ಕೋಲಾರ: ಕೆ.ಸಿ. ವ್ಯಾಲಿ ನೀರನ್ನು ಬಂಗಾರಪೇಟೆ ತಾಲೂಕಿನ ಕೆರೆಗಳಿಗೆ ಹರಿಸಲು ಕೋಲಾರದ ಕೆರೆಗಳ ಕೋಡಿ ಹಾಳು ಮಾಡಲು ಮುಂದಾದ ಅಧಿಕಾರಿಗಳಿಗೆ ತಡೆಯೊಡ್ಡಿದ ರೈತರು ಅವರನ್ನು ಅಲ್ಲಿಂದ ಹೊರಗಟ್ಟಿದ ಘಟನೆ ತಾಲೂಕಿನ ಮುದುವತ್ತಿಯಲ್ಲಿ ನಡೆದಿದೆ. ಮುದುವತ್ತಿ ಕೆರೆಯ ಕೋಡಿಯನ್ನು ಹೊಡೆದು ನೀರು ಹರಿಸಲು ಕೆ.ಸಿ. ವ್ಯಾಲಿ ಅಧಿಕಾರಿಗಳು ಮುಂದಾದಾಗ ಈ ಭಾಗದ ರೈತರು ವಿರೋಧ ವ್ಯಕ್ತಪಡಿಸಿ ಅಧಿಕಾರಿಗಳನ್ನು ವಾಪಸ್ ಕಳುಹಿಸಿದರು.
ಕೋಡಿ ನಾಶ ಯಾವ ನ್ಯಾಯ: ಈ ಸಂಬಂಧ ಹೇಳಿಕೆ ನೀಡಿರುವ ಜೆಡಿಎಸ್ ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಎಂ.ಮುನೇಗೌಡ, ಕೆ.ಸಿ. ವ್ಯಾಲಿ ನೀರು ಜಿಲ್ಲೆಯ ಎಲ್ಲಾ ಕೆರೆಗಳಿಗೆ ಹರಿಸುವ ಕಾರ್ಯ ಶ್ಲಾಘನೀಯವಾದರೂ, ಕೆರೆ ಕೋಡಿಯನ್ನೇ ನಾಶಪಡಿಸಿ ಮುಂದಿನ ಕೆರೆಗೆ ಹರಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
ಹೆಚ್ಚು ನೀರು ಹರಿಸಿ: ನಿಜಕ್ಕೂ ಇವರಿಗೆ ಸದುದ್ದೇಶವಿದ್ದರೆ ಕೆ.ಸಿ. ವ್ಯಾಲಿಯಲ್ಲಿ 400 ಎಂಎಲ್‌ಡಿ ಸಾಮರ್ಥ್ಯವಿದ್ದರೂ ಕೇವಲ 200 ಎಂಎಲ್‌ಡಿ ನೀರು ಹರಿಯುತ್ತಿದೆ. ಇದನ್ನು ಹೆಚ್ಚಿಸುವುದನ್ನು ಬಿಟ್ಟು ಕೆರೆಗಳು ತುಂಬುವ ಮುನ್ನವೇ ಕೆರೆಗಳ ಕೋಡಿ ಹೊಡೆದು ಹಾಳು ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಮುದುವತ್ತಿ ಕೆರೆ- ಕೋನಾ ಪುರ- ಕೋರಗಂಡಹಳ್ಳಿ-ಬೆಗ್ಲಿ ಹೊಸ ಹಳ್ಳಿ-ಛತ್ರಕೋಡಿಹಳ್ಳಿ ಕೆರೆಗಳ ಮೂಲಕ ಕೋಲಾರಮ್ಮ ಅಮಾನಿ ಕೆರೆಗೆ ನೀರು ಹರಿಯಬೇಕು .
ಆದರೆ, ಗುರುತ್ವಾಕ ರ್ಷಣೆ ಮೂಲಕ ಹರಿಯಬೇಕಾಗಿದ್ದ ನೀರಿನ ದಿಕ್ಕನ್ನೇ ಬದಲಿಸಿ ಕೋಡಿ ಹಾಳು ಮಾಡಿ ಹರಿಸುತ್ತಿದ್ದಾರೆ ಎಂದಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾದಲ್ಲಿ ಕೆರೆ ಕೋಡಿ ಹೊಡೆದಿರುವುದರಿಂದ ನೀರು ತೋಟಗಳು, ಮನೆಗಳಿಗೆ ನುಗ್ಗಿ ಹಾನಿಯಾಗುವ ಸಂಭವವು ಇದೆ ಎಂದು ವಕೀಲ ಮುನೇಗೌಡ ಎಚ್ಚರಿಸಿದ್ದಾರೆ.