Advertisement

ಕೊಡಿ ಬೀಚ್ ಅಭಿವೃದ್ಧಿ ನೆನೆಗುದಿಗೆ

12:02 PM Jul 02, 2019 | sudhir |

ಕುಂದಾಪುರ: ಇಲ್ಲಿನ ಕೋಡಿ ಬೀಚ್ ಅಭಿವೃದ್ಧಿಗೆ ಪುರಸಭೆ ಒಂದೆರಡು ಹೆಜ್ಜೆ ಮುಂದೆ ಇಟ್ಟಿತ್ತಾದರೂ ಚುನಾವಣೆ ನೀತಿ ಸಂಹಿತೆ, ಜಿಲ್ಲಾಧಿಕಾರಿ ವರ್ಗಾವಣೆ ಎಂಬ ಕಾರಣಗಳಿಂದ ನನೆಗುದಿಗೆ ಬಿದ್ದಿದೆ. ಭೇಟಿ ಕೊಡುವ ನಾಗರಿಕರ ಅಸಡ್ಡೆಗೆ ಎಲ್ಲೆಲ್ಲೂ ಕಸ ತುಂಬಿದ್ದು ಸ್ವಚ್ಛತೆಯ ಸ್ವಯಂ ಸೇವಕರೇ ಹೈರಾಣಾಗುತ್ತಿದ್ದಾರೆ.

Advertisement

ಹೆಗ್ಗಳಿಕೆ

ಕೋಡಿಯಲ್ಲಿ ಸೀವಾಕ್‌ ನಿರ್ಮಾಣ ವಾಗಿದೆ. ಸಂಜೆ ವೇಳೆ ನೂರಾರು ಮಂದಿ ಇಲ್ಲಿಗೆ ಆಗಮಿಸಿ ಸಮುದ್ರ ತೀರದ ಸಂಜೆಯ ಸೌಂದರ್ಯವನ್ನು ಆಸ್ವಾದಿಸುತ್ತಾರೆ. ಕೇವಲ ಕುಂದಾಪುರ ನಗರವಾಸಿಗಳಷ್ಟೇ ಅಲ್ಲ ಬೇರೆ ಬೇರೆ ಉರಿನ ಜನ ಕೂಡಾ ಆಗಮಿಸುತ್ತಿದ್ದಾರೆ. ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿದ್ದೇ ಆದಲ್ಲಿ ಅತಿ ಉದ್ದ ವ್ಯಾಪ್ತಿ ಹೊಂದಿದ ಬೀಚ್ ಎಂಬ ಹೆಗ್ಗಳಿಕೆಗೆ ಕೋಡಿ ಬೀಚ್ ಪಾತ್ರವಾಗಲಿದೆ. ಏಕೆಂದರೆ ಸರಿಸುಮಾರು 3.5 ಕಿಮೀ. ದೂರದಲ್ಲಿ ಬೀಚ್ ವ್ಯಾಪಿಸಿಕೊಂಡಿದೆ. ಆದ್ದರಿಂದ ಯಾವುದೇ ಪ್ರದೇಶದಲ್ಲೂ ಸಮುದ್ರವಿಹಾರ ನಡೆಸಬಹುದಾಗಿದೆ.

ಊರವರ ಸಾಥ್‌

ಕೋಡಿ ಬೀಚ್ಗೆ ಪ್ರವಾಸಿಗರು ಆಗಮಿಸುತ್ತಿರುವುದರಿಂದ ಇದೊಂದು ಪ್ರವಾಸಿ ತಾಣದ ಜತೆಗೆ ಉದ್ಯೋಗ ತಾಣವೂ ಆಗುವುದರಲ್ಲಿ ಸಂಶಯವೇ ಇಲ್ಲ. ಇದಕ್ಕಾಗಿ ಸ್ಥಳೀಯರು ತುಸು ಆಸಕ್ತಿ ವಹಿಸಿದ್ದಾರೆ. ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಜಟ್ಟಿಗೇಶ್ವರ ಫ್ರೆಂಡ್ಸ್‌ ತಂಡದವರು 3 ಲಕ್ಷ ರೂ. ವ್ಯಯಿಸಿ ಪಾರ್ಕ್‌ ಒಂದನ್ನು ರಚಿಸಿದ್ದಾರೆ. ಇನ್ನೊಂದು ಪಾರ್ಕ್‌ ರಚನೆಗೆ ಅಣಿಯಾಗುತ್ತಿದೆ.

Advertisement

ಸ್ವಚ್ಛ ಕುಂದಾಪುರ

2015ರಲ್ಲಿ ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ಆರಂಭವಾದದ್ದು ಕೆಲವು ಯುವಕರ ಕನಸಾಗಿ. ಇದಕ್ಕೆ ಕುಂದಾಪುರದ ಹಲವು ಮಿಡಿಯುವ ಹೃದಯಗಳು ಜತೆಗೂಡಿದವು. ಭರತ್‌ ಬಂಗೇರ ಅವರ ನೇತೃತ್ವದಲ್ಲಿ ಆರಂಭವಾದ ಅಭಿಯಾನದಲ್ಲಿ ಹಲವರು ಸೇರಿ, ಅಮಲಾ ಸ್ವಚ್ಛಭಾರತ ಅಭಿಯಾನದವರೂ ಜತೆಯಾದರು. ಒಂದು ಅಭಿಯಾನದಂತೆ ಶುರುವಾಗಿ ಎಫ್ಎಸ್‌ಎಲ್ನ ಸ್ವಯಂ ಸೇವಕರು, ಹಲವಾರು ಕಾಲೇಜು ವಿದ್ಯಾರ್ಥಿಗಳು, ಬೇರೆ ಬೇರೆ ಸಂಘಟನೆಯ ರೂವಾರಿಗಳು, ಸಮಾನ ಮನಸ್ಕ ನಾಗರಿಕರು ಸೇರಿದರು. ಕುಂದಾಪುರದ ಹಲವು ಕಡೆ, ಸಮುದ್ರ ಕಿನಾರೆಗಳೇ ಮುಖ್ಯವಾಗಿಟ್ಟುಕೊಂಡು ಮಾಡಿದ ಹಲವು ವಾರಗಳ ಈ ಅಭಿಯಾನಕ್ಕೆ ಸಾಥ್‌ ಕೊಟ್ಟವರು ಕುಂದಾಪುರ ಪುರಸಭೆ, ಹಲವು ಪಂಚಾಯñಗಳು. ಇವರು 2018ರ ನವೆಂಬರ್‌ನಿಂದ ಪ್ರತಿವಾರ ಕಡಲತಡಿಯನ್ನು ಸ್ವಚ್ಛಗೊಳಿಸುತ್ತಿದ್ದಾರೆ.

8 ಕ್ವಿಂಟಾಲ್ ತ್ಯಾಜ್ಯ

7 ಕಿ.ಮೀ. ವ್ಯಾಪ್ತಿಯ ಸ್ವಚ್ಛತೆ ಮಾಡ ಬೇಕಿದ್ದು ಪ್ರತಿವಾರ 100 ಮೀ.ನಷ್ಟು ಮಾತ್ರ ಸ್ವಚ್ಛಗೊಳಿಸಲು ಸಾಧ್ಯವಾಗುತ್ತಿದೆ. ಅಷ್ಟರಲ್ಲಿ ದೊರೆಯುವ ತ್ಯಾಜ್ಯದ ಪ್ರಮಾಣವೇ 800 ಕೆಜಿ.ಯಷ್ಟು. ಪ್ಲಾಸ್ಟಿಕ್‌ ಕಸ, ಬಾಟಲಿಗಳನ್ನ ಮಾತ್ರ ಸ್ವಯಂಸೇವಕರು ಎತ್ತುತ್ತಾರೆ. ನೂರಿನ್ನೂರು ಮೀ.ನಲ್ಲಿ 15-20 ಗೋಣಿ ಚೀಲದಷ್ಟು ಜಮೆಯಾಗುತ್ತಿದ್ದ ಮದ್ಯದ ಬಾಟಲಿಗಳ ರಾಶಿ, ಪ್ಲಾಸ್ಟಿಕ್‌ ಗ್ಲಾಸುಗಳನ್ನ ನೋಡಿದರೆ, ನಮ್ಮ ಸಮುದ್ರ ಕಿನಾರೆಯಲ್ಲಿ ಏನು ನಡೆಯುತ್ತಿದೆ ಅನ್ನೋ ಆತಂಕವಿದೆ ಎನ್ನುತ್ತಾರೆ ಸ್ವಯಂ ಸೇವಕಿ ಡಾ| ರಶ್ಮಿ ಕುಂದಾಪುರ.

ಸೌಕರ್ಯವಿಲ್ಲ

ಪ್ರವಾಸಿಗರಿಗೆ ಮೂಲ ಸೌಕರ್ಯಗಳನ್ನು ತುರ್ತಾಗಿ ಕಲ್ಪಿಸಬೇಕಾದ ಅಗತ್ಯವಿದೆ. ವಿಶ್ರಾಂತಿಗೆ ಕುಳಿತುಕೊಳ್ಳುವ ಬೆಂಚ್‌ಗಳ ವ್ಯವಸ್ಥೆ, ಬಟ್ಟೆ ಬದಲಾಯಿಸಲು, ಸಮುದ್ರ ಸ್ನಾನದ ಬಳಿಕ ಸ್ನಾನದ ವ್ಯವಸ್ಥೆ ಮಾಡಲು, ವಾಹನ ನಿಲುಗಡೆಗೆ, ಬೆಳಕಿಗೆ ದೀಪ ಅಳವಡಿಕೆ, ಕುಡಿಯುವ ನೀರು, ಶೌಚಾಲಯ ಸಹಿತ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಬೇಕಿದೆ.

ಪುರಸಭೆಯಿಂದ ಕ್ರಮ

ಪ್ರವಾಸೋದ್ಯಮ ಇಲಾಖೆ ಜತೆಗೆ ಪುರಸಭೆ ಮುತುವರ್ಜಿ ವಹಿಸಿದ್ದು ಇಲ್ಲೊಂದು ಪ್ರವಾಸೋದ್ಯಮ ತಾಣದ ಸೃಷ್ಟಿಗೆ ಪ್ರಯತ್ನಿಸಿತ್ತು. ಬ್ರೇಕ್‌ವಾಟರ್‌ ಕಾಮಗಾರಿಯನ್ನೇ ಸೀವಾಕ್‌ ಮಾದರಿಯಾಗಿ ಮಾಡಲು ಪ್ರವಾಸೋ ದ್ಯಮ ಇಲಾಖೆ ಮುಂದಾಗಿದ್ದರೆ ಇಲಾಖೆಯಿಂದ ಇನ್ನಷ್ಟು ಸೌಕರ್ಯ, ಅನುದಾನ ಇಲ್ಲಿಗೆ ತಂದರೆ ಪುರಸಭೆ ವ್ಯಾಪ್ತಿಯ ಆದಾಯ ವೃದ್ಧಿ ಮಾಡಿಕೊಳ್ಳಲು ನೆರವಾಗಲಿದೆ ಎಂದು ಪುರಸಭೆ ಚಿಂತನೆ ನಡೆಸಿತ್ತು. ಆದರೆ ಯಾವುದೂ ಕೈಗೂಡಿದಂತಿಲ್ಲ.

ಕ್ರಮ ಕೈಗೊಳ್ಳಲಾಗುವುದು

ಸಿದ್ಧಪಡಿಸಿದ್ದ ನೀಲನಕ್ಷೆಯ ಪ್ರಕಾರ ಆಡಳಿತಾತ್ಮಕ ಕಾರಣಗಳಿಂದ ಅಭಿವೃದ್ಧಿ ನಡೆದಿಲ್ಲ. ಶೀಘ್ರದಲ್ಲೇ ಇಲ್ಲಿ ಶೌಚಾಲಯ ರಚನೆಗೆ ಪುರಸಭೆ ವತಿಯಿಂದ ಕ್ರಮ ಕೈಗೊಳ್ಳಲಾಗುವುದು. ಕಸದ ಡಬ್ಬಗಳನ್ನು ಇಟ್ಟರೂ ಅವು ದುರ್ವಿನಿಯೋಗ ಆಗುವ ಸಾಧ್ಯತೆಯಿದೆ. ಆದ್ದರಿಂದ ಅವುಗಳ ನಿರ್ವಹಣೆ ಜವಾಬ್ದಾರಿ ಸ್ಥಳೀಯರಿಗೇ ಬರುವಂತೆ, ಒಂದಷ್ಟು ಮಂದಿಗೆ ಉದ್ಯೋಗವೂ ದೊರೆಯುವಂತೆ ಮಾಡುವ ಯೋಚನೆಯಿದೆ. ಇದಕ್ಕಾಗಿ ದಾನಿಗಳು ಕೂಡಾ ಮುಂದೆ ಬಂದಿದ್ದಾರೆ. ಅದನ್ನು ಅನುಷ್ಠಾನ ಮಾಡಲಾಗುವುದು. -ಗೋಪಾಲಕೃಷ್ಣ ಶೆಟ್ಟಿ , ಮುಖ್ಯಾಧಿಕಾರಿ, ಪುರಸಭೆ, ಕುಂದಾಪುರ
– ಲಕ್ಷ್ಮೀ ಮಚ್ಚಿನ
Advertisement

Udayavani is now on Telegram. Click here to join our channel and stay updated with the latest news.

Next