Advertisement

ಕೋಡಿಬೆಂಗ್ರೆಗೆ ಜಿಲ್ಲಾ ಕೇಂದ್ರಕ್ಕಿಂತ ಗ್ರಾ.ಪಂ. ಕೇಂದ್ರ ದೂರ !

12:07 AM Feb 25, 2021 | Team Udayavani |

ಕ್ಷೇತ್ರ ಪುನರ್ವಿಂಗಡಣೆೆ ವೇಳೆ ಕೋಡಿಬೆಂಗ್ರೆಯನ್ನು 31ನೇ ತೋನ್ಸೆ ಗ್ರಾ.ಪಂ. ಮತ್ತು ತೋನ್ಸೆ ಜಿ.ಪಂ. ವ್ಯಾಪ್ತಿಗೆ ಸೇರಿಸಬೇಕು ಎನ್ನುವುದು ಇಲ್ಲಿನವರ ಪ್ರಬಲ ಬೇಡಿಕೆಯಾಗಿದೆ.

Advertisement

ಕೋಟ: ಎರಡು ಕಡೆಗಳಲ್ಲಿ ಸಮುದ್ರ ಹಾಗೂ ಸೀತಾ-ಸ್ವರ್ಣಾ ನದಿಯ ಅಳಿವೆಯಿಂದ ಸುತ್ತುವರಿದ ದ್ವೀಪ ಪ್ರದೇಶದಂತಿರುವ ಊರು ಬ್ರಹ್ಮಾವರ ತಾಲೂಕಿನ ಕೋಡಿಬೆಂಗ್ರೆ. ಅಳಿವೆಯಾಚೆಗಿನ ದೂರದ ಕೋಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಈ ಪ್ರದೇಶ ಒಳಪಟ್ಟಿದೆ. ಇಲ್ಲಿನ ನಿವಾಸಿಗಳು ವಾಹನ ಸಂಚಾರದ ಮೂಲಕ ಗ್ರಾಮ ಪಂಚಾಯತ್‌ ಆಡಳಿತ ಕಚೇರಿ ತಲುಪಬೇಕಾದರೆ 25-26 ಕಿ.ಮೀ. ಪ್ರಯಾಣಿಸಬೇಕು. ಆದರೆ ಊರಿನ ಪಕ್ಕದಲ್ಲೇ ಇರುವ ತೋನ್ಸೆ ಗ್ರಾಮ ಪಂಚಾಯತ್‌ಗೆ ಇರುವ ದೂರ ಕೇವಲ 4 ಕಿ.ಮೀ. ಹೀಗಾಗಿ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಕ್ಷೇತ್ರ ಪುನರ್‌ ವಿಂಗಡಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ತಮ್ಮ ಊರನ್ನು 31ನೇ ತೋನ್ಸೆ ಗ್ರಾಮ ಪಂಚಾಯತ್‌ ಮತ್ತು ತೋನ್ಸೆ ಜಿ.ಪಂ. ವ್ಯಾಪ್ತಿಗೆ ಸೇರಿಸಬೇಕು ಎನ್ನುವುದು ಇಲ್ಲಿನ ನಿವಾಸಿಗಳ ಪ್ರಬಲ ಬೇಡಿಕೆಯಾಗಿದೆ.

ದೂರ ಕ್ರಮಿಸಬೇಕು
ಕೋಡಿಬೆಂಗ್ರೆಯ ನಿವಾಸಿಗಳು ಕೋಡಿ ಕನ್ಯಾಣದಲ್ಲಿರುವ ಗ್ರಾಮ ಪಂಚಾಯತ್‌ ಕಚೇರಿಗೆ ವಾಹನದ ಮೂಲಕ ತೆರಳಬೇಕಾದರೆ ಕೆಮ್ಮಣ್ಣು, ಕಲ್ಯಾಣಪುರ, ಬ್ರಹ್ಮಾವರ, ಸಾಸ್ತಾನದ ಮೂಲಕ 25-26 ಕಿ.ಮೀ. ಸುತ್ತುವರಿಯಬೇಕು. ಸೀತಾ-ಸ್ವರ್ಣಾ ನದಿ ಅಳಿವೆಯಲ್ಲಿ ಕೋಡಿಬೆಂಗ್ರೆ- ಹಂಗಾರಕಟ್ಟೆ ನಡುವೆ ಬಾರ್ಜ್‌ ವ್ಯವಸ್ಥೆ ಇದ್ದರೂ ದ್ವಿಚಕ್ರ ವಾಹನ ಹೊರತುಪಡಿಸಿ ಇತರ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ ಮತ್ತು ಹಂಗಾರಕಟ್ಟೆಯಿಂದ ಕೋಡಿಕನ್ಯಾಣಕ್ಕೆ ಸೂಕ್ತ ಬಸ್‌ಸೌಲಭ್ಯವೂ ಇಲ್ಲ.

ಬೇಡಿಕೆ ಈಡೇರಿಕೆಯ ನಿರೀಕ್ಷೆ
ಕೋಡಿಬೆಂಗ್ರೆ ಪ್ರದೇಶಕ್ಕೆ ಜಿ.ಪಂ.,ತಾ.ಪಂ., ಗ್ರಾ.ಪಂ., ಕ್ಷೇತ್ರಗಳು ದೂರದಲ್ಲಿವೆ. ಹೀಗಾಗಿ ಹತ್ತಿರದಲ್ಲಿರುವ ತೋನ್ಸೆ ಗ್ರಾ.ಪಂ., ಜಿ.ಪಂ. ವ್ಯಾಪ್ತಿಗೆ ನಮ್ಮನ್ನು ಸೇರ್ಪಡೆಗೊಳಿಸಬೇಕು ಎನ್ನುವುದು ಬಹುದಶಕಗಳ ಬೇಡಿಕೆಯಾಗಿದೆ. ಕ್ಷೇತ್ರ ಪುನರ್ವಿಂಗಡಣೆೆ ಸಂದರ್ಭ ನಮ್ಮ ಬೇಡಿಕೆ ಈಡೇರಿಸಬೇಕೆಂದು ಜಿಲ್ಲಾಧಿಕಾರಿಗಳು, ಸಚಿವರಿಗೆ ಮನವಿ ಸಲ್ಲಿಸಲಾಗಿದೆ.
-ರಮೇಶ್‌ ಕುಂದರ್‌, ಕೋಡಿಬೆಂಗ್ರೆ, ಸ್ಥಳೀಯ ನಿವಾಸಿ

ಈ ಹಂತದಲ್ಲಿ ಅಸಾಧ್ಯ
ವಿಧಾನಸಭಾ ಕ್ಷೇತ್ರ ಬೇರೆ-ಬೇರೆ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಜಿ.ಪಂ., ಕ್ಷೇತ್ರ ಪುನರ್ವಿಂಗಡನೆಯಲ್ಲಿ ಇವರ ಬೇಡಿಕೆ ಈಡೇರಿಕೆ ಅಸಾಧ್ಯವಾಗಿದೆ. ಮುಂದೆ ವಿಧಾನಸಭೆ ಕ್ಷೇತ್ರ ಪುನರ್ವಿಂಗಡಣೆಗೊಳ್ಳುವ ಸಂದರ್ಭದಲ್ಲಿ ವಿಧಾನಸಭಾ ಕ್ಷೇತ್ರದ ಜತೆಗೆ ಜಿ.ಪಂ., ತಾ.ಪಂ., ಗ್ರಾ.ಪಂ., ಕ್ಷೇತ್ರಗಳ ಬದಲಾವಣೆಗೆ ಅವಕಾಶವಿದೆ.
-ಜಿ.ಜಗದೀಶ್‌, ಜಿಲ್ಲಾಧಿಕಾರಿ

Advertisement

ಹಲವು ದಶಕಗಳ ಬೇಡಿಕೆ
ಇಲ್ಲಿ 1.5 ಕಿ.ಮೀ. ವ್ಯಾಪ್ತಿಯಲ್ಲಿ ಸುಮಾರು 275 ಮನೆಗಳಿದೆ. ಮೀನುಗಾರಿಕೆ ಇಲ್ಲಿನ ಜನರ ಮೂಲ ಕಸಬು. ಭೌಗೋಳಿಕವಾಗಿ 31ನೇ ತೋನ್ಸೆ ಗ್ರಾ.ಪಂ. ಮತ್ತು ತೋನ್ಸೆ ಜಿ.ಪಂ. ಜತೆಗೆ ಇವರು ಹೊಂದಿಕೊಂಡಿರುವುದರಿಂದ ಹಾಗೂ ಮಲ್ಪೆ ಪೊಲೀಸ್‌ ಠಾಣೆ ವ್ಯಾಪ್ತಿಗೆ ಸೇರಿರುವುದರಿಂದ, ವಿದ್ಯುತ್‌ ಸರಬರಾಜು ನೇಜಾರಿನ ಮುಖಾಂತರ ನಡೆಯುವುದರಿಂದ ಹಾಗೂ ನೀರಿನ ವ್ಯವಸ್ಥೆ ಕೆಮ್ಮಣ್ಣು ಪ್ರದೇಶದ ಮೂಲಕ ನೀಡಲಾಗುತ್ತಿರುವುದರಿಂದ ಹೀಗೆ ಎಲ್ಲ ರೀತಿಯಲ್ಲೂ ತೋನ್ಸೆ ಜತೆ ಹೊಂದಿಕೊಂಡಿರುವುದರಿಂದ ಈ ವ್ಯಾಪ್ತಿಗೆ ನಮ್ಮನ್ನು ಸೇರ್ಪಡೆಗೊಳಿಸಿ ಜಿ.ಪಂ. ತಾ.ಪಂ. ಕ್ಷೇತ್ರವನ್ನು ಬದಲಾಯಿಸಬೇಕು ಎನ್ನುವುದು ಇಲ್ಲಿನ ಜನರ ಹಲವು ದಶ ಕ ಗಳ ಬೇಡಿಕೆಯಾಗಿದೆ.

ಜನಪ್ರತಿನಿಧಿಗಳ ಭೇಟಿ ಅಪರೂಪ
ಈ ಪ್ರದೇಶ ಕುಂದಾಪುರ ವಿಧಾನಸಭೆ ಹಾಗೂ ಕೋಟ ಜಿ.ಪಂ., ಕೋಟತಟ್ಟು ತಾ.ಪಂ.ಗೆ ಒಳಪಟ್ಟಿದೆ. ಇವರು ಆಯ್ಕೆ ಮಾಡಿದ ಜನಪ್ರತಿನಿಧಿಗಳು ಈ ಊರಿಗೆ ಬರಬೇಕಾದರೆ ಹತ್ತಾರು ಕಿ.ಮೀ. ಸುತ್ತಿಬಳಸಬೇಕು. ಆದ್ದರಿಂದ ಕೆಲವೊಮ್ಮೆ 5 ವರ್ಷದ ಆಡಳಿತಾವಧಿಯಲ್ಲಿ ಒಮ್ಮೆಯೂ ಜನಪ್ರತಿನಿಧಿಗಳು ಇಲ್ಲಿಗೆ ಭೇಟಿ ನೀಡದಿರುವ ಉದಾಹರಣೆ ಇದೆ ಮತ್ತು ತಮ್ಮ ಕೆಲಸ ಕಾರ್ಯಗಳಿಗೆ ದೂರದಲ್ಲಿರುವ ಜನಪ್ರತಿನಿಧಿಗಳ ಮನೆ ಬಾಗಿಲಿಗೆ ಅಲೆದಾಡಬೇಕಾದ ಪರಿಸ್ಥಿತಿ ಎನ್ನುವುದು ಇಲ್ಲಿನ ಜನಸಾಮಾನ್ಯರ ನೋವಿನ ನುಡಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next