕೂಡ ಅನುಕೂಲವಾಗಿದೆ. ಕನಿಷ್ಠ 100 ಮೀ. ನಷ್ಟು ವಿಸ್ತರಣೆ ಮಾಡಬೇಕೆಂಬ ಬೇಡಿಕೆ ಇಲ್ಲಿನ ಮೀನುಗಾರದ್ದಾಗಿತ್ತು.

ಹೂಳಿನ ಸಮಸ್ಯೆ, ವ್ಯವಹಾರಕ್ಕೆ ಹಿನ್ನಡೆ

Advertisement

ಕೋಡಿಬೆಂಗ್ರೆ ಮೀನುಗಾರಿಕೆ ಬಂದರು ಹೂಳಿನ ಸಮಸ್ಯೆಯಿಂದ ಮೀನುಗಾರರು ಪರದಾಡುವಂತಾಗಿದೆ. ಇಲ್ಲಿನ ಅಳಿವೆ ಬಾಗಿಲು ಮತ್ತು ಬಂದರಿನ ಒಳಭಾಗದಲ್ಲಿ ಸಂಪೂರ್ಣ ಹೂಳು ತುಂಬಿದೆ. ಮೀನುಗಾರರು ನೀರಿನ ಭರತದ ಸಮಯವನ್ನು ಕಾದು ಸಮುದ್ರಕ್ಕೆ ಇಳಿಯಬೇಕಾಗಿದೆ. ಅದೇ ರೀತಿ ಬಂದರಿಗೆ ಬರಬೇಕಾದರೂ ನೀರು ತುಂಬಿದರೆ ಮಾತ್ರ ಸಾಧ್ಯವಾಗುತ್ತದೆ. ಇದು ಮೀನುಗಾರಿಕೆ ವ್ಯವಹಾರಕ್ಕೆ ಹಿನ್ನೆಡೆಯಾಗಿದೆ. ಹಾಗಾಗಿ ಈ ಭಾಗದ ಬೋಟ್‌ಗಳು ಲಂಗರು ಹಾಕಲು ಮಲ್ಪೆ ಬಂದರಿಗೆ ತೆರಳುತ್ತವೆೆ. ಡ್ರೆಜ್ಜಿಂಗ್‌ ಕಾಮಗಾರಿಯನ್ನು ನಡೆಸುವ ಬಗ್ಗೆ ಇಲ್ಲಿನ ಮೀನುಗಾರರು ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ, ಇಲಾಖೆಗಳಿಗೆ ಮನವಿ ನೀಡಿ ಆಗ್ರಹಿಸಿದ್ದರೂ ಇದುವರೆಗೂ ಯಾರೂ ತಮ್ಮ ಬೇಡಿಕೆಗೆ ಸ್ಪಂದಿಸಿಲ್ಲ ಎಂದು ಆರೋಪಿಸಿದ್ದಾರೆ.

ಶಿಥಿಲಾವಸ್ಥೆಯಲ್ಲಿ ಹರಾಜು ಕಟ್ಟಡ

ಇಲ್ಲಿನ ಮೀನು ಹರಾಜು ಪ್ರಾಂಗಣ ಸುಮಾರು 25 ವರ್ಷಗಳ ಹಳೆಯದು. ಕಟ್ಟಡಗಳು ಶಿಥಿಲಾವಸ್ಥೆಯನ್ನು ತಲುಪಿದ್ದು ಮೇಲ್ಛಾವಣಿ ಹಾನಿಗೊಂಡಿದೆ. ವಿದ್ಯುತ್‌ ವ್ಯವಸ್ಥೆ ಇಲ್ಲ. ಹರಾಜು ಪ್ರಾಂಗಣವನ್ನು ಪುನರ್‌ ನಿರ್ಮಾಣ ಮಾಡ ಬೇಕೆಂಬ ಬೇಡಿಕೆಯೂ ಮೀನುಗಾರರದ್ದಾಗಿದೆ. ಬಂದರು ಪ್ರದೇಶದ ಆವರಣಗೋಡೆ ಪ್ರದೇಶದಲ್ಲಿ ಹಲವಾರು ವರ್ಷಗಳಿಂದ ಪೊದೆಗಳು, ಗಿಡಗಳು ಬೆಳದು ನಿಂತಿದ್ದರೂ ತೆರವುಗೊಳಿಸುವ ಕಾರ್ಯ ನಡೆಯುತ್ತಿಲ್ಲ.

  • ನಟರಾಜ್ ಮಲ್ಪೆ
Advertisement

Udayavani is now on Telegram. Click here to join our channel and stay updated with the latest news.

Next