Advertisement
ಪ್ರವಾಸಿಗರುಅಭಿವೃದ್ಧಿ ಕಾರ್ಯಕ್ರಮಗಳು ನಡೆದಿದ್ದೇ ಆದಲ್ಲಿ ಅತಿ ಉದ್ದ ವ್ಯಾಪ್ತಿ ಹೊಂದಿದ ಬೀಚ್ ಎಂಬ ಹೆಗ್ಗಳಿಕೆಗೆ ಕೋಡಿ ಬೀಚ್ ಪಾತ್ರವಾಗಲಿದೆ. ಏಕೆಂದರೆ ಸರಿಸುಮಾರು 3.5 ಕಿಮೀ. ದೂರದಲ್ಲಿ ಬೀಚ್ ವ್ಯಾಪಿಸಿಕೊಂಡಿದೆ. ಆದ್ದರಿಂದ ಯಾವುದೇ ಪ್ರದೇಶ ದಲ್ಲೂ ಸಮುದ್ರವಿಹಾರ ನಡೆಸ ಬಹುದಾಗಿದೆ. ಇದರೊಂದಿಗೆ ಇಲ್ಲಿ ಬ್ರೇಕ್ ವಾಟರ್ ಕಾಮಗಾರಿ ನಡೆದಂತೆಯೇ ಇಲ್ಲಿಗೆ ಸಂಜೆ ವೇಳೆಗೆ ಸೂರ್ಯಾಸ್ತ ವೀಕ್ಷಣೆಗೆ ಜನ ಬರಲಾರಂಭಿಸಿದ್ದಾರೆ. ವಾರಾಂತ್ಯವೂ ಇಲ್ಲಿ ಜನಸಂದಣಿ ಹೆಚ್ಚಿದೆ. ಸಂಸಾರ ಸಹಿತರಾಗಿ, ಮಕ್ಕಳು ಸ್ನೇಹಿತರ ಜತೆಗೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಪ್ರವಾಸಿಗರೇನೋ ಬರುತ್ತಿದ್ದಾರೆ. ಆದರೆ ಬರುವ ಪ್ರವಾಸಿಗರಿಗೆ ಮೂಲ ಸೌಕರ್ಯಗಳನ್ನು ತುರ್ತಾಗಿ ಕಲ್ಪಿಸಬೇಕಾದ ಅಗತ್ಯವಿದೆ. ವಿಶ್ರಾಂತಿಗೆ ಕುಳಿತುಕೊಳ್ಳುವ ಬೆಂಚ್‌ಗಳ ವ್ಯವಸ್ಥೆ, ಬಟ್ಟೆ ಬದಲಾಯಿಸಲು, ಸಮುದ್ರ ಸ್ನಾನದ ಬಳಿಕ ಸ್ನಾನದ ವ್ಯವಸ್ಥೆ ಮಾಡಲು, ವಾಹನ ನಿಲುಗಡೆಗೆ, ಬೆಳಕಿಗೆ ದೀಪ ಅಳವಡಿಕೆ, ಕುಡಿಯುವ ನೀರು, ಶೌಚಾಲಯ ಸಹಿತ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಬೇಕಿದೆ. ರಸ್ತೆಯೂ ಹದಗೆಟ್ಟಿದೆ
ಕೋಡಿ ಬೀಚ್‌ಗೆ, ಸೀವಾಕ್ ಕಡೆಗೆ, ಲೈಟ್‌ಹೌಸ್ ಕಡೆಗೆ ಬರುವ ರಸ್ತೆಯೂ ಹಾಳಾಗಿದೆ. ಅಳಿವೆ ಕಾಮಗಾರಿಯಿಂದ ಹಾಳಾಗಿದೆ ಎನ್ನಲಾಗುತ್ತಿದೆ. ಆದರೆ ಎರಡು ಮೂರು ವರ್ಷಗಳಿಂದ ಇದೇ ಸ್ಥಿತಿಯಲ್ಲಿ ಇದ್ದಂತಿದೆ. ವಾಹನಗಳ ಓಡಾಟವೂ ಕಷ್ಟವಾಗಿದೆ. ಕೋಡಿ ಪ್ರದೇಶ ತೀರಾ ಸಣ್ಣದೇನಲ್ಲ. ಈ ಭಾಗದಲ್ಲಿ ನೂರಾರು ಮನೆಗಳಿದ್ದು ಅವುಗಳ ಸಂಪರ್ಕಕ್ಕೂ ಇದೇ ರಸ್ತೆ ಅನಿವಾರ್ಯ. ದೇವಾಲಯ, ಆಸ್ಪತ್ರೆ, ಶಾಲಾ ಕಾಲೇಜುಗಳಿಗೂ ಕೋಡಿ ರಸ್ತೆ ಬೇಕೇ ಬೇಕು. ಕುಡಿಯುವ ನೀರಿನ ಕಾಮಗಾರಿಗಾಗಿ ಪೈಪ್‌ಲೈನ್ ಹಾಕಲಾಗುತ್ತಿದ್ದು ಇದರಿಂದ ರಸ್ತೆ ಹಾಳಾಗಿದೆ ಎನ್ನಲಾಗಿದೆ. ಆದರೆ ಕುಡಿಯುವ ನೀರಿನ ಕಾಮಗಾರಿಗಾಗಿ ಅಗೆದಲ್ಲಿ ದುರಸ್ತಿ ಮಾಡಲಾಗಿದೆ ಎಂದು ಪುರಸಭೆಯ ಅಧಿಕಾರಿಗಳು ಹೇಳುತ್ತಾರೆ.
Related Articles
ಕೋಡಿ ರಸ್ತೆ ಹದಗೆಟ್ಟದ್ದು ಗಮನಿಸಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ದುರಸ್ತಿಗೆ ಪುರಸಭೆಗೆ ಸೂಚನೆ ನೀಡಿದ್ದಾರೆ. ಕೋಡಿಯಿಂದ ಹಂಗಾರಕಟ್ಟೆವರೆಗೆ ಸಂಪರ್ಕ ಸಾಧಿಸುವ ಕಡಲತೀರದ ರಸ್ತೆ ದುರಸ್ತಿಗೆ ಅವರು ಈಗಾಗಲೇ ಅನುದಾನ ಮೀಸಲಿಟ್ಟಿದ್ದು ಪುರಸಭೆ ವ್ಯಾಪ್ತಿಯ ರಸ್ತೆಯನ್ನು ದುರಸ್ತಿಗೊಳಿಸುವಂತೆ ಸೂಚಿಸಿದ್ದಾರೆ. ಅದರಂತೆ ಕುಡಿಯುವ ನೀರಿನ ಕಾಮಗಾರಿಯಲ್ಲಿ ಹಾಳಾದ ರಸ್ತೆ ದುರಸ್ತಿಗೆ ಇರುವ ಅನುದಾನ ಬಳಸಿ ರಸ್ತೆ ಸರಿಪಡಿಸಲು ಪುರಸಭೆ ಆಡಳಿತ ಮುಂದಾಗಿದೆ.
Advertisement
ಶೀಘ್ರ ದುರಸ್ತಿಶಾಸಕರ ಸೂಚನೆ ಮೇರೆಗೆ ನಾದುರಸ್ತಿಯಲ್ಲಿರುವ ಕೋಡಿ ರಸ್ತೆಯನ್ನು ಸುಮಾರು 1.5 ಕಿ.ಮೀ.ವರೆಗೆ ಶೀಘ್ರ ದುರಸ್ತಿಗೊಳಿಸಲಾಗುವುದು. ಸಂಬಂಧಪಟ್ಟವರಿಗೆ ಈ ಕುರಿತು ಸೂಚನೆ ನೀಡಲಾಗಿದೆ.
-ಗೋಪಾಲಕೃಷ್ಣ ಶೆಟ್ಟಿ,
ಮುಖ್ಯಾಧಿಕಾರಿ, ಪುರಸಭೆ