Advertisement

ಕೋಡಿ ಮೀನುಗಾರಿಕಾ ಜೆಟ್ಟಿ 100 ಮೀಟರ್‌ ವಿಸ್ತರಣೆಗೆ ಬೇಡಿಕೆ

10:20 PM Dec 30, 2019 | Team Udayavani |

ಕುಂದಾಪುರ: ಕೋಡಿಯಲ್ಲಿರುವ ಮೀನುಗಾರಿಕಾ ಜೆಟ್ಟಿ ಈಗ ಕೇವಲ 60 ಮೀಟರ್‌ ಅಷ್ಟೇ ಇದ್ದು, ಇದರಲ್ಲಿ ಹೆಚ್ಚಿನ ಬೋಟ್‌ಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಇದನ್ನು ಇನ್ನೂ 100 ಮೀಟರ್‌ ವಿಸ್ತರಿಸಿದರೆ ಅನುಕೂಲವಾಗಲಿದ್ದು, ಜೆಟ್ಟಿ ವಿಸ್ತರಣೆಗೆ ಮೀನುಗಾರರು ಬೇಡಿಕೆಯಿಟ್ಟಿದ್ದಾರೆ.

Advertisement

ಪಂಚಗಂಗಾವಳಿ ನದಿ ಸೇರುವ ಸಂಗಮ ಸ್ಥಳದ ಸಮೀಪ ಕೋಡಿ ಭಾಗದ ಮೀನುಗಾರರಿಗೆ ಅನುಕೂಲವಾಗುವಂತೆ ಬೋಟುಗಳ ಇಳಿದಾಣಕ್ಕೆ 5 ವರ್ಷಗಳ ಹಿಂದೆ ಕೋಡಿಯಲ್ಲಿ ಜೆಟ್ಟಿ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ 4 ಕೋ.ರೂ. ಅನುದಾನ ಮಂಜೂರಾಗಿತ್ತು. 22 ಅಂಡರ್‌ಗ್ರೌಂಡ್‌ ಪಿಲ್ಲರ್‌ಗಳನ್ನು ಹಾಕಿ ಇಲ್ಲಿ 60 ಮೀಟರ್‌ ಉದ್ದದ ಜೆಟ್ಟಿಯನ್ನು ನಿರ್ಮಾಣ ಮಾಡಲಾಗಿದೆ.

ಶಾಸಕರ ಪ್ರಯತ್ನ
ಕೋಡಿ, ಬೀಜಾಡಿ, ಅಳಿವೆ ಬಾಗಿಲು ಪ್ರದೇಶದ ಮೀನುಗಾರರ ಬಹು ವರ್ಷಗಳ ಬೇಡಿಕೆ ಇದಾಗಿದ್ದು, ಇಲ್ಲಿನ ಮೀನುಗಾರರಿಗೆ ಬೋಟು ಹಾಗೂ ದೋಣಿಗಳನ್ನು ನಿಲ್ಲಿಸಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಗಂಗೊಳ್ಳಿಯಲ್ಲಿ ಇಟ್ಟು ಬರಬೇಕಿತ್ತು. ಅಲ್ಲಿ ಬೋಟು ಅಥವಾ ದೋಣಿಗಳನ್ನು ಇಟ್ಟು, ಈಚೆ ದಡಕ್ಕೆ ಕಿರು ದೋಣಿ ಮೂಲಕ ಸೇರಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಕೋಡಿಯಲ್ಲಿ ಜೆಟ್ಟಿಯೊಂದು ಬೇಕು ಎಂದು ಮೀನುಗಾರರು ಮನವಿ ಸಲ್ಲಿಸಿದ್ದು, ಇದಕ್ಕೆ ಸ್ಪಂದಿಸಿದ ಶಾಸಕ ಹಾಲಾಡಿ ಶ್ರೀನಿವಾರ ಶೆಟ್ಟಿಯವರು ಜೆಟ್ಟಿಗೆ ಅನುದಾನ ಕೊಡಿಸುವಲ್ಲಿ ನೆರವಾಗಿದ್ದರು.

ಈಗೇನು ಸಮಸ್ಯೆ?
ಆದರೆ ಈಗಿರುವ ಜೆಟ್ಟಿ ಬರೀ 60 ಮೀ. ಅಷ್ಟೆ ಇರುವುದರಿಂದ ಇಲ್ಲಿ ಹೆಚ್ಚಿನ ಬೋಟುಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಇದಲ್ಲದೆ ಇಲ್ಲಿ ನೀರಿನ ಅಲೆಗಳ ಅಬ್ಬರ ಹೆಚ್ಚಿರುವ ಸಮಯದಲ್ಲಿ ಈ ಕಿರು ಜೆಟ್ಟಿಯಲ್ಲಿ ಬೋಟುಗಳನ್ನು ನಿಲ್ಲಿಸಲು ಕಷ್ಟವಾಗುತ್ತದೆ. ಇದಕ್ಕೆ ಸ್ವಲ್ಪ ಈಚೆಗೆ ಜಾಗ ತೆಗೆದುಕೊಂಡು, ಜೆಟ್ಟಿಯನ್ನು ಇನ್ನೂ 100 ಮೀ. ವಿಸ್ತರಿಸುವ ಜತೆಗೆ “ಯು’ ಮಾದರಿಯಲ್ಲಿ ಜೆಟ್ಟಿಯನ್ನು ನಿರ್ಮಾಣ ಮಾಡಿದರೆ ಹೆಚ್ಚಿನ ಬೋಟುಗಳನ್ನು ನಿಲ್ಲಿಸಬಹುದು, ಜತೆಗೆ ನೀರಿನ ಅಬ್ಬರಕ್ಕೆ ತಡೆ ಸ್ವಲ್ಪ ಮಟ್ಟಿಗೆ ತಡೆ ಹಾಕಿದಂತಾಗಲಿದೆ ಎನ್ನುವುದು ಮೀನುಗಾರರ ಅಭಿಪ್ರಾಯ.

ವಿಸ್ತರಿಸಿದರೆ ಅನುಕೂಲ
ಕೋಡಿಯ ಜೆಟ್ಟಿಯನ್ನು ವಿಸ್ತರಿಸಿದರೆ ಈ ಭಾಗದ ಮೀನುಗಾರರಿಗೆ ಬಹಳಷ್ಟು ಅನುಕೂಲವಾಗಲಿದೆ. ಈಗ ಇಲ್ಲಿ ಜಾಗದ ಸಮಸ್ಯೆಯಿಂದ ಗಂಗೊಳ್ಳಿಯಲ್ಲಿ ಬೋಟ್‌ಗಳನ್ನು ಇಟ್ಟು, ದೋಣಿ ಮೂಲಕ ವಾಪಾಸು ಬರುತ್ತಿದ್ದೇವೆ. ಇದರ ಜತೆಗೆ ಬ್ರೇಕ್‌ವಾಟರ್‌ ನಿರ್ಮಾಣದ ವೇಳೆ ಅಳಿವೆ ಬಾಗಿಲಿನಿಂದ ಮೇಲೆತ್ತಲಾದ ಹೂಳನ್ನು ಅಲ್ಲಿಯೇ ರಾಶಿ ಹಾಕಿದ್ದರಿಂದ ಈಗ ಕೋಡಿ – ಗಂಗೊಳ್ಳಿ ಮಧ್ಯ ಭಾಗದಲ್ಲಿ ಹೂಳು ತುಂಬಿಕೊಂಡಿದ್ದು, ಇದರಿಂದ ಬೋಟು, ದೋಣಿಗಳ ಸಂಚಾರಕ್ಕೆ ತುಂಬಾನೇ ತೊಂದರೆಯಾಗುತ್ತಿದೆ. ಡ್ರೆಜ್ಜಿಂಗ್‌ಗೆ ಆದಷ್ಟು ಶೀಘ್ರ ಕ್ರಮಕೈಗೊಂಡರೆ ಅನುಕೂಲವಾಗಲಿದೆ.
– ಗೋಪಾಲ್‌ ಖಾರ್ವಿ, ಮೀನುಗಾರರು

Advertisement

ಪ್ರಸ್ತಾವನೆ ಕಳುಹಿಸಲಾಗಿದೆ
ಈಗಾಗಲೇ ಸಚಿವರೇ ಸೂಚಿಸಿದಂತೆ ಜೆಟ್ಟಿ ವಿಸ್ತರಣೆಗೆ ಯೋಜನೆ ರೂಪಿಸಿ, ಕರಡು ನಕಾಶೆ ತಯಾರಿಸಿ ಸುಮಾರು 4.5 ಕೋ.ರೂ. ವೆಚ್ಚದ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಲಾಗಿದೆ.
– ಮಂಚೇಗೌಡ, ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಬಂದರು ಮತ್ತು ಮೀನುಗಾರಿಕೆ ಇಲಾಖೆ

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next