Advertisement

ಸ್ವಚ್ಛತೆಯ ಸಂದೇಶ ಸಾರಿದ ಕೋಡಿ ಕಡಲೋತ್ಸವ

09:41 PM Jan 26, 2020 | Sriram |

ಕುಂದಾಪುರ: ಕಸದಿಂದಲೇ ತಯಾರಿಸಿದ ಬಗೆ – ಬಗೆಯ ಉತ್ಪನ್ನಗಳು, ರುಚಿ – ರುಚಿಯಾದ ವಿವಿಧ ಬಗೆಯ ತಿಂಡಿ -ತಿನಿಸುಗಳು, ಬಂದಂತಹ ಪ್ರವಾಸಿಗರನ್ನು, ವಿಹಾರಿಗಳನ್ನು ಆಕರ್ಷಿಸುವ ಮರಳು ಶಿಲ್ಪ, ಪರಿಸರ ಸ್ನೇಹಿ ವಸ್ತುಗಳಿಂದಲೇ ತಯಾರಾದ ಕರ ಕುಶಲ ವಸ್ತುಗಳು, ಪರಿಸರದ ಬಗೆಗಿನ ಜಾಗೃತಿ ಮೂಡಿಸುವ ಪುಟಾಣಿಗಳ ಸಾಂಸ್ಕೃತಿಕ ವೈವಿಧ್ಯ.

Advertisement

ಇದು ಕೋಡಿಯ ಕಡಲ ಕಿನಾರೆಯಲ್ಲಿ ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ತಂಡದ 50 ನೇ ಸ್ವಚ್ಛತಾ ಆಂದೋಲನದ ಪ್ರಯುಕ್ತ ಎರಡು ದಿನಗಳ ಕಾಲ ನಡೆದ “ನಿರ್ವಾಣ -2020′ ಕಡಲ ಹಬ್ಬದ ಝಲಕ್‌. ರೀಫ್ವಾಚ್‌, ಎಫ್. ಎಸ್‌.ಎಲ್‌. ಇಂಡಿಯಾ, ಅಮಲಾ ಭಾರತ ಅಭಿಯಾನ, ಎನ್‌. ಎಚ್‌. 66, ಗೀತಾನಂದ ಫೌಂಡೇಶನ್‌, ಮಾತಾ ಅಮೃತಾನಂದಮಯಿ ಸಂಸ್ಥೆ, ಮೊದಲಾದ ಸಂಘಟನೆಗಳು ಈ ಬೀಚ್‌ ಫೆಸ್ಟ್‌ಗೆ ಸಹಯೋಗ ವಹಿಸಿಕೊಂಡಿತ್ತು.

ಏನೆಲ್ಲ ಇತ್ತು?
ವಿವಿಧ ವಿನ್ಯಾಸದ ಹಾಳೆ ತಟ್ಟೆಗಳು, ಹೂಕುಂಡ, ಮನೆಯೊಳಗಿನ ಅಲಂಕಾರಿಕೆ ವಸ್ತುಗಳು, ಬೆತ್ತ- ಬಿದಿರಿನಿಂದ ತಯಾರಿಸಿದ ವೈವಿಧ್ಯಮಯ ಕರ ಕುಶಲ ಸಾಮಗ್ರಿಗಳು, ಖಾದಿ ಬಟ್ಟೆಗಳು, ಪರಿಸರ ಸ್ನೇಹಿ ಮೊಬೈಲ್‌ ಕವರ್‌, ಬ್ಯಾಗ್‌ಗಳು, ಬಿಸಾಡಿದಂತಹ ಚಪ್ಪಲಿಗಳಿಂದಲೇ ನಿರ್ಮಿಸಿದ ಸೆಲ್ಫಿ ಪಾಯಿಂಟ್‌, ತ್ಯಾಜ್ಯ ರಾಶಿಯಲ್ಲಿ ಸಿಕ್ಕ ಬಾಟಲಿಗಳಿಂದಲೇ ನಿರ್ಮಾಣವಾದ ವಿಭಿನ್ನ ಕಲಾಕೃತಿಗಳು, ಎಫ್‌ಎಸ್‌ಎಲ್‌ ನೇತೃತ್ವದಲ್ಲಿ ರಚನೆಯಾದ ಮರಳು ಶಿಲ್ಪ, ಬಂದವರು ಬಾಯಿ ಚಪ್ಪರಿಸುವಂತೆ ಮಾಡಿದ ಬಿರಿಯಾನಿ, ಮೀನು ಫ್ತೈ, ವಿದೇಶಿ ಚರುಮುರಿ ಎಲ್ಲರ ಗಮನ ಸೆಳೆಯಿತು.

ಪ್ಲಾಸ್ಟಿಕ್‌ ರಹಿತ ಉತ್ಸವ
ಪ್ಲಾಸ್ಟಿಕ್‌ ಬಳಸದೇ ಈ ಉತ್ಸವವನ್ನು ಆಯೋಜಿಸಲಾಗಿತ್ತು. ಉತ್ಸವವನ್ನು ಸ್ವಾಗತ ಕೋರಿ ಹಾಕಲಾದ ಫಲಕಗಳು ಕೂಡ ಕಾಗದದಿಂದ ನಿರ್ಮಿಸಿದ್ದಾಗಿತ್ತು. ಕೋಡಿಯ ಕಡಲ ಕಿನಾರೆಯಲ್ಲಿ ರವಿವಾರ ಸಂಪನ್ನಗೊಂಡ ಕಡಲೋತ್ಸವವು ಸ್ವಚ್ಛತೆಯೊಂದಿಗೆ, ಪ್ಲಾಸ್ಟಿಕ್‌ ಬಳಸದೆಯೋ ಅತ್ಯುತ್ತಮವಾಗಿ, ಆಕರ್ಷಣೀಯವಾಗಿ ಕಾರ್ಯಕ್ರಮವನ್ನು ಸಂಘಟಿಸಬಹುದು ಎನ್ನುವ ಸಂದೇಶ ಸಾರುವಲ್ಲಿ ಯಶಸ್ವಿಯಾಗಿದೆ.

ಸಾವಿರಾರು ಮಂದಿ ಭಾಗಿ
ಎರಡು ದಿನಗಳ ಕಾಲ ನಡೆದ ಈ ಕಡಲೋತ್ಸವದಲ್ಲಿ ಶನಿವಾರ ಸಂಜೆಯಿಂದ ರಾತ್ರಿಯವರೆಗೆ ಸುಮಾರು 5 ಸಾವಿರಕ್ಕೂ ಮಿಕ್ಕಿ ಮಂದಿ ಇಲ್ಲಿಗೆ ಭೇಟಿ ನೀಡಿ, ಇಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮ, ಪರಿಸರ ಸ್ನೇಹಿ ಮಳಿಗೆಗಳನ್ನು ವೀಕ್ಷಿಸಿ ಖುಷಿ ಪಟ್ಟರು. ಯುವಕರ ಶ್ರಮದಿಂದ ಇದು ಯಶಸ್ವಿಯಾಗಿದೆ. ಇಲ್ಲಿ ಆಯೋಜಿಸಿದ ಸಾಂಸ್ಕೃತಿಕ, ಅರಿವು ಮೂಡಿಸುವ ಮಾಹಿತಿ ಕಾರ್ಯಕ್ರಮ ಎಲ್ಲವೂ ಜನಸ್ನೇಹಿಯಾಗಿದ್ದು, ಆ ಬಗ್ಗೆ ಖುಷಿ ಕೊಟ್ಟಿದೆ ಎನ್ನುವುದಾಗಿ ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್‌ನ ಡಾ| ರಶ್ಮಿ ಹೇಳುತ್ತಾರೆ.

Advertisement

ಉದ್ದೇಶ ಈಡೇರುವ ನಿರೀಕ್ಷೆ
ಈ ಉತ್ಸವದ ಮೂಲ ಉದ್ದೇಶ ಸ್ವಚ್ಛತೆ ಹಾಗೂ ಪ್ಲಾಸ್ಟಿಕ್‌ ಬಳಕೆ ಬಗ್ಗೆ ಅರಿವು ಮೂಡಿಸುವುದು. ಇಲ್ಲಿಗೆ ಆಗಮಿಸಿರುವ ಪ್ರತಿಯೊಬ್ಬರಿಗೂ ಆ ಬಗ್ಗೆ ಬೇರೆ ಬೇರೆ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗಿದೆ. ನಮ್ಮ ಉದ್ದೇಶ ಈಡೇರುವ ನಿರೀಕ್ಷೆಯಿದೆ. ಒಟ್ಟಿನಲ್ಲಿ ಈ ಕಡಲೋತ್ಸವ ತೃಪ್ತಿ ಕೊಟ್ಟಿದೆ.
-ಕಲ್ಪನಾ ಭಾಸ್ಕರ್‌,
ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್

ಯುವಶಕ್ತಿ ಸದ್ಬಳಕೆ
ಸ್ವಚ್ಛತೆ ಹಾಗೂ ಪರಿಸರ ಜಾಗೃತಿಯ ಸಂದೇಶದೊಂದಿಗೆ ಈ ಕ್ಲೀನ್‌ ಕುಂದಾಪುರ ತಂಡವು ನಿಜವಾದ ಅರ್ಥದಲ್ಲಿ ಯುವಶಕ್ತಿಯನ್ನು ಸದ್ಭಳಕೆ ಮಾಡುತ್ತಿದೆ. ಇದೊಂದು ಮಾದರಿಯಾದ ಕಾರ್ಯಕ್ರಮ. ಈ ಉತ್ಸವದಲ್ಲಿ ಪಾಲ್ಗೊಂಡಿದ್ದಕ್ಕೆ ಖುಷಿ ಕೊಟ್ಟಿದೆ. ಇಲ್ಲಿನ ಎಲ್ಲ ಮಳಿಗೆಗಳು, ಅಲಂಕಾರ ಎಲ್ಲವೂ ಆಕರ್ಷಣೀಯವಾಗಿದೆ.
-ವಿವೇಕ್‌ ನಾಯಕ್‌ ಕುಂದಾಪುರ, ನಾಗರಿಕರು

Advertisement

Udayavani is now on Telegram. Click here to join our channel and stay updated with the latest news.

Next