Advertisement

ಕೋಡಿ: ಬೀಚ್‌ ಕ್ಲೀನ್‌ಗೆ ಕೈಜೋಡಿಸಿದರು ಶಾಲಾ ಮಕ್ಕಳು

06:15 AM Jun 05, 2018 | Team Udayavani |

ಕುಂದಾಪುರ: ಪುರಸಭೆ ವತಿಯಿಂದ ಪರಿಸರ ದಿನದ ಅಂಗವಾಗಿ ಆಯೋಜಿಸಿದ ಸ್ವಚ್ಛತಾ ಸಪ್ತಾಹದಡಿ ಸೋಮವಾರ ಕೋಡಿ ಕಡಲ ಕಿನಾರೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

Advertisement

ಈ ಸಂದರ್ಭದಲ್ಲಿ ಕೋಡಿಯ ಹಾಜಿ ಕೆ. ಮೊದಿನ್‌ ಬ್ಯಾರಿಸ್‌ ಅನುದಾನಿತ ಪ್ರೌಢಶಾಲೆ ಹಾಗೂ ಶ್ರೀ ರಾಮ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ಈ ಬೀಚ್‌ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದುದು ವಿಶೇಷವಾಗಿತ್ತು.

ಪುರಸಭೆಯ ಪೌರ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಸೇರಿದ ಎಲ್ಲರೂ ಸೇರಿ ಕೇವಲ ಒಂದು ಗಂಟೆಯೊಳಗೆ ಕೋಡಿ ಬೀಚ್‌ನ ದಡದಲ್ಲಿ ಬಿದ್ದಿದ್ದ ಕಸದ ರಾಶಿಯನ್ನು ಸ್ವಚ್ಛಗೊಳಿಸಿದರು.

ಸ್ವಚ್ಛತೆಯಿಂದ ಆರೋಗ್ಯ
ಪುರಸಭಾಧ್ಯಕ್ಷೆ ವಸಂತಿ ಮೋಹನ ಸಾರಂಗ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಈ ಪರಿಸರ, ಬೀಚ್‌ ಸ್ವಚ್ಛಗೊಳಿಸುವುದರಿಂದ ಉತ್ತಮ ಆರೋಗ್ಯವನ್ನು ಹೊಂದಬಹುದು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಎಲ್ಲರ ಕರ್ತವ್ಯ. ಈ ಬಗ್ಗೆ ಮಕ್ಕಳು ಮನೆಯವರಿಗೆ, ನೆರೆ-ಹೊರೆಯವರಿಗೆ ಅರಿವು ಮೂಡಿಸಬೇಕು ಎಂದರು.

ಪುರಸಭೆ ಪರಿಸರ ಅಭಿಯಂತರ ಮಂಜುನಾಥ ಶೆಟ್ಟಿ ಮಾಹಿತಿ ನೀಡಿ, ಭೂಮಿಯನ್ನು ಚೆಂದವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಪ್ರತಿ ವರ್ಷ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ವರ್ಷದ  ಘೋಷ ವಾಕ್ಯವೆಂದರೆ  ಪ್ಲಾಸ್ಟಿಕ್‌ ನಿರ್ಮೂಲನೆ. ಭೂಮಿಯಲ್ಲಿರುವ ಶೇ. 90 ರಷ್ಟು ಪ್ಲಾಸ್ಟಿಕ್‌ಗಳು ಬೀಚ್‌ಗಳಲ್ಲಿ ರಾಶಿ ಬೀಳುವುದರಿಂದ ಬೀಚ್‌ನ ಸ್ವಚ್ಛತೆ ಹಾಗೂ ಸೌಂದರ್ಯವನ್ನು ಕಾಪಾಡಬೇಕಾದುದು ಎಲ್ಲರ ಹೊಣೆ ಎಂದವರು ಹೇಳಿದರು.

Advertisement

ಪುರಸಭೆಯ ಮುಖ್ಯಾಧಿಕಾರಿ ವಾಣಿ ಬಿ. ಆಳ್ವ, ಉಪಾಧ್ಯಕ್ಷ ರಾಜೇಶ್‌ ಕಾವೇರಿ, ಸದಸ್ಯರಾದ ಗುಣರತ್ನ, ಪುಷ್ಪಾ ಶೇಟ್‌, ಜ್ಯೋತಿ, ಕೋಡಿಯ ಹಾಜಿ ಕೆ. ಮೊದಿನ್‌ ಬ್ಯಾರಿಸ್‌ ಅನುದಾನಿತ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಜಯಂತಿ, ಶ್ರೀ ರಾಮ ವಿದ್ಯಾ ಕೇಂದ್ರದ ಶಿಕ್ಷಕರು, ಪುರಸಭೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕೋಡಿಯ ನಿರ್ಲಕ್ಷ್ಯ: ಸ್ಥಳೀಯರ ಆಕ್ರೋಶ
ಕೋಡಿಯ ನಿವಾಸಿಗರು, ಸ್ವತ್ಛತಾ ಕಾರ್ಯಕ್ರಮಕ್ಕೆ ಕೋಡಿ ಬೀಚ್‌ಗೆ ಆಗಮಿಸಿದ ಪುರಸಭೆಯ ಸದಸ್ಯರು, ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. ಇಲ್ಲಿ ನೀರು ಹೋಗಲು ಸರಿಯಾದ ಚರಂಡಿ ವ್ಯವಸ್ಥೆಯಿಲ್ಲ. ಸರಿಯಾದ ರಿಕ್ಷಾ ನಿಲ್ದಾಣವಿಲ್ಲ.ಕೇವಲ ಒಂದು ದಿನ ಬಂದು ಸ್ವಚ್ಛತೆ ಮಾಡಿ ಹೋಗುತ್ತೀರಾ. ಮತ್ತೆ ಈ ಕಡೆ ಬರುವುದೇ ಇಲ್ಲ. ಕೋಡಿ ಭಾಗವನ್ನು ಪುರಸಭೆ ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next